ಕನ್ನಡಪ್ರಭ ವಾರ್ತೆ ಕಲಬುರಗಿ
ಆಳಂದ ತಾಲೂಕಿನ ನಿಂಬರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ 14 ಲಕ್ಷ ರು. ಮೌಲ್ಯದ ವಾಹನಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ನಿಂಬರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ಭೂಸನೂರ ಗ್ರಾಮದಲ್ಲಿ 30 ಸಾವಿರ ರು. ಮೊತ್ತದ ಬೈಕ್, 4.25 ಲಕ್ಷ ರು. ಮೌಲ್ಯದ ಟ್ರ್ಯಾಕ್ಟರ್, ₹4.65 ಲಕ್ಷ ಟ್ರ್ಯಾಕ್ಟರ್ ಮತ್ತು ವಾರಸುದಾರರಿಲ್ಲದ ₹3.80 ಲಕ್ಷ ಮೌಲ್ಯದ 9 ಬೈಕ್ ಕಳ್ಳನವಾಗಿದ್ದವು. ಈ ಸಂಬಂಧ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಕಲಬುರಗಿ ಹಾಗೂ ನಿಂಬರ್ಗಾ ಪೊಲೀಸ್ ಠಾಣೆಯ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡ ತನಿಖೆ ನಡೆಸಿ ಆಳಂದ ತಾಲೂಕಿನ ಭೂಸನೂರ ಗ್ರಾಮದ ಪೃಥ್ವಿ ಅಲಿಯಾಸ್ ಪೃಥ್ವಿರಾಜ ತಂದೆ ಕೃಷ್ಣಪ್ಪಾ ಬಿಳಗಿ (27), ಮಹಿಬೂಬ ತಂದೆ ನಬಿಸಾಬ ಭಾಗವಾನ (20), ರಾಹುಲ್ ತಂದೆ ಅಶೋಕ ಕ್ಷೇತ್ರಿ (22), ಮುನ್ನಾ ಅಲಿಯಾಸ್ ಮಹ್ಮದ್ ರಫಿ ತಂದೆ ಜೈನೋದ್ದಿನ್ ಭಾಗವಾನ್ (25), ಕರೀಮ್ ತಂದೆ ಇಬ್ರಾಹಿಂಸಾಬ ಭಾಗವಾನ (19), ಅಮೀನ ತಂದೆ ನನ್ನುಸಾಬ ಭಾಗವಾನ (20) ಎಂಬುವವರನ್ನು ವಶಕ್ಕೆ ಪಡೆದು ಭೂಸನೂರ ಗ್ರಾಮದಲ್ಲಿ ಕಳ್ಳತನವಾದ 30 ಸಾವಿರ ರು. ಮೊತ್ತದ ಬೈಕ್, 4.25 ಲಕ್ಷ ರು. ಮೊತ್ತದ ಟ್ರ್ಯಾಕ್ಟರ್ ಇಂಜಿನ್, 4.65 ಲಕ್ಷ ರು. ಮೊತ್ತದ ಟ್ರ್ಯಾಕ್ಟರ್ ಇಂಜಿನ್, 3.80 ಲಕ್ಷ ರು. ಮೊತ್ತದ ವಾರಸುದಾರರಿಲ್ಲದ 9 ಬೈಕ್ ಮತ್ತು 2 ಟ್ರ್ಯಾಕ್ಟರ್ ಟ್ರಾಲಿ ಸೇರಿ 10 ಬೈಕ್, 2 ಟ್ರ್ಯಾಕ್ಟರ್, 3 ಟ್ರೈಲಿ ಸೇರಿದಂತೆ 14 ಲಕ್ಷ ರು. ಮೌಲ್ಯದ ವಾಹನಗಳನ್ನು ಜಪ್ತಿ ಮಾಡಿದ್ದಾರೆ.