ಕನ್ನಡಪ್ರಭ ವಾರ್ತೆ ಕಂಪ್ಲಿ
ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಬುಧವಾರ ರಾತ್ರಿ ಧಾರಾಕಾರ ಮಳೆ ಸುರಿಯಿತು. ಒಟ್ಟಾರೆ 60.80 ಮಿಮೀ ಮಳೆಯಾಗಿರುವ ಕುರಿತು ದಾಖಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಕೃಷಿ ಬೆಳೆಗಳಿಗೆ ಹಾನಿ ಸಂಭವಿಸಿದ್ದು, ಹಲವು ಮನೆ ಹಾಗೂ ರಸ್ತೆಗಳು ಹಾನಿಗೊಳಗಾಗಿವೆ.ಸಣಾಪುರ, ಇಟಗಿ, ಬೆಳಗೋಡ್‌ಹಾಳ್, ಅರಳಿಹಳ್ಳಿ ಸೇರಿ ಅನೇಕ ಗ್ರಾಮಗಳಲ್ಲಿ ಮಳೆ ಹನಿಗೆ ಭತ್ತದ ಬೆಳೆ ನೆಲಕ್ಕುರುಳಿದೆ. ನೀರಿನ ಹೊಳೆ ಹರಿದ ಪರಿಣಾಮವಾಗಿ ನಿಂತಿದ್ದ ಬೆಳೆ ಹಾನಿಗೊಳಗಾದ್ದರಿಂದ ರೈತರು ಆತಂಕಗೊಂಡಿದ್ದಾರೆ.
ಹಂಪಾದೇವನಹಳ್ಳಿ ಗ್ರಾಮದ ನಿವಾಸಿ ಬಿ. ಶಿವರಾಜ ಅವರ ಕಚ್ಚಾಮನೆ ಮೇಲ್ಚಾವಣಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನೊಂದು ಕಚ್ಚಾಮನೆ ಸಂಪೂರ್ಣವಾಗಿ ನೆಲಕ್ಕುರುಳಿದ್ದು, ಮನೆ ಮಾಲೀಕರು ನೆರವಿಗಾಗಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.ಕಂಪ್ಲಿ ತಹಸೀಲ್ದಾರ ಕಚೇರಿ ಆವರಣದಲ್ಲಿ ಮರದ ಟೊಂಗೆ ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಇದರಿಂದ ಕೆಲವು ಗಂಟೆಗಳ ಕಾಲ ಕಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಯಿತು.
ಜವುಕು–ದೇವಲಾಪುರ ಒಳರಸ್ತೆಯಲ್ಲಿ ಕಾನಗುಡ್ಡದ ಮಳೆ ನೀರು ಹೊಳೆಯಂತೆ ಹರಿದು ಭತ್ತದ ಗದ್ದೆಗಳು ತೇಲಿಹೋಗುವ ಪರಿಸ್ಥಿತಿ ನಿರ್ಮಾಣವಾಯಿತು. ರಸ್ತೆ ಮೇಲೆ ಮಣ್ಣು ಹಾಗೂ ಕಸ ಜಮಾಯಿಸಿದ್ದು, ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು.ಬಳ್ಳಾಪುರ–ಚಿಕ್ಕಜಾಯಿಗನೂರು ಮಾರ್ಗದ ನಾರಿಹಳ್ಳದ ಸೇತುವೆ ಮುಳುಗಡೆಗೊಂಡಿದೆ. ಕೆಲ ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು.
ದುಂಡಾಣು ಮಚ್ಚೆ ರೋಗ ಹಬ್ಬುವ ಆತಂಕ:ಕಳೆದ ಹಲವು ದಿನಗಳಿಂದ ಸುರಿದ ನಿರಂತರ ಮಳೆ, ಹವಾಮಾನ ವೈಪರೀತ್ಯದ ಪರಿಣಾಮವಾಗಿ ತಾಲೂಕಿನ ವಿವಿಧ ಭಾಗಗಳಲ್ಲಿನ ಭತ್ತದ ಬೆಳೆ ದುಂಡಾಣು ಮಚ್ಚೆ ವೈರಸ್ (ಎಲೆ ಒಣಗುವ ರೋಗ) ಬಾಧೆಗೆ ಒಳಗಾಗಿದೆ.
ತುಂಗಭದ್ರಾ ನದಿಪಾತ್ರದ ಕಂಪ್ಲಿ, ಬೆಳಗೋಡುಹಾಳ್, ಸಣಾಪುರ, ಇಟಗಿ, ಅರಳಿಹಳ್ಳಿ, ನಂ.2 ಮುದ್ದಾಪುರ ಸೇರಿ ಹಲವು ಹಳ್ಳಿಗಳಲ್ಲಿ ವ್ಯಾಪಕವಾಗಿ ಈ ರೋಗ ಕಾಣಿಸಿಕೊಂಡಿದ್ದು ಇದೀಗ ಬುಧವಾರ ಸುರಿದ ಮಳೆಗೆ ತಾಲೂಕಿನ ಇತರೆ ಗ್ರಾಮಗಳ ಭತ್ತದ ಗದ್ದೆಗಳಿಗೂ ಈ ರೋಗ ಹಬ್ಬುವ ಆತಂಕ ರೈತರಲ್ಲಿ ಹೆಚ್ಚಾಗಿದೆ.