ಬಮೂಲ್‌ನಲ್ಲಿ ೬೦ ಕೋಟಿ ಲಾಭ: ಡಿ.ಕೆ.ಸುರೇಶ್

KannadaprabhaNewsNetwork |  
Published : Mar 16, 2026, 03:00 AM IST
ಪೊಟೋ೧೫ಸಿಪಿಟಿ೯:  ಮಾಗಡಿ ತಾಲೂಕು ಚಿಕ್ಕಮಸ್ಕಲ್ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ರಮೇಶ್ ರವರನ್ನು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಶಾಸಕ ಎಚ್.ಸಿ.ಬಾಲಕೃಷ್ಣ, ಉಪಾಧ್ಯಕ್ಷ ಡಾ.ರಾಜಣ್ಣ ಸನ್ಮಾನಿಸಿದರು. | Kannada Prabha

ಸಾರಾಂಶ

ಕುದೂರು: ನಷ್ಟದಲ್ಲಿದ್ದ ಬೆಂಗಳೂರು ಹಾಲು ಒಕ್ಕೂಟದಲ್ಲಿ ನಾನೇನು ಪವಾಡ ಮಾಡಲಿಲ್ಲ. ಜಡ್ಡುಗಟ್ಟಿದ್ದ ವ್ಯವಸ್ಥೆಗೆ ಚುರುಕು ಮುಟ್ಟಿಸಿ ತಮ್ಮ ತಮ್ಮ ಕೆಲಸ ಮಾಡುವಂತೆ ಮಾಡಿರುವೆ. ಇದರಿಂದಾಗಿ ಒಂದೇ ತಿಂಗಳಲ್ಲಿ ಒಕ್ಕೂಟ ನಷ್ಟದ ಹಾದಿಯಿಂದ ಲಾಭದ ಕಡೆಗೆ ಬಂತು ಎಂದು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು

ಕುದೂರು: ನಷ್ಟದಲ್ಲಿದ್ದ ಬೆಂಗಳೂರು ಹಾಲು ಒಕ್ಕೂಟದಲ್ಲಿ ನಾನೇನು ಪವಾಡ ಮಾಡಲಿಲ್ಲ. ಜಡ್ಡುಗಟ್ಟಿದ್ದ ವ್ಯವಸ್ಥೆಗೆ ಚುರುಕು ಮುಟ್ಟಿಸಿ ತಮ್ಮ ತಮ್ಮ ಕೆಲಸ ಮಾಡುವಂತೆ ಮಾಡಿರುವೆ. ಇದರಿಂದಾಗಿ ಒಂದೇ ತಿಂಗಳಲ್ಲಿ ಒಕ್ಕೂಟ ನಷ್ಟದ ಹಾದಿಯಿಂದ ಲಾಭದ ಕಡೆಗೆ ಬಂತು ಎಂದು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.

ಮಾಗಡಿ ತಾಲೂಕು ಚಿಕ್ಕಮಸ್ಕಲ್ ಗ್ರಾಮದಲ್ಲಿ ಡೇರಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ವರ್ಷ ನವೆಂಬರ್‌ನಲ್ಲಿ ೩ ಕೋಟಿ ಲಾಭ. ಡಿಸೆಂಬರ್ ೧೦ ಕೋಟಿ, ಜನವರಿ ೨೦ ಕೋಟಿ, ಫೆಬ್ರವರಿ ೪೦ ಕೋಟಿ, ಮಾರ್ಚ್ ಅಂತ್ಯದ ವೇಳೆಗೆ ೬೦ ಕೋಟಿ ಲಾಭ ಬರಲಿದೆ. ಈ ೬೦ ಕೋಟಿ ರು.ಗಳನ್ನು ಯುಗಾದಿ ಬೋನಸ್ ಎಂದು ಪ್ರತಿ ಲೀಟರ್‌ಗೆ ಒಂದು ರು.ನಂತೆ ಕಳೆದ ವರ್ಷ ಏಪ್ರಿಲ್ ನಿಂದ ಈ ವರ್ಷ ಮಾರ್ಚ್ ತನಕ ಲೆಕ್ಕ ಹಾಕಿ ರೈತರ ಖಾತೆಗೆ ಹಣ ಹಾಕಲಾಗುತ್ತಿದೆ ಎಂದು ಹೇಳಿದರು.

ಕುಮಾರಸ್ವಾಮಿಯವರಿಗೆ ನಂಬಿಕೆ ಇದೆ ನಿಮಗಿಲ್ಲ:

ಇಡೀ ದೇಶದಲ್ಲೇ ಹಾಲಿಗೆ ಹೆಚ್ಚಿನ ದರ ನೀಡುತ್ತಿರುವುದು ಕರ್ನಾಟಕ. ನನ್ನ ಕಾರ್‍ಯಶೈಲಿಯನ್ನು ಕಂಡು ವಿರೋಧ ಪಕ್ಷದ ಎಚ್.ಡಿ.ಕುಮಾರಸ್ವಾಮಿಯವರು ಡಿ.ಕೆ.ಸುರೇಶ್ ಬಮೂಲ್‌ನಲ್ಲಿ ಏನಾದರೂ ಒಂದು ಕೆಲಸ ಮಾಡಿ ಆ ಸಂಸ್ಥೆಯನ್ನು ಮೇಲೆತ್ತುತ್ತಾನೆ ಎಂದು ಹೇಳಿದ್ದಾರೆ. ವಿರೋಧಪಕ್ಷದವರಿಗೆ ನನ್ನ ಮೇಲೆ ನಂಬಿಕೆ ಇದೆ. ಆದರೆ ಕ್ಷೇತ್ರದಲ್ಲಿ ಇಷ್ಟು ಕೆಲಸ ಮಾಡುತ್ತಿರುವ ನನ್ನ ಮೇಲೆ ಮತದಾರರಾದ ನಿಮಗೆ ನಂಬಿಕೆ ಇಲ್ಲ. ಇದು ನಮ್ಮ ವಿಪರ್‍ಯಾಸ ಎಂದು ವ್ಯಂಗ್ಯವಾಡಿದರು.

ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಹೈನುಗಾರಿಕೆ ಮತ್ತು ರೇಷ್ಮೆ ಬೆಳೆಯುವುದು ನಮ್ಮ ತಾಲೂಕಿನ ರೈತರ ಮುಖ್ಯ ಕಸುಬಾಗಿದೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ಹೈನುಗಾರಿಕೆಯಿಂದ ರೈತರ ಖಾತೆಗೆ ಹಣ ಬರುತ್ತದೆ. ಇದನ್ನು ತಿಂಗಳ ಸಂಬಳದಂತೆ ಪಡೆಯುತ್ತಿರುವ ರೈತ ಮಹಿಳೆಯರಿಗೆ ದೊಡ್ಡ ಸಹಕಾರಿಯಾಗಿದೆ ಎಂದು ಹೇಳಿದರು.

ಅಳೋವರಿಂದ ಕೆರೆಗಳಿಗೆ ನೀರು ಬರುತ್ತಾ?:

ಬಹಳ ಹಿಂದೆಯೇ ನಾನು ಹೇಮಾವತಿ ನದಿ ನೀರು ತರಲು ಮುಂದಾದಾಗ ನನಗೆ ರಾಜಕೀಯ ಪಾಠ ಮಾಡುತ್ತಿದ್ದ ಗುರುಗಳು ದಿಕ್ಕು ತಪ್ಪಿಸಿದರು. ಇದರಿಂದಾಗಿ ನೀರು ತರುವ ಕೆಲಸ ನಿಧಾನವಾಯಿತು. ಅಳುವ ಜನರಿಂದ ನೀರು ತರಲಾಗದು ಎಂದು ನನಗೆ ತಡವಾಗಿ ಅರ್ಥವಾಯಿತು ಎಂದು ಪರೋಕ್ಷವಾಗಿ ಎಚ್.ಡಿ.ಕುಮಾರಸ್ವಾಮಿಯನ್ನು ಛೇಡಿಸಿದರು.

ಎರಡು ಹೋಬಳಿ ಕೆರೆಗಳಿಗೆ ಎತ್ತಿನಹೊಳೆ ನೀರು:

ಮಾಗಡಿ ತಾಲೂಕಿನ ಕೆರೆಗಳಿಗೆ ಶ್ರೀರಂಗ ನೀರಾವರಿ ಯೋಜನೆಯಡಿ ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ಮಾಗಡಿ ಪ್ರಾಂತ್ಯದ ಕೆರೆಗಳಿಗೆ ನೀರು ತರಬೇಕು. ಈ ಮೂಲಕ ಮಾಗಡಿ ಹಸಿರಿನಿಂದ ಕಂಗೊಳಿಸುವಂತಾಬೇಕು. ರೈತರ ಬದುಕು ಹಸನಾಗಬೇಕು ಎಂಬ ಆಸೆಯಿಂದ ಡಿ.ಕೆ.ಸುರೇಶ್ ಅವರೊಂದಿಗೆ ಶ್ರಮಿಸುತ್ತಿದ್ದೇವೆ. ಕುದೂರು ಮತ್ತು ತಿಪ್ಪಸಂದ್ರ ಹೋಬಳಿ ಕೆರೆಗಳಿಗೆ ಎತ್ತಿನಹೊಳೆ ನೀರು ತರಲು ೨೦೦೦ ಕೋಟಿ ರು. ವೆಚ್ಚದಲ್ಲಿ ನೀಲನಕ್ಷೆ ಸಿದ್ದವಾಗಿದೆ ಎಂದು ಬಾಲಕೃಷ್ಣ ತಿಳಿಸಿದರು.

ಕುದೂರಿಗೆ ಬಿಎಂಟಿಸಿ ಬಸ್:

ಇನ್ನೆರೆಡು ತಿಂಗಳಲ್ಲಿ ಕುದೂರು ಗ್ರಾಮದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಮತ್ತು ಬಸ್ ನಿಲ್ದಾಣದ ಶಂಕುಸ್ಥಾಪನೆ ಮಾಡಲಾಗುತ್ತದೆ. ಅದಕ್ಕೆ ಬೇಕಾದ ಜಾಗವೂ ನಿಧಾರವಾಗಿದೆ, ಆ ಸಂದರ್ಭದಲ್ಲಿ ಕುದೂರು ಭಾಗಕ್ಕೆ ಬಿಎಂಟಿಸಿ ಬಸ್ಸುಗಳಿಗೂ ಚಾಲನೆ ನೀಡಲಾಗುತ್ತದೆ. ತಾಲೂಕಿನ ಎಲ್ಲಾ ಕಡೆಗೂ ಬಸ್ ಸೌಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ. ಈ ಉದ್ದೇಶದಿಂದ ಕುದೂರಿನಲ್ಲಿ ನೂತನ ಬಸ್‌ ಡಿಪೋ ಆರಂಭ ಮಾಡುತ್ತಿದ್ದೇವೆ ಎಂದು ಹೇಳಿದರು.

ಮುಖಂಡ ಚಿಕ್ಕಮಸ್ಕಲ್ ಸಿದ್ದಲಿಂಗಪ್ಪ ಮಾತನಾಡಿ, ಹೈನುಗಾರಿಕೆ ರೈತನ ಜೀವನಾಡಿಯಾಗುತ್ತಿದೆ. ಅದರಂತೆ ರೈತರ ಬದುಕು ಮತ್ತಷ್ಟು ಹಸನಾಗಲು ಆದಷ್ಟು ಬೇಗನೇ ಹೇಮಾವತಿ ನದಿನೀರನ್ನು ಕೆರೆಗಳಿಗೆ ಹರಿಸುವಂತಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ಗ್ಯಾರಂಟಿ ಯೋಜನಾ ಅಧ್ಯಕ್ಷ ಟಿ.ರಾಜು ಮಾತನಾಡಿದರು. ಬಮೂಲ್ ಉಪಾಧ್ಯಕ್ಷ ಡಾ.ರಾಜಣ್ಣ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಶೋಕ್, ಬಮೂಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ಮಾಜಿ ಅಧ್ಯಕ್ಷ ಸೋಮಶೇಖರ್, ಮುಖಂಡ ಬಗಿನಗೆರೆ ಕುಮಾರ್, ಶ್ರೀಗಿರಿಪುರ ಪ್ರಕಾಶ್, ಹನುಮಂತಪ್ಪ, ಯೋಜನಾ ಪ್ರಾಧಿಕಾರದ ಸದಸ್ಯ ದೀಪು ಉದ್ದೇಶ್ ಮತ್ತಿತರರು ಹಾಜರಿದ್ದರು.

ಪೊಟೋ೧೫ಸಿಪಿಟಿ೯:

ಮಾಗಡಿ ತಾಲೂಕು ಚಿಕ್ಕಮಸ್ಕಲ್ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ರಮೇಶ್ ಅವರನ್ನು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಶಾಸಕ ಎಚ್.ಸಿ.ಬಾಲಕೃಷ್ಣ, ಉಪಾಧ್ಯಕ್ಷ ಡಾ.ರಾಜಣ್ಣ ಸನ್ಮಾನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರ್ಥಿಕ ಪ್ರಗತೀಲಿ ಮಹಿಳೆ ಪಾತ್ರ ಹಿರಿದು: ಮಂಜುಳಾ ಕುಲಕರ್ಣಿ
ಎಸ್ಸೆಸ್ಸೆಲ್ಸಿ ದಾಖಲೆ ಫಲಿತಾಂಶದತ್ತ ಕುದೂರು ಕೆಪಿಎಸ್ ಶಾಲೆ