ರೋಣ: ತಾಲೂಕಿನಲ್ಲಿ ಮಲಪ್ರಭಾ ಬಲದಂಡೆ ಕಾಲುವೆಗಳ ಮೂಲಕ ರೈತರ ಜಮೀನುಗಳಿಗೆ ನೀರು ಹರಿಸುವ ನಿಟ್ಟಿನಲ್ಲಿ ಉಪ ಕಾಲುವೆಗಳ ನಿರ್ಮಾಣ ಅತೀ ಮುಖ್ಯವಿದ್ದು, ಇದಕ್ಕಾಗಿ ₹ 635 ಕೋಟಿ ವೆಚ್ಚದ ಕ್ರಿಯಾಯೋಜನೆ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.ಅವರು ಭಾನುವಾರ ನವಲಗುಂದ ರಸ್ತೆಯಲ್ಲಿ ಜಲ ಸಂಪನ್ಮೂಲ ಇಲಾಖೆ ಕರ್ನಾಟಕ ನೀರಾವರಿ ಇಲಾಖೆ ವತಿಯಿಂದ ₹ 395 ಲಕ್ಷ ವೆಚ್ಚದಲ್ಲಿ ನೀರಾವರಿ ಪರಿವೀಕ್ಷಣಾ ಮಂದಿರ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಬಳಿಕ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕಿನಲ್ಲಿರುವ ಮಲಪ್ರಭಾ ಬಲದಂಡೆ ಕಾಲುವೆಗಳ ದುರಸ್ತಿಗೆ 2013-18ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಅನುದಾನ ಬಿಡುಗಡೆ ಮಾಡಿ ಕಾಲುವೆ ದುರಸ್ತಿ ಮಾಡಿಸಿದ್ದರು. ಈಗ ಮತ್ತೆ ಕಾಲುವೆಗಳು ಹದಗೆಟ್ಟಿದ್ದು ಮತ್ತೆ ದುರಸ್ತಿಗೆ ₹ 30 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. 18 ವರ್ಷದಿಂದ ನನೆಗುದಿಗೆ ಬಿದ್ದಿದ್ದ ಸಿಂಗಟಾಲೂರ ಏತ ನೀರಾವರಿ ಯೋಜನೆಯನ್ನು ಪುನಶ್ಚೇತನಗೊಳಿಸಿ ರೈತರಿಗೆ ಉಪಯೋಗವಾಗುವಲ್ಲಿ ಯೋಜನೆ ಸಾಕಾರಗೊಳಿಸಲಾಗಿದೆ. ಆ ಭಾಗ ರೈತ ಬದುಕು ಈಗ ನಂದನವನವಾಗಿದೆ. ಅದೇ ಮಾದರಿಯಲ್ಲಿ ರೋಣ ತಾಲೂಕಿನಲ್ಲಿ ಕಾಲುವೆಗಳ ದುರಸ್ತಿ ಮಾಡಿ, ರೈತರ ಬಾಳನ್ನು ಹಸನಗೊಳಿಸುವಲ್ಲಿ ಮಲಪ್ರಭಾ ಬಲದಂಡೆ ಕಾಲುವೆಯಿಂದ ನೀರಾವರಿ ಸೌಲಭ್ಯ ಕಲ್ಪಿಸಲಾಗುವದು. ಇದರ ಜೊತೆಗೆ ಅಬ್ಬಿಗೇರಿ, ಜಕ್ಕಲಿ, ಹಾಳಕೆರೆ ಸೇರಿದಂತೆ ಅನೇಕ ಕಡೆಗಳಲ್ಲಿ ಕೆರೆಗಳಿಗೆ ನೀರು ತುಂಬಿಸುವಲ್ಲಿ ₹45 ಕೋಟಿ ವೆಚ್ಚದಲ್ಲಿ ಕ್ರಿಯಾಯೋಜನೆ, ಗಜೇಂದ್ರಗಡ ಭಾಗದಲ್ಲಿನ ಕೆರೆಗಳಿಗೆ ನೀರು ತುಂಬಿಸುವಲ್ಲಿ ₹112 ಕೋಟಿ ವೆಚ್ಚದಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ನಾನು 1991ರಲ್ಲಿ ಮೊದಲನೆ ಅವಧಿಯಲ್ಲಿ ಶಾಸಕನಿದ್ದಾಗ ಎಸ್. ಬಂಗಾರಪ್ಪನವರು ಮುಖ್ಯಮಂತ್ರಿ ಇದ್ದರು, ಅವರೇ ರೋಣದಲ್ಲಿ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಆಗ ಭವ್ಯವಾಗಿ ನಿರ್ಮಾಣಗೊಂಡ ಕಟ್ಟಡ ಈಗ ಶಿಥಿಲವಾಗಿದೆ. ಅದನ್ನು ಮತ್ತೆ ಮರು ನಿರ್ಮಾಣ ಮಾಡುವಲ್ಲಿ ₹ 395 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಅಡುಗೆ ಕೋಣೆ, ಮಿಟಿಂಗ್ ಹಾಲ್, ಊಟದ ಹಾಲ್ ಸೇರಿದಂತೆ
12 ಕೊಠಡಿಗಳುಳ್ಳ ಒಂದು ಮಹಡಿ ಕಟ್ಟಡ ನಿರ್ಮಿಸಲಾಗುವುದು. ನಿಗದಿಪಡಿಸಿದಂತೆ 11 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ, ಗುಣ ಮಟ್ಟದ ಕಾಮಗಾರಿ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಭಿವೃದ್ಧಿ ಬದ್ಧವಿದೆ. ಅಭಿವೃದ್ಧಿಗೆ ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಹೇಳುವ ವಿರೋಧ ಪಕ್ಷದವರಿಗೆ ಕ್ಷೇತ್ರದಲ್ಲಾಗುವ ಅಭಿವೃದ್ಧಿ ಸಾಕ್ಷೀಕರಿಸಬಹುದಾಗಿದೆ. ಹಣಕಾಸು ವ್ಯವಸ್ಥೆ ಸುಧಾರಿಸಿದ್ದು, ಅಭಿವೃದ್ಧಿ ಕಾರ್ಯಕ್ಕೆ ಯಾವುದೇ ಅಡತಡೆಯಾಗುವುದಿಲ್ಲ ಎಂದರು.ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ ಪಾಟೀಲ, ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಯಚ್ಚರಗೌಡ ಗೋವಿಂದಗೌಡ್ರ, ಪುರಸಭೆ ಅಧ್ಯಕ್ಷೆ ಬಸಮ್ಮ ಕೊಪ್ಪದ, ಉಪಾಧ್ಯಕ್ಷ ಹನಮಂತಪ್ಪ ತಳ್ಳಿಕೇರಿ, ರೋಣ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ವೀರಣ್ಣ ಶೆಟ್ಟರ್, ವ್ಜಿ.ಆರ್. ಗುಡಿಸಾಗರ, ಬಸವರಾಜ ಜಗ್ಗಲ, ಮಾರುತಿ ಕಲ್ಲೋಡ್ಡರ, ಉಮೇಶ ಹೂಗಾರ ಯೂಸೂಫ ಇಟಗಿ, ಮುತ್ತಣ್ಣ ಸಂಗಳದ, ನೀರಾವರಿ ಇಲಾಖೆ ಎಇಇ ಜಗದೀಶ ಬನ್ನಿಕೊಪ್ಪ, ಸಹಾಯಕ ಅಭಿಯಂತರ ಕೆ.ಎಸ್. ಮೆಣಸಿನಕಾಯಿ ಉಪಸ್ಥಿತರಿದ್ದರು.