65 ಕೋಟಿ ರು. ವೆಚ್ಚದಲ್ಲಿ ಸಿಪಿಸಿ ಪಾಲಿಟೆಕ್ನಿಕ್ ಅಭಿವೃದ್ಧಿ: ಡಾ.ಎಂ.ಸಿ. ಸುಧಾಕರ್

KannadaprabhaNewsNetwork |  
Published : Aug 01, 2024, 12:21 AM IST
6 | Kannada Prabha

ಸಾರಾಂಶ

ಸಿಪಿಸಿ ಕಾಲೇಜಿಗೂ ವಿಸ್ತೃತ 65 ಕೋಟಿ ರು. ವೆಚ್ಚದಲ್ಲಿ ಆಧುನಿಕ ಸ್ಪರ್ಶ ನೀಡಲು ಚಿಂತಿಸಲಾಗಿದೆ. ಮತ್ತೊಂದೆಡೆ ಕಾಲೇಜಿನಲ್ಲಿ ಎಐ ಮತ್ತು ಸೈಬರ್ ಕುರಿತ ಎರಡು ಹೊಸ ಕೋರ್ಸ್ ಆರಂಭಿಸಲು ಚಿಂತಿಸಿರುವುದರಿಂದ ಕಾಲೇಜಿಗೆ ನೂತನ ತಂತ್ರಜ್ಞಾನ ಅಳವಡಿಸಲಾಗುತ್ತದೆ. ಹೀಗೆ ರಾಜ್ಯದ 106 ಪಾಲಿಟೆಕ್ನಿಕ್ ಗಳ ವರದಿ ತೆಗೆದುಕೊಳ್ಳುತ್ತಿದ್ದೇನೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಸಿಪಿಸಿ ಪಾಲಿಟೆಕ್ನಿಕ್ ಅಭಿವೃದ್ಧಿಗೆ ವಿಸ್ತೃತ 65 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಸ್ಪರ್ಶ ನೀಡಲು ಚಿಂತಿಸಿದ್ದು, ಈಗಾಗಲೇ ಸಿವಿಲ್ ಎಂಜಿನಿಯರ್ ಕಳುಹಿಸಿ ವರದಿ ಸಿದ್ಧಪಡಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು.

ನಗರದ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ನ 70ನೇ ವರ್ಷದ ಅಮೃತ ಮಹೋತ್ಸವ ವರ್ಷಾಚರಣೆಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಪಾಲಿಟೆಕ್ನಿಕ್ ಗಳ ಸ್ಥಿತಿಗತಿ ವರದಿ ಪಡೆದುಕೊಳ್ಳುತ್ತಿದ್ದೇನೆ. ಮೈಸೂರಿನ ಸಿಪಿಸಿ ಪಾಲಿಟೆಕ್ನಿಕ್ ಗೂ ಹೊಸ ಸ್ಪರ್ಶ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಸಿಪಿಸಿ ಕಾಲೇಜಿಗೂ ವಿಸ್ತೃತ 65 ಕೋಟಿ ರು. ವೆಚ್ಚದಲ್ಲಿ ಆಧುನಿಕ ಸ್ಪರ್ಶ ನೀಡಲು ಚಿಂತಿಸಲಾಗಿದೆ. ಮತ್ತೊಂದೆಡೆ ಕಾಲೇಜಿನಲ್ಲಿ ಎಐ ಮತ್ತು ಸೈಬರ್ ಕುರಿತ ಎರಡು ಹೊಸ ಕೋರ್ಸ್ ಆರಂಭಿಸಲು ಚಿಂತಿಸಿರುವುದರಿಂದ ಕಾಲೇಜಿಗೆ ನೂತನ ತಂತ್ರಜ್ಞಾನ ಅಳವಡಿಸಲಾಗುತ್ತದೆ. ಹೀಗೆ ರಾಜ್ಯದ 106 ಪಾಲಿಟೆಕ್ನಿಕ್ ಗಳ ವರದಿ ತೆಗೆದುಕೊಳ್ಳುತ್ತಿದ್ದೇನೆ ಎಂದು ಅವರು ತಿಳಿಸಿದರು.

ಈ ಎಲ್ಲಾ ಪಾಲಿಟೆಕ್ನಿಗ್ ಅಭಿವೃದ್ಧಿ ಪಡಿಸಲು ಶ್ರಮಿಸತ್ತೇನೆ. ಚಿಂತಾಮಣಿಯಲ್ಲಿ ನಮ್ಮ ತಾತಾ ಅವರು ಕಟ್ಟಿಸಿರುವ ಪಾಲಿಟೆಕ್ನಿಕ್ ಗೆ 75 ವರ್ಷ ಪೂರೈಸಿದ್ದು, ನನ್ನ ಕ್ಷೇತ್ರದ ಈ ಪಾಲಿಟೆಕ್ನಿಕ್ ಗೆ ಕಾಯಕಲ್ಪ ಮಾಡಬೇಕು ಎಂದು ಮಹಾದಾಸೆಯಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಯಾವುದೇ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಿದಾಗ ಎಲ್ಲಾ ರೀತಿಯ ಪ್ರೋತ್ಸಾಹ ನೀಡಿದ್ದಾರೆ. ಅವರು ತಿಳಿಸಿದಂತೆ ಮಹಾರಾಜರು ಕಟ್ಟಿಸಿರುವ ಮಹಾರಾಣಿ ವಿಜ್ಞಾನ ಕಾಲೇಜಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿ ಪರಿಶೀಲಿಸಿ, ನಂತರ ಉತನ್ನತೀಕರಿಸಲು ಮುಂದಾಗಿದ್ದೇವೆ ಎಂದರು.

ಮಹಾರಾಣಿ ಕಾಲೇಜು ಪಾರಂಪರಿಕ ಕಟ್ಟಡವಾದ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಿಸಲು ಪಾರಂಪರಿಕ ತಜ್ಞರ ಸಲಹೆ ತೆಗೆದುಕೊಂಡಿದ್ದು, 55 ಕೋಟಿ ರೂಅನುದಾನ ಬಿಡುಗಡೆ ಮಾಡಲು ನಿರ್ಧರಿಸಿದ್ದು, 5 ಕೋಟಿ ವೆಚ್ಚದ ಕಾಮಗಾರಿಗೆ ಮುಖ್ಯಮಂತ್ರಿಗಳು ಸದ್ಯದಲ್ಲಿಯೇ ಶಂಕುಸ್ಥಾಪನೆ ನೆರವೇರಿಸುವುದಾಗಿ ಅವರು ಹೇಳಿದರು.

ಬಾಕಿ 50 ಕೋಟಿ ವೆಚ್ಚದಲ್ಲಿ ಎರಡು ಸಾವಿರ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ ವಿದ್ಯಾರ್ಥಿ ವಿದ್ಯಾರ್ಥಿನಿಲಯ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಶಾಸಕ ತನ್ವೀರ್ ಸೇಠ್ ಮಾತನಾಡಿ, ಪಾಲಿಟೆಕ್ನಿಕ್ ಗಳು ಬಡವರ ಪಾಲಿನ ಎಂಜಿನಿಯರಿಂಗ್ ಕಾಲೇಜುಗಳಾಗಿವೆ. ಮೈಸೂರಿಗೆ ಒಂದು ಮಹಿಳಾ ಪಾಲಿಟೆಕ್ನಿಕ್ ಬೇಕೆಂದು ಬೇಡಿಕೆ ಸಲ್ಲಿಸಿದೆ. ಅದು ಹಣಕಾಸು ಇಲಾಖೆಗೆ ಹೋಗಿದ್ದು, ಅದಕ್ಕಾಗಿ ಸ್ಥಳ ನಿಯೋಜನೆ ಮಾಡಿರುವುದಾಗಿ ಹೇಳಿದರು.

ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಹಳೆಯ ಯಂತ್ರಗಳಿದ್ದು, ಹೊಸ ಕಾರ್ಯಕ್ರಮಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು. ಒಂದು ಅಕ್ಷರವನ್ನೂ ಓದಿಲ್ಲದೇ ಇರುವವರು ಶಿಕ್ಷಣದ ನೀತಿಗಳ ಬಗ್ಗೆ ಮಾತನಾಡುತ್ತಾರೆ. ತಾಂತ್ರಿಕ ತಂಡವನ್ನು ರಚಿಸಿ ಅಗತ್ಯ ಸೂಚನೆ ಸಲಹೆ ಪಡೆದುಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.

ಸಿಪಿಸಿ ಕಾಲೇಜು ನಿರ್ಮಾಣಕ್ಕೆ ಸ್ಥಳ ದಾನ ನೀಡಿದ ಸಿ. ಪೆರುಮಾಳ್ ಚೆಟ್ಟಿ ಅವರ ಪುತ್ರ ಪಿ. ಧರ್ಮರಾಜ್ ಚೆಟ್ಟಿ ಮತ್ತು ಮೊಮ್ಮಗಳಾದ ಜೆ. ಲೋಕೇಶ್ವರಿ ಅವರನ್ನು ಅಭಿನಂದಿಸಲಾಯಿತು.

ಈ ವೇಳೆ ತಾಂತ್ರೀಕ ಶಿಕ್ಷಣ ಇಲಾಖೆ ಹೆಚ್ಚುವರಿ ನಿರ್ದೇಶಕ ಕೆ.ಎಂ. ಸುರೇಶ್ ಕುಮಾರ್, ಪ್ರಾಂಶುಪಾಲ ಎಂ. ಪ್ರಕಾಶ್, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎನ್.ಎಸ್. ಬಸವರಾಜು ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ
ಚಳಿ ಹೆಚ್ಚಿದಂತೆ ಏರುತ್ತಿದೆ ಮೊಟ್ಟೆ ದರ