ಕನ್ನಡಪ್ರಭ ವಾರ್ತೆ ಶಿವಮೊಗ್ಗ
ದೇಶದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಆಶಾದಾಯಕವಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ.ಕೆ.ಎ.ವಿಷ್ಣುಮೂರ್ತಿ ಹೇಳಿದರು.ಇಲ್ಲಿನ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಕುವೆಂಪು ವಿಶ್ವವಿದ್ಯಾಲಯ ಅರ್ಥಶಾಸ್ತ್ರ ಅಧ್ಯಾಪಕರ ಸಂಘ, ಕುವೆಂಪು ವಿಶ್ವವಿದ್ಯಾಲಯ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ಅಧ್ಯಾಪಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕೇಂದ್ರ ಬಜೆಟ್ 2024-25 ಒಂದು ವಿಶ್ಲೇಷಣೆ ಕುರಿತು ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರವು ಉದ್ಯೋಗ ಸೃಷ್ಟಿಗೆ ಪೂರಕವಾಗಿ ಅಂಶಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿದೆ ಎಂದು ತಿಳಿಸಿದರು.ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಕೇಂದ್ರ ಬಜೆಟ್‌ನ ಆರ್ಥಿಕ ವಹಿವಾಟಿನಲ್ಲಿ ಸಾಲ ಪ್ರಮಾಣ ವನ್ನು ತಗ್ಗಿಸುವಲ್ಲಿ ಹೆಚ್ಚಿನ ಒತ್ತು ನೀಡಬೇಕಿತ್ತು. ಉದ್ಯೋಗ ಸೃಷ್ಟಿ ಹಾಗೂ ಕೌಶಲ್ಯವೃದ್ಧಿಗೆ ಆರ್ಥಿಕ ಬಜೆಟ್‌ನಲ್ಲಿ ಉಲ್ಲೇಖಿಸಿರುವುದು ಉತ್ತಮ ಎಂದು ಅನಿಸಿಕೆ ವ್ಯಕ್ತಪಡಿಸಿದರು.ವಿಶ್ರಾಂತ ಪ್ರಾಚಾರ್ಯ ಪ್ರೊ. ಬಿ.ಎಂ.ಕುಮಾರಸ್ವಾಮಿ ಕೇಂದ್ರ ಬಜೆಟ್ 2024 ಕುರಿತು ಮಾತನಾಡಿ, 10 ವರ್ಷ ಗಳಲ್ಲಿ ಆದಾಯ ಹಾಗೂ ವೆಚ್ಚಗಳ ವ್ಯತ್ಯಾಸ ಕಡಿಮೆಗೊಳಿಸುವಲ್ಲಿ ಗಣನೀಯ ಬದಲಾವಣೆಗೆ ಪ್ರಯತ್ನಿಸಲಾಗಿದೆ. ವ್ಯತ್ಯಾಸ ಕಡಿಮೆ ಆಗುತ್ತಿರುವುದರಿಂದ ದೇಶದ ಆರ್ಥಿಕ ವಹಿವಾಟು ಸರಿಯಾದ ದಾರಿಯಲ್ಲಿದೆ ಎಂದು ಅಭಿಪ್ರಾಯಪಟ್ಟರು.ದೇಶೀಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ, ಕುವೆಂಪು ವಿಶ್ವವಿದ್ಯಾಲಯ ಅರ್ಥಶಾಸ್ತ್ರ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ಎ.ಟಿ.ಪದ್ಮೇಗೌಡ, ಕುವೆಂಪು ವಿಶ್ವವಿದ್ಯಾಲಯ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ಅಧ್ಯಾಪಕರ ಸಂಘದ ಡಾ. ಎಸ್.ಎಚ್.ಪ್ರಸನ್ನ, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು, ಅಧ್ಯಾಪಕರು ಇದ್ದರು. ನಾರಾಯಣರಾವ್‌ಗೆ ನುಡಿನಮನ:ಅರ್ಥಶಾಸ್ತ್ರಜ್ಞ, ಸಂಶೋಧನಾ ಮಾರ್ಗದರ್ಶಕ ಮತ್ತು ನ್ಯಾಕ್ ಸಲಹೆಗಾರ ಡಾ. ಗೌಡಗೆರೆ ನಾರಾಯಣ ರಾವ್ ಅವರಿಗೆ ನುಡಿನಮನ ಸಲ್ಲಿಸಲಾಯಿತು. ಶಿವಮೊಗ್ಗ ವಿವಿಧ ಶಿಕ್ಷಣ ಸಂಸ್ಥೆಗಳು, ವಿವಿಧ ಸಂಘ ಸಂಸ್ಥೆಗಳು ಮತ್ತು ಡಾ. ಗೌಡಗೆರೆ ನಾರಾಯಣರಾವ್ ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿ ಬಳಗದಿಂದ ನೂರಾರು ಜನರು ಭಾಗವಹಿಸಿದ್ದರು. ಗಣ್ಯರು ಹಾಗೂ ಉಪನ್ಯಾಸಕರು ನಾರಾಯಣರಾವ್ ಅವರ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.