ಕನ್ನಡಪ್ರಭ ವಾರ್ತೆ ಪುತ್ತೂರು
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪುತ್ತೂರು ತಾಲೂಕಿನ ಗ್ರಾಮೀಣ ಭಾಗದ ಹಲವು ಪ್ರದೇಶಗಳಲ್ಲಿ ಧರೆ ಕುಸಿತಗೊಂಡು ರಸ್ತೆಗಳಿಗೆ ಹಾಗೂ ಅಡಕೆ ತೋಟಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಪರ್ಪುಂಜ ಎಂಬಲ್ಲಿ ಮೋರಿ ಸಹಿತ ರಸ್ತೆ ಕುಸಿದು ವಾಹನ ಸಂಚಾರ ಮತ್ತು ಜನ ಸಂಚಾರಕ್ಕೆ ತೊಡಕುಂಟಾಗಿತ್ತು. ಪಕ್ಕದ ಶೇಖಮಲೆ ಎಂಬಲ್ಲಿರುವ ನೂತನ ಸೇತುವೆಯ ಬಳಿಯಲ್ಲಿ ರಸ್ತೆ ಬದಿ ಕುಸಿಯುತ್ತಿದೆ. ನದಿಯ ಬದಿಯಲ್ಲಿಯೇ ಸಾಗುತ್ತಿರುವ ಈ ರಸ್ತೆಯು ಹಲವು ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ನೂತನ ಸೇತುವೆ ನಿರ್ಮಾಣದ ವೇಳೆಯಲ್ಲಿ ರಸ್ತೆಯ ಬದಿಯಲ್ಲಿ ತಡೆಗೋಡೆ ನಿರ್ಮಾಣ ಮಾಡದಿರುವ ಕಾರಣ ಮಳೆ ನೀರು ಇಲ್ಲಿ ರಸ್ತೆಯ ಮೇಲೆಯೇ ಹರಿದು ಹೋಗುತ್ತಿದೆ. ಇದರಿಂದಾಗಿ ರಸ್ತೆಯ ಮಣ್ಣು ಸವೆದು ಕುಸಿಯುತ್ತಿದೆ. ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ತಾಲೂಕಿನ ಕೌಡಿಚ್ಚಾರ್ ಸಮೀಪದ ಮಡ್ಯಂಗಳ ಎಂಬಲ್ಲಿ ಸುಮಾರು ೪ ಕಡೆಗಳಲ್ಲಿ ಧರೆ ಕುಸಿತಗೊಂಡು ರಸ್ತೆಗೆ ಬಿದ್ದು ಸಂಚಾರಕ್ಕೆ ಅಡಚಣೆಯಾಗಿತ್ತು. ಮಣ್ಣು ತೆರವುಗೊಳಿಸುವ ತನಕ ಪೊಲೀಸರು ಬದಲಿ ಮಾರ್ಗಗಳಲ್ಲಿ ವಾಹನ ಸಂಚಾರದ ವ್ಯವಸ್ಥೆ ಮಾಡಿದ್ದರು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪುತ್ತೂರು ತಾಲೂಕಿನ ಪುತ್ತೂರು ಪಾಣಾಜೆ ಸಂಪರ್ಕದ ನಿಡ್ಪಳ್ಳಿ ಎಂಬಲ್ಲಿ ಧರೆ ಕುಸಿತಗೊಂಡು ಅಡಕೆ ತೋಟಗಳಿಗೆ ಕೆಸರು ನೀರು ನುಗ್ಗಿ ಹಾನಿಯಾಗಿದೆ. ಇಲ್ಲಿನ ಕೂಟೇಲು ಎಂಬಲ್ಲಿನ ನಿವಾಸಿ ಬಾಬು ಪಾಟಾಳಿ ಎಂಬವರ ಜಾಗದ ಪಕ್ಕದ ತೋಡಿಗೆ ತೋಟದ ಬದಿಯಲ್ಲಿನ ಧರೆಯೊಂದು ಸಂಪೂರ್ಣ ಕುಸಿದು ಬಿದ್ದು ಅಡಕೆ ತೋಟಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ತೋಡಿನ ಬದಿಯಲ್ಲಿದ್ದ ಕಾಲು ದಾರಿಯೂ ಕುಸಿದು ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಕೋರಂಗ ಎಂಬಲ್ಲಿ ರಸ್ತೆ ಸಂಪೂರ್ಣ ಕುಸಿತಗೊಂಡಿದ್ದು, ಸಂಚಾರ ಸ್ಥಗಿತಗೊಂಡಿತ್ತು. ಸಂಪ್ಯ ಎಂಬಲ್ಲಿರುವ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಹಿಂಭಾಗದಲ್ಲಿನ ಆವರಣ ಗೋಡೆ ಕುಸಿದು ಪೊಲೀಸ್ ಸಿಬ್ಬಂದಿ ಕಾರು ಮತ್ತು ಬೈಕ್ ಸೇರಿದಂತೆ ೬ ವಾಹನಗಳಿಗೆ ಹಾನಿಯಾಗಿದೆ. ಅಲ್ಲದೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡು ತಂದಿರಿಸಲಾಗಿದ್ದ ೫ ದ್ವಿಚಕ್ರ ವಾಹನಗಳಿಗೆ ಹಾನಿಯಾಗಿರುವುದಾಗಿ ತಿಳಿದು ಬಂದಿದೆ.