ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸಂಕಷ್ಟದಲ್ಲಿರುವ ರೋಗಿಗಳಿಗೆ ತಮ್ಮ ರಕ್ತ ನೀಡಿ ಜೀವ ಉಳಿಸಲು ರೆಡ್‌ಕ್ರಾಸ್ ಸಂಸ್ಥೆಯೊಂದಿಗೆ ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯ ಕೈ ಜೋಡಿಸುವಂತೆ ಜಿಲ್ಲಾಧಿಕಾರಿ ಹಾಗೂ ರೆಡ್‌ಕ್ರಾಸ್ ಜಿಲ್ಲಾಧ್ಯಕ್ಷ ಪಿ.ಎನ್.ರವೀಂದ್ರ ಮನವಿ ಮಾಡಿದರು.ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿಯ ವತಿಯಿಂದ ಬುಧವಾರ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿ, ಸಾವು ನೋವುಗಳಿಗೆ ಒಳಗಾಗುತ್ತಿದ್ದ ದುರ್ದೈವಿಗಳ ಚಿಕಿತ್ಸೆ ಮತ್ತು ಸೇವೆಗಾಗಿ ರೆಡ್ ಕ್ರಾಸ್ ಸಂಸ್ಥೆ ಸ್ಥಾಪನೆಗೊಂಡಿದೆ. ಅರ್ಹ ವ್ಯಕ್ತಿಗಳಿಂದ ರಕ್ತ ಸಂಗ್ರಹಿಸಿ ಸಂಕಷ್ಟದಲ್ಲಿರುವ ರೋಗಿಗಳಿಗೆ ರಕ್ತ ನೀಡುವ ಅಪರೂಪ ಸೇವೆಯ ಜಾಗತಿಕ ಮಟ್ಟದಲ್ಲಿ ಸಲ್ಲಿಸುತ್ತಿರುವ ಸಂಸ್ಥೆ ಸೇವೆ ಶ್ಲಾಘನೀಯ ಎಂದರು. ಸೇವೆಗೆ ಸದಾಸಿದ್ಧ ರೆಡ್‌ಕ್ರಾಸ್
ಯಾವುದೇ ತಾರತಮ್ಯವಿಲ್ಲದೆ ರೋಗಿಗಳ ಸೇವೆ ಮತ್ತು ವಿಪತ್ತು ನಿರ್ವಹಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬೃಹತ್ ಮಾನವ ಸೈನ್ಯವೇ ರೆಡ್ ಕ್ರಾಸ್, ಇದು ಸೇವೆಗೆ ಸದಾ ಸಿದ್ದವಾಗಿರುತ್ತದೆ. ಇಂತಹ ಮಾನವೀಯ ಸಂಸ್ಥೆಯನ್ನು ಈಗ ಕಟ್ಟಿ ಬೆಳೆಸುವುದು ಸುಲಭ ಕಾರ್ಯವಲ್ಲ. ಈ ಸೇವಾ ಸಂಸ್ಥೆ ಕಟ್ಟಿ ಬೆಳೆಸಿ ಮುನ್ನಡಿಸುತ್ತಿರುವ ಮಹನೀಯರನ್ನು ನಾವೆಲ್ಲರೂ ಸ್ಮರಿಸಬೇಕು. ಯುವ ಜನಾಂಗದಲ್ಲಿ ಸೇವಾ ಭಾವನೆಯನ್ನು ಹುಟ್ಟಿ ಹಾಕುವ ಆಶಯ ಹೊಂದಿರುವ ರೆಡ್ ಕ್ರಾಸ್ ಸಂಸ್ಥೆ ವಿದ್ಯಾರ್ಥಿ ಹಾಗೂ ಯುವ ಸಮುದಾಯದ ಕೈಜೋಡಿಸುವುದು ಅಪೇಕ್ಷಣೀಯ ಎಂದರು. ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ ಮರು ವರ್ಷವೇ 2008ರಲ್ಲಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯನ್ನು ಸ್ಥಾಪಿಸಿ ಮುನ್ನಡೆಸಿಕೊಂಡು ಬರುತ್ತಿರುವ ಆಡಳಿತ ಮಂಡಳಿ, ಸದಸ್ಯರು, ಹಿರಿಯರು, ಅಧಿಕಾರಿಗಳು ಸಿಬ್ಬಂದಿ ಹಾಗೂ ರಕ್ತದಾನಿಗಳನ್ನು ನಾನು ಅಭಿನಂದಿಸುತ್ತೇನೆ. ಇಲ್ಲಿಯವರೆಗೂ ಸುಮಾರು 88,500 ಯುನಿಟ್ ಗಳ ರಕ್ತ ಸಂಗ್ರಹಿಸಿ ಸಂಕಷ್ಟದಲ್ಲಿರುವವರಿಗೆ ರಕ್ತ ನೀಡುತ್ತಿರುವುದು ಮತ್ತು ಕೊರೋನ ಸಂಕಷ್ಟ ಸಂದರ್ಭದಲ್ಲಿ ವಿಪತ್ತು ನಿರ್ವಹಣೆ ಚಟುವಟಿಕೆಗಳು, ಮಾಸ್ಕ್, ಸ್ಯಾನಿಟೈಸರ್, ಆಹಾರ ಕಿಟ್ಟುಗಳನ್ನು ಇಡೀ ಜಿಲ್ಲೆಯಲ್ಲಿ ವಿತರಿಸಿರುವುದು ಶ್ಲಾಘನೀಯ ಎಂದರು. ಯುವ ರೆಡ್‌ಕ್ರಾಸ್ ಚಟುವಟಿಕೆಕಾಲೇಜುಗಳಲ್ಲಿ ಯುವ ರೆಡ್‌ಕ್ರಾಸ್ ಚಟುವಟಿಕೆಗಳು ನಡೆಯುತ್ತಿದ್ದು, ಪ್ರಥಮ ಚಿಕಿತ್ಸೆ ಅರವಿನ ಶಿಬಿರಗಳು, ಆರೋಗ್ಯ ತಪಾಸಣೆ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರಗಳು ರೆಡ್ ಕ್ರಾಸ್ ನಡೆಸುತ್ತಿದೆ. ರಾಜ್ಯದಲ್ಲಿ ಭಾರತೀಯ ರೆಡ್ ಕ್ರಾಸ್ ರಕ್ತ ನಿಧಿ 10 ಕೇಂದ್ರಗಳಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ರೆಡ್ ಕ್ರಾಸ್ ಇಡೀ ರಾಜ್ಯದಲ್ಲಿ ಅತ್ಯಂತ ಕಡಿಮೆ ಬೆಲೆಗೆ ರಕ್ತವನ್ನು ವಿತರಿಸುತ್ತಿದೆ. ಹೆಚ್ಐವಿ ಸೋಂಕಿತರು, ಡಯಾಲಿಸಿಸ್, ತಲೆ ಸೀನಿಯ ಹಾಗೂ ಆರ್ಥಿಕವಾಗಿ ದುರ್ಬಲ ರೋಗಿಗಳಿಗೆ ಉಚಿತವಾಗಿ ರಕ್ತ ವಿತರಿಸುತ್ತಿರುವುದು ಅನುಸರಣೆಯ ಕಾರ್ಯವಾಗಿದೆ ಎಂದರುಸೇವಾಕರ್ತರಿಗೆ ಪುರಸ್ಕಾರ
ಇದೇ ವೇಳೆ ಆರೋಗ್ಯ ಪರ ಸೇವಾ ಕಾರ್ಯಗಳನ್ನು ಮಾಡಿರುವಂತಹ ಡಾ.ವೆಂಕಟರಾಮಯ್ಯ, ಡಾ.ಮಧುಕರ್, ನಾರಾಯಣಸ್ವಾಮಿ ,ಉತ್ತಮ್ ಚಂದ್ ಜೈನ್ ರನ್ನು ಗುರ್ತಿಸಿ ರೆಡ್‌ಕ್ರಾಸ್ ವತಿಯಿಂದ ಬೆಳ್ಳಿ ಪದಕ, ಅಭಿನಂದನಾ ಪತ್ರವನ್ನು ನೀಡಿ ಪುರಸ್ಕಾರಿಸಲಾಯಿತು.ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್, ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಡಾ.ಬಾಬುರೆಡ್ಡಿ, ಉಪಾಧ್ಯಕ್ಷ ಡಾ.ಕೋಡಿರಂಗಪ್ಪ, ಖಜಾಂಚಿ ಎಂ.ಜಯರಾಮ್, ಕಾರ್ಯದರ್ಶಿ ಬಿ.ಎನ್.ರವಿಕುಮಾರ್, ಡಾ.ಕೆ.ಪಿ.ಶ್ರೀನಿವಾಸಮೂರ್ತಿ, ಡಾ.ಮಧುಕರ್, ಉತ್ತಮ್ ಚಂದ್ ಜೈನ್,ಉನ್ನತಿ ವಿಶ್ವನಾಥ್,ಆಡಳಿತ ಮಂಡಲಿಯ ಸದಸ್ಯರು, ತಾಲೂಕು ಕಾರ್ಯದರ್ಶಿಗಳು, ಮತ್ತಿತ್ತರು ಹಾಜರಿದ್ದರು.