ಕುಮಟಾ: ಜಿಲ್ಲೆಯ ಸಮಗ್ರ ಅಭಿವೃದ್ಧಿ ಮತ್ತು ಸಾಮಾಜಿಕ ಸುಧಾರಣೆಗೆ ಪತ್ರಕರ್ತರು ಜನಪ್ರತಿನಿಧಿಗಳೊಟ್ಟಿಗೆ ಒಗ್ಗೂಡಿ ಶ್ರಮಿಸಬೇಕಾದ ಅಗತ್ಯವಿದೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.
ಇಲ್ಲಿನ ಸರಸ್ವತಿ ಪಿಯು ಕಾಲೇಜಿನಲ್ಲಿ ಮಂಗಳವಾರ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಮುಖ್ಯವಾಗಿ ಮೀನುಗಾರಿಕೆ ವಿವಿಯಂತಹ ಶೈಕ್ಷಣಿಕ ಅಭಿವೃದ್ಧಿ, ಆರೋಗ್ಯ ಸೌಲಭ್ಯಗಳ ಬಗ್ಗೆ ಸ್ಥಳೀಯವಾಗಿ ಮಾಧ್ಯಮಗಳು ಗಟ್ಟಿಯಾಗಿ ಧ್ವನಿಯೆತ್ತಬೇಕು. ರಾಜಕೀಯ ವಿಚಾರಗಳಿಗಿಂತ ಶಾಸಕಾಂಗದ ಕಾರ್ಯಯೋಜನೆಗಳಿಗೆ ಪೂರಕವಾಗಿ ಮತ್ತು ಸಮಾಜ ಜಾಗೃತಿಗೆ ಪ್ರಾಮುಖ್ಯತೆ ನೀಡುವಂತಹ ಹೆಚ್ಚೆಚ್ಚು ವರದಿಗಳು ಬರುವಂತಾಗಲಿ ಎಂದರು. ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ ಮಾತನಾಡಿ, ಸಮಾಜದ ಆಗುಹೋಗುಗಳ ಜತೆಗೆ ಸಮಸ್ಯೆ, ಬೇಡಿಕೆಗಳನ್ನೂ ಜನರ ನಡುವೆ ಬಿಂಬಿಸುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿದೆ. ಉತ್ತಮ ವರದಿಗಳಿಂದ ಸಮಾಜದಲ್ಲಿ ಸುಧಾರಣೆ ಸಾಧ್ಯವಿದೆ. ವಿಧಾತ್ರಿ ಅಕಾಡೆಮಿಯ ಸಹಕಾರದಲ್ಲಿ ಸರಸ್ವತಿ ಪಿಯು ಕಾಲೇಜು ಕಳೆದು ಐದು ವರ್ಷಗಳಿಂದ ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ್ದು, ಉತ್ತರ ಕರ್ನಾಟಕ ಭಾಗದ ಗಮನವನ್ನೂ ಸೆಳೆಯುತ್ತಿದೆ. ಇದನ್ನು ಸಾಧಿಸುವಲ್ಲಿ ಸಂಸ್ಥೆಯ ಗುಣಮಟ್ಟದ ನಿರ್ವಹಣೆಯ ಜತೆಗೆ ಮಾಧ್ಯಮದ ಸಹಕಾರವೂ ಅತ್ಯಂತ ಪ್ರಮುಖವಾಯಿತು ಎಂದರು. ಜಿಲ್ಲಾಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ ಮಾತನಾಡಿ, ಕನಿಷ್ಠ ಕೂಲಿ, ಆರೋಗ್ಯವಿಮೆ, ಬಸ್ ಪಾಸ್‌ನಂತಹ ಮೂಲ ಸವಲತ್ತುಗಳೂ ಇಲ್ಲದೇ ಕೆಲಸ ಮಾಡುತ್ತಿರುವ ತಾಲೂಕು ಮತ್ತು ಗ್ರಾಮೀಣ ಪತ್ರಕರ್ತರಿಗೆ ಕ್ಷೇಮ, ಅಭಿವೃದ್ಧಿ ಹಾಗೂ ಭದ್ರತೆಯೇ ಇಲ್ಲ. ಹೀಗಾಗಿ ನಮ್ಮ ಸಂಘದಿಂದಲೇ ದತ್ತಿನಿಧಿ ಸಂಗ್ರಹಿಸಿ, ಪತ್ರಕರ್ತರ ಅಪಘಾತ, ತೀವ್ರ ಅನಾರೋಗ್ಯ ಇನ್ನಿತರ ತುರ್ತು ಪರಿಸ್ಥಿತಿಯಲ್ಲಿ ಆರ್ಥಿಕ ನೆರವನ್ನು ನೀಡಲು ಚಿಂತಿಸಲಾಗಿದೆ. ಈ ವರ್ಷ ಸಂಘದ ಸುವರ್ಣ ಮಹೋತ್ಸವದ ಕಾರ್ಯಕ್ರಮಗಳನ್ನು ಜಿಲ್ಲಾದ್ಯಂತ ಆಚರಿಸಲಾಗುತ್ತಿದೆ ಎಂದರು. ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ಹೆಚ್ಚಿನ ಜ್ಞಾನ ಅಗತ್ಯ. ಪ್ರತಿಯೊಬ್ಬರೂ ಪತ್ರಿಕೆಗಳನ್ನು ಅವಲೋಕನ ಮಾಡಬೇಕು. ಪತ್ರಿಕೆಗಳನ್ನು ಓದುವುದರಿಂದ ಸಾಮಾನ್ಯ ಜ್ಞಾನ ಹೆಚ್ಚುತ್ತದೆ ಎಂದರು. ಬಳಿಕ, ಆಧುನಿಕ ಸಮಾಜ ನಿರ್ಮಾಣದ ನೆರವಿಗೆ ಮಾಧ್ಯಮ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ಅನನ್ಯ ಸಂಗಡಿಗರು ಪ್ರಾರ್ಥಿಸಿದರು. ಗಣೇಶ ಜೋಶಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯದೇವ ಬಳಗಂಡಿ ನಿರೂಪಿಸಿದರು. ಚರಣರಾಜ ನಾಯ್ಕ ವಂದಿಸಿದರು. ಸಂಘದ ಇತರ ಸದಸ್ಯರು ಇದ್ದರು.