ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕೇರಳದ ವಯನಾಡು ಗುಡ್ಡಕುಸಿತ ಘಟನೆಯಲ್ಲಿ ಮೃತಪಟ್ಟ ತಾಲೂಕಿನ ಕತ್ತರಘಟ್ಟ ಗ್ರಾಮದ ಸಂಬಂಧಿಕರ ಮನೆಗೆ ಶಾಸಕ ಎಚ್.ಟಿ.ಮಂಜು ಭೇಟಿ ನೀಡಿ ಸಾಂತ್ವನ ಹೇಳಿದರು.ತಾಲೂಕಿನ ಹರಿಹರಪುರ ಗ್ರಾಪಂ ಮಾಜಿ ಸದಸ್ಯೆ ಕತ್ತರಘಟ್ಟದ ಕುಳ್ಳಮ್ಮ ಮತ್ತು ಜಗದೀಶ್ ಪುತ್ರಿ ಝಾನ್ಸಿರಾಣಿ ಅವರ ಕುಟುಂಬವು ಕೇರಳದ ವಯನಾಡಿನ ಮುಂಡಕೈ ಗ್ರಾಮದಲ್ಲಿ ಹಲವು ದಶಕಗಳಿಂದ ವಾಸವಾಗಿತ್ತು.
ಕಳೆದ ಸೋಮವಾರ ರಾತ್ರಿ ಸಂಭವಿಸಿದ ಮಳೆ, ಗುಡ್ಡ ಕುಸಿತದಲ್ಲಿ ಝಾನ್ಸಿರಾಣಿ ಅವರ ಅತ್ತೆ ಲೀಲಾವತಿ ಹಾಗೂ ಆಕೆಯ ಎರಡೂವರೆ ವರ್ಷದ ಪುಟ್ಟ ಮಗು ನಿಹಾಲ್ ದುರ್ಮರಣ ಹೊಂದಿದ್ದರು. ಝಾನ್ಸಿ ಅವರ ಪತಿ ಅನಿಲ್ ಕುಮಾರ್, ಮಾವ ದೇವರಾಜು ಗಂಭೀರವಾಗಿ ಗಾಯಗೊಂಡಿದ್ದಾರೆ.ಝಾನ್ಸಿರಾಣಿ ಅವರಿಗೂ ಕೈ, ಕಾಲುಗಳಿಗೆ ಪೆಟ್ಟು ಬಿದ್ದಿದ್ದು ಕುಟುಂಬ ಕೇರಳದಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಝಾನ್ಸಿ ಅವರ ಪತಿ ಅನಿಲ್ ಕುಮಾರ್ ಸೌದಿಯಲ್ಲಿ ಉದ್ಯೋಗಿಯಾಗಿದ್ದಾರೆ. ಪತ್ನಿ ಹಾಗೂ ಮಕ್ಕಳನ್ನು ಸೌದಿಗೆ ಕರೆದುಕೊಂಡು ಹೋಗಲು ಸಿದ್ಧತೆ ನಡೆಸಿದ್ದು, ಅದಕ್ಕಾಗಿಯೇ ಇತ್ತೀಚೆಗೆ ರಜೆ ಮೇಲೆ ಕೇರಳದ ಮುಂಡಕೈಗೆ ಆಗಮಿಸಿದ್ದರೆನ್ನಲಾಗಿದೆ.
ಸೌದಿಗೆ ಹೋಗುವ ಮುನ್ನ ತಾಲೂಕಿನ ಕತ್ತರಘಟ್ಟ ಗ್ರಾಮದ ಅತ್ತೆ ಮನೆಗೆ ಬಂದು ಹೋಗಲು ಸಿದ್ಧತೆ ನಡೆಸಿದ್ದರು. ಆದರೆ, ಅತ್ತೆಯ ಮನೆಗೆ ಬರುವ ಮುನ್ನವೇ ಅವರ ಕುಟುಂಬಕ್ಕೆ ದುರಂತಕ್ಕೆ ಒಳಗಾಗಿದೆ. ಬೀಗತಿ ಲೀಲಾವತಿ ಹಾಗೂ ಮೊಮ್ಮಗ ನಿಹಾಲ್‌ನನ್ನು ಕಳೆದುಕೊಂಡ ಕುಳ್ಳಮ್ಮನವರ ಕುಟುಂಬದ ಸದಸ್ಯರ ರೋಧನ ಮುಗಿಲು ಮುಟ್ಟುವಂತಿತ್ತು.ಮಗಳು ಝಾನ್ಸಿಯನ್ನು ನಂಜನಗೂಡು ತಾಲೂಕಿನ ಸರಗೂರು ಗ್ರಾಮದ ಅನಿಲ್ ಕುಮಾರ್ ಅವರಿಗೆ ವಿವಾಹ ಮಾಡಿಕೊಟ್ಟಿದ್ದರೂ ಅನಿಲ್ ಕುಟುಂಬ ಸರಗೂರಿನಲ್ಲಿ ವಾಸವಿರಲಿಲ್ಲ. ಕಳೆದ ಐದು ದಶಕಗಳ ಹಿಂದೆಯೇ ಅನಿಲ್ ಕುಮಾರ್ ಕುಟುಂಬ ಕೇರಳದ ಮುಂಡಕೈನಲ್ಲಿ ನೆಲೆಸಿದ್ದು, ಇತ್ತೀಚೆಗೆ ತಾನೇ ಹೊಸದಾಗಿ ಸ್ವಂತ ಮನೆಯೊಂದನ್ನು ಕಟ್ಟಿಕೊಂಡು ವಾಸಿಸುತ್ತಿದ್ದರು.
ಇದೀಗ ಮನೆ ಸಮೇತ ಮಗು ಮತ್ತು ಅತ್ತೆಯನ್ನು ಕಳೆದುಕೊಂಡ ಝಾನ್ಸಿ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಹೇಗಾದರೂ ಸರಿಯೇ ದುರ್ಮರಣ ಹೊಂದಿರುವ ಮಗು ನಿಹಾಲ್ ಹಾಗೂ ಲೀಲಾವತಿ ಅವರ ಶವವನ್ನು ಅಂತ್ಯಸಂಸ್ಕಾರಕ್ಕಾಗಿ ಕತ್ತರಘಟ್ಟ ಗ್ರಾಮಕ್ಕೆ ತರಿಸಿಕೊಡಿ ಹಾಗೂ ಗಾಯಾಳುಗಳಾಗಿರುವ ಅಳಿಯ ಅನಿಲ್ ಕುಮಾರ್ ಮತ್ತು ಅವರ ತಂದೆ ದೇವರಾಜು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆತರಲು ಸಹಾಯ ಮಾಡುವಂತೆ ಕುಳ್ಳಮ್ಮನವರ ಕುಟುಂಬಸ್ಥರು ಶಾಸಕ ಎಚ್.ಟಿ.ಮಂಜು ಅವರಿಗೆ ಮನವಿ ಮಾಡಿದರು.ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಶಾಸಕ ಎಚ್.ಟಿ.ಮಂಜು ದುರಂತದಲ್ಲಿ ಮೃತರಾಗಿರುವ ಶವಗಳನ್ನು ಹೊರತೆಗೆದು ಕುಟುಂಬಸ್ಥರಿಗೆ ಒಪ್ಪಿಸುವ ಬಗ್ಗೆ ಈಗಾಗಲೇ ನಾನು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಮಂಡ್ಯ ಜಿಲ್ಲಾಧಿಕಾರಿಗಳು ಘಟನೆಯ ಸಂಬಂಧ ಈಗಾಗಲೇ ವಯನಾಡಿನ ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ರಾಜ್ಯ ಸರ್ಕಾರವೂ ಸಂತ್ರಸ್ತ ಕುಟುಂಬಗಳ ನೆರವಿಗೆ ನಿಂತಿದೆ. ಪ್ರಕೃತಿಯ ಮುಂದೆ ನಾವೆಲ್ಲರೂ ಅಸಹಾಯಕರು. ದುರಂತಕ್ಕೊಳಗಾದ ನಿಮ್ಮ ಕುಟುಂಬದ ನೆರವಿಗೆ ನಾನು ನಿಲ್ಲುತ್ತೇನೆಂದು ಕುಳ್ಳಮ್ಮ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಗ್ರಾಪಂ ಸದಸ್ಯ ಪರಮೇಶ್, ಡೈರಿ ಚಂದ್ರಶೇಖರ್, ಕಾಯಿ ಮಹೇಶ್, ಆಟೋ ರಂಗಣ್ಣ, ಪಾಂಡುರಂಗ ಸ್ವಾಮಿ ಸೇರಿ ಹಲವರಿದ್ದರು. ತಹಸೀಲ್ದಾರ್ ನಿಸರ್ಗಪ್ರಿಯ ಕೂಡ ತಾಲೂಕು ಆಡಳಿತದ ಪರವಾಗಿ ಸಂತ್ರಸ್ತ ಕುಟುಂಬವನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಸಾಂತ್ವನ ಹೇಳಿದರು.