ಸಿಎಂ ಸಿದ್ದರಾಮಯ್ಯ ಆಡಳಿತದ ಅಂತ್ಯ ಸಮೀಪ: ಛಲವಾದಿ ನಾರಾಯಣಸ್ವಾಮಿ

KannadaprabhaNewsNetwork |  
Published : Aug 01, 2024, 12:20 AM IST
31ಕೆಪಿಆರ್‌ಸಿಆರ್ 03: ಚಲುವಾದಿ ನಾರಾಯಣಸ್ವಾಮಿ | Kannada Prabha

ಸಾರಾಂಶ

ಕಾಂಗ್ರೆಸ್ ಚುನಾವಣೆ ವೇಳೆ ಹೊರಡಿಸಿದ ಪ್ರಣಾಳಿಕೆಯಂತೆ ಆಡಳಿತ ನಡೆಸುತ್ತಿಲ್ಲ. ದಲಿತರಿಗೆ ಸೇರಿದ ಅನುದಾನವನ್ನು ಬೇರೆ ಯೋಜನೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ದೂರಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದ ಅಂತ್ಯ ಸಮೀಪಿಸುತ್ತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಭವಿಷ್ಯ ನುಡಿದರು.

ಇಲ್ಲಿನ ಪಕ್ಷದ ಕಾರ್ಯಾಲಯದಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ ಸರ್ಕಾರದ ಹಗರಣಗಳ ಬಗ್ಗೆ ಬಿಜೆಪಿ ಧ್ವನಿ ಎತ್ತಿದರೆ, ಬಿಜೆಪಿಯ ಅವಧಿಯ ಅಕ್ರಮಗಳನ್ನು ಬಿಚ್ಚಿಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ಲಾಕ್‌ ಮೇಲ್‌ ಮಾಡುತ್ತಿದ್ದು, ಇಂತಹ ಬ್ಲಾಕ್‌ ಮೇಲ್‌ಗಳು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮುಂದೆ ನಡೆಯುತ್ತೆ ಹೊರತು ಬಿಜೆಪಿ ಎದುರಲ್ಲ, ಅವುಗಳಿಗೆ ಬಿಜೆಪಿ ಸುತಾರಾಮ್‌ ನಡೆಯೋದಿಲ್ಲ ಎಂದು ಕುಟುಕಿದರು.

ಐದು ಗ್ಯಾರಂಟಿಗಳ ಜಾರಿಗೆ ಎಸ್‌ಸಿಪಿ-ಟಿಎಸ್‌ಪಿ ಸೇರಿ ವಿವಿಧ ಯೋಜನೆಗಳ ಹಣವನ್ನು ಬಳಸಿಕೊಳ್ಳಲಾಗುತ್ತಿದೆ. ಕಾಂಗ್ರೆಸ್ ಚುನಾವಣೆ ಸಮಯದಲ್ಲಿ ಹೊರಡಿಸಿದ ಪ್ರಣಾಳಿಕೆಯಂತೆ ಆಡಳಿತ ನಡೆಸುತ್ತಿಲ್ಲ, ದಲಿತರಿಗೆ ಸೇರಿದ ಅನುದಾನವನ್ನು ಬೇರೆ ಯೋಜನೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣಗಳಿಂದಾಗಿ ಕಾಂಗ್ರೆಸ್‌ ಸರ್ಕಾರ ತಲೆ ತಗ್ಗಿಸುವಂತಾಗಿದೆ. ಹೊಸ ಕಾಮಗಾರಿ, ಯೋಜನೆಗಳಿಗೆ ಹಣವಿಲ್ಲದ ರಾಜ್ಯ ಸರ್ಕಾರವು ದಿವಾಳಿ ಹಂತ ತಲುಪಿದ್ದು,

ವಾಲ್ಮೀಕಿ ಮತ್ತು ಮುಡಾ ಹಗರಣಗಳ ಕುರಿತು ಸದನದಲ್ಲಿ ಸಿಎಂ ಉತ್ತರ ನೀಡದೆ ಪಲಾಯನವಾದ ಮಾಡಿದ ಫಲವಾಗಿ ಸದನವನ್ನು ಮುಂಚಿತವಾಗಿ ಮೊಟಕುಗೊಳಿಸಿದರು. ವಿರೋಧ ಪಕ್ಷವಾಗಿ ಬಿಜೆಪಿ ಸರಿಯಾದ ರೀತಿಯಲ್ಲಿಯೇ ಕಾರ್ಯ ನಿರ್ವಹಿಸಿದೆ ಎಂದರು.

ಮುಡಾ ಹಗರಣ ವಿರುದ್ಧ ಇದೇ ಆ.3ರಿಂದ ಮೈಸೂರಿನವರೆಗೂ ಬಿಜೆಪಿ ಪಾದಯಾತ್ರೆ ಬಗ್ಗೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಉಂಟಾಗಿರುವ ನೆರೆಯಿಂದ ಜನರು ತತ್ತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಾದಯಾತ್ರೆ ನಡೆಸುವುದು ಸಮಂಜಸವಲ್ಲ ಎಂದಿದ್ದಾರೆಯೇ ಹೊರತು, ಅನ್ಯ ಉದ್ದೇಶದಿಂದಲ್ಲ, ಎಚ್‌ಡಿಕೆ ಮುನಿಸು ತಾತ್ಕಾಲಿಕವಾಗಿದ್ದು ಪಾದಯಾತ್ರೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ವಿಜಯೇಂದ್ರ ರೂಪಿಸಿರುವ ಪಾದಯಾತ್ರೆಯ ಹಿಂದೆ ಡಿಕೆಶಿಯವರನ್ನು ಸಿಎಂ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್‌ ಅವರು ಪಕ್ಷದ ಹಿರಿಯ ಶಾಸಕರಾಗಿದ್ದಾರೆ. ಮಹರ್ಷಿ ವಾಲ್ಮೀಕಿ ಹಗರಣದ ವಿರುದ್ಧ ಉತ್ತರ ಕರ್ನಾಟಕದಲ್ಲಿ ನಡೆಸುವುದರ ಕುರಿತು ನಿರ್ಧರಿಸಿದ್ದು, ಈ ಬಗ್ಗೆ ಪಕ್ಷ ಸಹಮತ ವ್ಯಕ್ತಪಡಿಸಿದೆ ಎಂದು ಹೇಳಿದರು.

ಈ ವೇಳೆ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶಿವರಾಜ ಪಾಟೀಲ್, ಮುಖಂಡರಾದ ಎನ್‌.ಶಂಕ್ರಪ್ಪ, ರವೀಂದ್ರ ಜಲ್ದಾರ್, ಉಟ್ಕೂರು ರಾಘವೇಂದ್ರ, ಕಡಗೋಲು ಆಂಜನೇಯ, ಪಿ.ಯಲ್ಲಪ್ಪ, ಪಲಗುಲ ನಾಗರಾಜ, ಮುಕ್ತಿಯಾರ ಸೇರಿ ಕಾರ್ಯಕರ್ತರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...