- ಶಾಸಕ ಶಾಂತನಗೌಡ, ಡಿಸಿ ಗಂಗಾಧರ ಸ್ವಾಮಿಗೆ ಬಾಲರಾಜ್ ಘಾಟ್, ಬಂಬೂಬಜಾರ್ ಜನರ ಒತ್ತಾಯ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಭದ್ರಾ ಮತ್ತು ತುಂಗಾ ಜಲಾಶಯಗಳಿಂದ ಹೆಚ್ಚುವರಿ ನೀರು ಬಿಟ್ಟಿರುವ ಪರಿಣಾಮ ಬುಧವಾರ ಹೊನ್ನಾಳಿ ತುಂಗಭದ್ರಾ ನದಿ ನೀರಿನ ಮಟ್ಟ 12.06 ಮೀಟರ್‌ಗೆ ಏರಿಕೆಯಾಗಿದ್ದು, ಪ್ರವಾಹದ ಭೀತಿ ತಲೆದೋರಿದೆ.ಈ ಹಿನ್ನೆಲೆ ಬುಧವಾರ ಸಂಜೆ ಪಟ್ಟಣದ ಬಾಲರಾಜ್ ಘಾಟ್, ಬಂಬೂಬಜಾರ್ ಪ್ರದೇಶಗಳಿಗೆ ಶಾಸಕ ಡಿ.ಜಿ.ಶಾಂತನಗೌಡ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಪಂ ಸಿಇಒ ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಅಭಿಷೇಕ ಸೇರಿದಂತೆ ಜಿಲ್ಲಾ ಮತ್ತು ತಾಲುಕು ಪಟ್ಟದ ಅಧಿಕಾರಿಗಳು ಭೇಟಿ ನೀಡಿ, ಪರಿಸ್ಥಿತಿ ಅವಲೋಕನ ಮಾಡಿದರು. ಸಂತ್ರಸ್ತರು ಸಮಸ್ಯೆಗಳ ಹೇಳಿಕೊಂಡರು.
ಅಂಬೇಡ್ಕರ್ ಭವನದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಡಿಸಿ ತಂಡ ಅಲ್ಲಿ ಆಶ್ರಯ ಪಡೆದಿದ್ದ ಸಂತ್ರಸ್ತರೊಂದಿಗೆ ಮಾತನಾಡಿದರು. ಸಂತ್ರಸ್ತರು ಈ ಸಂದರ್ಭ ಪಟ್ಟಣದಲ್ಲಿ ಅನೇಕ ದಶಕಗಳಿಂದ ಅತಿವೃಷ್ಟಿ ವೇಳೆ ತುಂಗಾಭದ್ರಾ ನದಿ ಸೃಷ್ಟಿಸುತ್ತಿರುವ ಪ್ರವಾಹ ಸಮಸ್ಯೆಗಳ ಅಳಲು ತೋಡಿಕೊಂಡರು.ಬಾಲರಾಜ್ ಘಾಟ್, ಬಂಬೂ ಬಜಾರ್ ಪ್ರದೇಶಗಳ ನೆರೆ ಸಮಸ್ಯೆಗೆ ಈ ಹಿಂದೆ ಅನೇಕ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಭರವಸೆ ನೀಡಿದ್ದರು. ಇದೂವರೆಗೆ ಅವು ಭರವಸೆಗಳಾಗಿಯೇ ಉಳಿದಿವೆ. ಈ ಬಾರಿಯಾದರೂ ಸಂತ್ರಸ್ತರಿಗೆ ಬೇರೆ ಕಡೆಗೆ ನಿವೇಶನ, ಮನೆ ನೀಡುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡಬೇಕು ಎಂದು ಸಂತ್ರಸ್ತರು ಒಕ್ಕೊರಲಿನಿಂದ ಶಾಸಕರು, ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಸ್ಥಳೀಯ ಶಾಸಕ ಡಿ.ಜಿ.ಶಾಂತನಗೌಡ ಮನವಿಗೆ ಸ್ಪಂದಿಸಿ, ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳ ಸಹಕಾರೊಂದಿಗೆ ಪರಿಹಾರ ಮಾರ್ಗಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ, ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಒದಗಿಸುವ ಭರವಸೆ ನೀಡಿದರು. ಜಿಲ್ಲಾಧಿಕಾರಿ ದನಿಗೂಡಿಸಿದರು.ಕಾಳಜಿ ಕೇಂದ್ರದಲ್ಲಿ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಊಟ ಮತ್ತು ಸಂಜೆಗೆ ಊಟದ ವ್ಯವಸ್ಥೆ ಸೇರಿದಂತೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಳನ್ನು ಮಾಡಲಾಗಿದೆ. ಜೊತೆಗೆ ಸಹಾಯ ವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ಜೊತೆಗೆ ಜಿಲ್ಲಾ ಮತ್ತು ತಾಲೂಕು ಆಡಳಿತಗಳು ಇರುತ್ತವೆ. ಭಯಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಅಭಿಷೇಕ್, ತಹಸೀಲ್ದಾರ್ ಪಟ್ಟರಾಜಗೌಡ, ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ, ನೋಡೆಲ್ ಅಧಿಕಾರಿ ಡಾ.ವಿಶ್ವನಟೇಶ್, ತಾಪಂ ಇಒ ರಾಘವೇಂದ್ರ, ತಾಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್, ಕಂದಾಯ, ಪುರಸಭೆ ಆರೋಗ್ಯ, ಪೊಲೀಸ್ ಇಲಾಖೆಗಳ ಅಧಿಕಾರಿಗಳು ಇದ್ದರು.- - - -31ಎಚ್.ಎಲ್.ಐ2:
ಹೊನ್ನಾಳಿ ತುಂಗಭದ್ರಾ ನದಿ ಪ್ರವಾಹಪೀಡಿತ ಪ್ರದೇಶ ಬಾಲರಾಜ್ ಘಾಟ್‌ಗೆ ಶಾಸಕ ಡಿ.ಜಿ|ಶಾಂತನಗೌಡ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು. ಜಿಪಂ ಸಿಇಒ ಸುರೇಶ್ ಇಟ್ನಾಳ್, ತಾಪಂ ಇಒ ರಾಘವೇಂದ್ರ ಸೇರಿದಂತೆ ಅಧಿಕಾರಿಗಳು ಇದ್ದರು. -31ಎಚ್.ಎಲ್ಐ2ಎ:ಹೊನ್ನಾಳಿ ಅಂಬೇಡ್ಕರ್ ಭವನದಲ್ಲಿ ತೆರೆಯಲಾದ ಕಾಳಜಿ ಕೇಂದ್ರದಲ್ಲಿ ಶಾಸಕ ಡಿ.ಜಿ.ಶಾಂತನಗೌಡ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸಂತ್ರಸ್ತರ ಸಮಸ್ಯೆಗಳ ಆಲಿಸಿದರು.