ತುಂಗಭದ್ರಾ ಎಡದಂತೆ ನಾಲೆ ದುರಸ್ತಿ ಕಾಮಗಾರಿಯಲ್ಲಿ 650 ಕೋಟಿ ರುಪಾಯಿ ಲೂಟಿ: 28 ಎಂಜಿನಿಯರ್‌ಗಳು ಅಮಾನತು

KannadaprabhaNewsNetwork | Published : Jan 21, 2024 1:32 AM

ಸಾರಾಂಶ

ಕರ್ನಾಟಕ ನೀರಾವರಿ ನಿಗಮದಡಿ ನಡೆದ ಈ ಅಕ್ರಮ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ 28 ಎಂಜಿನಿಯರ್‌ಗಳನ್ನು ಅಮಾನತುಗೊಳಿಸಲಾಗಿದೆ. ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎನ್.ಹರ್ಷ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಕೊಪ್ಪಳ/ಮುನಿರಾಬಾದ್: ತುಂಗಭದ್ರಾ ಎಡದಂಡೆ ನಾಲೆಯ ಆಧುನೀಕರಣ ಕಾಮಗಾರಿಯಲ್ಲಿ 2009-10 ಮತ್ತು 2010-11ನೇ ಸಾಲಿನಲ್ಲಿ ನಡೆದ ಬರೋಬ್ಬರಿ ₹650 ಕೋಟಿ ಅಕ್ರಮವು ಸಾಬೀತಾದ ಹಿನ್ನೆಲೆಯಲ್ಲಿ 28 ಎಂಜಿನಿಯರ್‌ಗಳನ್ನು ಅಮಾನತು ಮಾಡಿ ಆದೇಶಿಸಲಾಗಿದೆ.ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಎಡದಂಡೆ ನಾಲೆಯ ದುರಸ್ತಿ ಕಾಮಗಾರಿಯಲ್ಲಿ ಕೊಪ್ಪಳ ತಾಲೂಕಿನ ವಡ್ರಟ್ಟಿ, ಮುನಿರಾಬಾದ್, ರಾಯಚೂರು ಜಿಲ್ಲೆಯ ಸಿಂಧನೂರು, ಮಾನ್ವಿ ವಿಭಾಗ ವ್ಯಾಪ್ತಿಯಲ್ಲಿ ಈ ಅಕ್ರಮ ನಡೆದಿದೆ.ಕರ್ನಾಟಕ ನೀರಾವರಿ ನಿಗಮದಡಿ ನಡೆದ ಈ ಅಕ್ರಮ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ 28 ಎಂಜಿನಿಯರ್‌ಗಳನ್ನು ಅಮಾನತುಗೊಳಿಸಲಾಗಿದೆ. ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎನ್.ಹರ್ಷ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಅಕ್ರಮದ ಮಾಹಿತಿ ಆಧರಿಸಿ, ವಿಚಕ್ಷಣದಳ ಮಾಹಿತಿ ಸಂಗ್ರಹಿಸಿ ತನಿಖೆ ಕೈಗೊಂಡಿತ್ತು. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಆದರೆ, ಅದು ಜಾರಿಯಾಗಿರಲಿಲ್ಲ. ಗುತ್ತಿಗೆದಾರರು ಮತ್ತು ಅಧಿಕಾರಿಗಳು ಶಾಮೀಲಾಗಿ, ಕಾಮಗಾರಿಯಲ್ಲಿ ಅಕ್ರಮ ನಡೆಸಿದ್ದರು. ಮೇಲ್ನೋಟಕ್ಕೆ ಗೊತ್ತಾಗಿದ್ದರೂ ಈಗ ಕೇವಲ ಅಧಿಕಾರಿಗಳನ್ನು ಅಮಾನತ್ತು ಮಾಡಿ ಆದೇಶಿಸಲಾಗಿದೆ.ಕಾಮಗಾರಿಯಲ್ಲಿ ಚಮತ್ಕಾರ: ಕಾಲುವೆ ಆಧುನೀಕರಣದ ಕಾಮಗಾರಿಯಲ್ಲಿ ನೈಜ ಕಾಮಗಾರಿ ನಡೆಸದೇ ಬಿಲ್ ಎತ್ತಿ ಹಾಕಲಾಗಿತ್ತು. ಅಚ್ಚರಿ ಎಂದರೆ ಮೂರು ತಿಂಗಳಲ್ಲೂ ಮಾಡಲು ಅಸಾಧ್ಯವಾಗದ ಕಾಮಗಾರಿಯನ್ನು ಕೇವಲ 39 ದಿನಗಳಲ್ಲಿ ಪೂರ್ಣಗೊಳಿಸಿ, ಚಮತ್ಕಾರ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಭಾರಿ ಕುಳ: ತುಂಗಭದ್ರಾ ಎಡದಂಡೆ ನಾಲೆಯ ಆಧುನೀಕರಣ ಕಾಮಗಾರಿಯಲ್ಲಿ ₹650 ಕೋಟಿ ಅಕ್ರಮ ನಡೆದಿರುವುದಕ್ಕೆ ಕೇವಲ ಅಧಿಕಾರಿಗಳು ಮಾತ್ರ ಶಾಮೀಲಾಗಿರಲು ಸಾಧ್ಯವಿಲ್ಲ. ಇದರಲ್ಲಿ ದೊಡ್ಡ ದೊಡ್ಡ ಕುಳಗಳು, ಸರ್ಕಾರದಲ್ಲಿ ಅಧಿಕಾರದಲ್ಲಿದ್ದ ಜನಪ್ರತಿನಿಧಿಗಳು ಸಹ ಪಾಲುದಾರರಾಗಿರುವ ಸಾಧ್ಯತೆ ಇದೆ. ಹೀಗಾಗಿ, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎನ್ನುವ ಕೂಗು ಕೇಳಿ ಬಂದಿದೆ.ಈ ಅಕ್ರಮದ ಕುರಿತು ತನಿಖೆ ನಡೆದು, ಈ ಹಿಂದೆಯೇ ವರದಿ ಸಲ್ಲಿಕೆಯಾಗಿದ್ದರೂ ಏಕೆ ಕ್ರಮ ಆಗಿರಲಿಲ್ಲ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ. ಇಷ್ಟು ವರ್ಷಗಳವರೆಗೆ ಯಾವುದೇ ಕ್ರಮವಾಗದೇ ವಿಳಂಬವಾಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.ಅಮಾನತ್ತಾದ ಅಧಿಕಾರಿಗಳು: ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಅನಂತಕುಮಾರ ಚೂರಿ, ವಿನೋದಕುಮಾರ ಗುಪ್ತ, ಸೂಗಪ್ಪ, ಸಹಾಯಕ ಎಂಜಿನಿಯರ್‌ಗಳಾದ ಎಂ.ಹನುಮಂತಪ್ಪ, ಬಿ.ಶಿವಮೂರ್ತಿ, ತಿಮ್ಮಣ್ಣ, ಈಶ್ವರ ನಾಯಕ, ಶಾಂತರಾಜು, ಬಸವರಾಜ ಹಳ್ಳಿ, ವೆಂಕಟೇಶ್ವರ ರಾವ್, ಜಿತೇಂದ್ರ, ರಾಜೀವ ನಾಯಕ, ವಿಶ್ವನಾಥ, ಕೃಷ್ಣಮೂರ್ತಿ, ದೇವೇಂದ್ರಪ್ಪ, ಯಲ್ಲಪ್ಪ, ಕಿರಿಯ ಎಂಜಿನಿಯರ್‌ಗಳಾದ ರವಿ, ಜಗನ್ನಾಥ ಕುಲಕರ್ಣಿ, ಕನಕಪ್ಪ, ಅಬ್ದುಲ್‌ ರಶೀದ್, ಗಜಾನನ, ಮೋಹನ್‌ಕುಮಾರ, ಎಚ್‌.ಡಿ. ನಾಯಕ, ಮಲ್ಲಪ್ಪ ನಾಗಪ್ಪ, ದ್ವಿತೀಯ ದರ್ಜೆ ಸಹಾಯಕರಾದ ಮಹಿಮೂದ್, ನಾಗರಾಜ, ಆರಿಫ್‌ ಹುಸೇನ್, ಅನುರೇಖಕಾರ ಅಬ್ದುಲ್ ಹಕ್ ಎಂಬವರನ್ನು ಅಮಾನತುಗೊಳಿಸಲಾಗಿದೆ.

Share this article