ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ೨೦ನೇ ಸಂಸ್ಮರಣ ದಿನೋತ್ಸವದ ಅಂಗವಾಗಿ ನಡೆಯಲಿರುವ ನಾಟಕ ಪ್ರದರ್ಶನ
ಕನ್ನಡಪ್ರಭ ವಾರ್ತೆ ಚಾಮರಾಜನಗರಅಪ್ರತಿಮ ರೈತ ನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ೨೦ನೇ ಸಂಸ್ಮರಣ ದಿನೋತ್ಸವದ ಅಂಗವಾಗಿ ಫೆ.೩ರ ಶನಿವಾರ ಸಂಜೆ ೫.೩೦ ಗಂಟೆಗೆ ನಗರದ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಪ್ರೊ. ಎಂಡಿಎನ್ ಕುರಿತ ಡೈರೆಕ್ಟ್ ಆಕ್ಷನ್ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ರಂಗತರಂಗ ಟ್ರಸ್ಟ್‌ನ ಸಾಹಿತಿ ಸೋಮಶೇಖರ ಬಿಸಲ್ವಾಡಿ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಂಗತರಂಗ ಟ್ರಸ್ಟ್, ಸಾಮೂಹಿಕ ನಾಯಕತ್ವದಲ್ಲಿ ರೈತ ಸಂಘ ಹಾಗೂ ಶಾಂತಲಾ ಕಲಾವಿದರ ಸಹಕಾರದೊಂದಿಗೆ ನಗ್ನ ಥಿಯೇಟರ್ ಬೆಂಗಳೂರು ತಂಡ ’ಡೈರೆಕ್ಟ್ ಆಕ್ಷನ್’ ಎಂಬ ನಾಟಕ ಸಿದ್ಧಪಡಿಸಿ ಪ್ರದರ್ಶಿಸುತ್ತಿದೆ. ಪ್ರೊ. ನಟರಾಜ್ ಹುಳಿಯಾರ್ ಇದನ್ನು ಬರೆದಿದ್ದಾರೆ. ಕಬ್ಬಡಿ ನರೇಂದ್ರಬಾಬು ಇದನ್ನು ನಿರ್ದೇಶಿಸಿದ್ದಾರೆ. ಈ ನಾಟಕ ೧ ಗಂಟೆ ೨೫ ನಿಮಿಷ ಇದ್ದು ಪ್ರದರ್ಶನವು ಕೂಡ ರೈತ ಚಳವಳಿಯ ಒಂದು ಆಯಾಮವಾಗಿದೆ, ಈ ನಾಟಕದಲ್ಲಿ ಪ್ರೊ. ಎಂಡಿಎನ್‌ರ ಯಶೋಗಾಥೆ ಮತ್ತು ಹೋರಾಟಗಳ ಕುರಿತು ಕಲಾವಿದರು ಪ್ರದರ್ಶನ ನೀಡಲಿದ್ದಾರೆ ಎಂದರು.
ನಾಟಕ ಪ್ರದರ್ಶನಕ್ಕೂ ಮುನ್ನ ಪ್ರೊ. ಎಂಡಿಎನ್ ಒಡನಾಡಿ, ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮ ಅವರು ಪ್ರೊ. ಎಂಡಿಎನ್ ಕುರಿತು ಮಾತನಾಡಲಿದ್ದಾರೆ ಎಂದರು.ಪ್ರೊ. ಎಂಡಿಎನ್ ಒಂದು ತಲೆಮಾರಿನ ಜನರ ಕಣ್ಣು ತೆರೆಸಿದ, ಹೋರಾಟಕ್ಕೆ ಸಜ್ಜುಗೊಳಿಸಿದ ಅಪ್ರತಿಮ ಸಂಘಟಕ. ಹುಟ್ಟಿದ್ದು ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕು ಮಾಡ್ರಹಳ್ಳಿ. ಮೈಸೂರು, ಧಾರವಾಡ ಮತ್ತು ನೆಡರ್‌ಲ್ಯಾಂಡ್‌ನಲ್ಲಿ ಕಾನೂನು ವ್ಯಾಸಂಗ, ಸಮಾಜವಾದಿ ಚಳವಳಿಯೊಡನೆ ಗುರುತಿಸಿಕೊಂಡು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ ನಂತರ ಸಮಾಜವಾದಿ ಯುವ ಜನತ ಸಭಾ ಎಂಬ ತರುಣರ ತಂಡದ ನೇತೃತ್ವ, ಜಾತಿ ಸಂಘಟನೆಗಳ ವಿರುದ್ಧ, ಫ್ಯಾಸಿಸ್ಟ್ ಆಡಳಿತದ ವಿರುದ್ಧ ಚಳವಳಿಗಳನ್ನು ಸಂಘಟಿಸಿದ್ದು, ತುರ್ತು ಪರಿಸ್ಥಿತಿ ವಿರೋಧಿಸಿ ನವ ನಿರ್ಮಾಣ ಚಳವಳಿ ಸಂಘಟಿಸಿದ್ದು, ಎಪ್ಪತ್ತರ ದಶಕದಲ್ಲಿ ದಸಂಸಕ್ಕೆ ಪ್ರೇರಣೆ ಆದುದು. ಬಂಡಾಯ ಚಳವಳಿಗೆ ಬೆನ್ನೆಲುಬಾಗಿದ್ದು ಕಲಾವಿದರ ಮತ್ತು ಬರಹಗಾರರ ಒಕ್ಕೂಟಕ್ಕೆ ಸ್ಫೂರ್ತಿಯಾದದ್ದು, ಎಲ್. ಜಿ. ಹಾವನೂರು ವರದಿ ಜಾರಿಗೆ ಒಂದು ಒತ್ತಡದ ಗುಂಪಾಗಿ ಕೆಲಸ ಮಾಡಿದ್ದು, ಇವು ಕೆಲವು ಮರೆಯಲಾರದ ಘಟನೆಗಳು ಎಂದರು,
ಎಂಭತ್ತರ ದಶಕದಲ್ಲಿ ರೈತ ಚಳವಳಿಯಲ್ಲಿ ಧುಮುಕಿದ್ದು, ರೈತ ಚಳವಳಿ ಕೇವಲ ರೈತರ ಬೇಡಿಕೆಗಳ ಚಳವಳಿ ಅಲ್ಲ ಕರ್ನಾಟಕದಲ್ಲಿ ಆ ಮೂಲಕ ದೇಶದ ಪುನರ್ ನಿರ್ಮಾಣದ ಚಳವಳಿ. ಅವರ ಕನಸಾದ ಅಮೃತಭೂಮಿ ಸುಸ್ಥಿರ ಚಳವಳಿಯನ್ನು ಕೊನೆಗೆ ಕೊಂಡೊಯ್ಯಲಾಗಲಿಲ್ಲ. ಅದನ್ನು ಸಾಕಾರವಾಗಿಸಲು ಮುಂದಿನ ಜನಾಂಗಕ್ಕೆ ಬಿಟ್ಟಿದ್ದಾರೆ ಎಂದರು, ಹರಿತ ಭಾಷೆಯ ಹರಿತ ಬುದ್ಧಿಯ ಪ್ರಾಮಾಣಿಕ ಜನನಾಯಕ ಅದನ್ನು ಮುಂದಕ್ಕೆ ಕೊಂಡೊಯ್ಯಬೇಕಾದ ಹೊಣೆ ನಮ್ಮದು.ಈಚಿನ ವರ್ಷಗಳಲ್ಲಿ ಎಂಡಿಎನ್ ಅವರನ್ನು ಕುರಿತು ಪುಸ್ತಕಗಳು ಬಂದಿವೆ. ಪ್ರೊ.ನಟರಾಜ್ ಹುಳಿಯಾರ್, ರವಿಕುಮಾರ್ ಬಾಗಿ, ವೀರಭದ್ರಪ್ಪ ಬಿಸ್ಲೇಹಳ್ಳಿ, ಅಭಿರುಚಿ ಗಣೇಶ್, ಪಲ್ಲವ ವೆಂಕಟೇಶ್ ಈ ದಿಕ್ಕಿನಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಪಚ್ಚೆ ನಂಜುಂಡಸ್ವಾಮಿ ಪ್ರೊಫೆಸರರ ಭಾಷಣಗಳನ್ನು ಸಂಗ್ರಹಿಸಿ ಪ್ರಸಾರ ಮಾಡುತ್ತಿದ್ದಾರೆ ಎಂದರು. ಈ ನಾಟಕಕ್ಕೆ ಎಲ್ಲರೂ ಸಹಕರಿಸಿ ಯಶಸ್ವಿಗೊಳಿಸಕೊಡಬೇಕಾಗಿ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಸಾಮೂಹಿಕ ನಾಯಕತ್ವದಲ್ಲಿ ರೈತ ಸಂಘದ ಹೊನ್ನೂರು, ಪ್ರಕಾಶ್, ಶಾಂತಲಾ ಕಲಾವಿದರ ರಂಗಕರ್ಮಿ ಕೆ. ವೆಂಕಟರಾಜು, ರಂಗತರಂಗ ಟ್ರಸ್ಟ್‌ನ ಅಂಬಳೆ ಸಿದ್ದರಾಜು ಇದ್ದರು.೨೦ಸಿಎಚ್‌ಎನ್೧
ಚಾಮರಾಜನಗರದ ಜಿಲ್ಲಾ ಪತ್ರಿಕಾಗೋಷ್ಠಿಯಲ್ಲಿ ರಂಗತರಂಗ ಟ್ರಸ್ಟ್‌ನ ಸಾಹಿತಿ ಸೋಮಶೇಖರ ಬಿಸಲ್ವಾಡಿ ಮಾತನಾಡಿದರು. ಈ ವೇಳೆ ರೈತ ಸಂಘದ ಹೊನ್ನೂರು, ಪ್ರಕಾಶ್, ಶಾಂತಲಾ ಕಲಾವಿದ ರಂಗಕರ್ಮಿ ಇದ್ದರು.