ಸಿಂಗಟಾಲೂರು ಬ್ಯಾರೇಜ್‌ಗೆ 6600 ಕ್ಯೂಸೆಕ್‌ ನೀರು ಒಳಹರಿವು

KannadaprabhaNewsNetwork |  
Published : Jul 07, 2026, 02:45 AM IST
ಹೂವಿನಹಡಗಲಿ ತಾಲೂಕಿನ ಅಲ್ಲಿಪುರ ಬಳಿ ಇರುವ ಸಿಂಗಟಾಲೂರು ಏತ ನೀರಾವರಿ ಯೋಜನೆ ಬ್ಯಾರೇಜ್‌ ನೋಟ.  | Kannada Prabha

ಸಾರಾಂಶ

ಕುಡಿವ ನೀರಿನ ಸಮಸ್ಯೆ ಕೂಡ ಎದುರಾಗುವ ಸಾಧ್ಯತೆಗಳು ಹೆಚ್ಚಾಗಿತ್ತು.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಮಲೆನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಈಗಾಗಲೇ ತುಂಗಾ ಡ್ಯಾಂ ಭರ್ತಿಯಾದ ಹಿನ್ನೆಲೆಯಲ್ಲಿ ಸಿಂಗಟಾಲೂರು ಬ್ಯಾರೇಜ್‌ಗೆ 6,600 ಕ್ಯೂಸೆಕ್‌ ನೀರು ಒಳಹರಿವು ಹೆಚ್ಚಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಮೂರು ಜಿಲ್ಲೆಗಳ ಲಕ್ಷಾಂತರ ರೈತರ ಜೀವನಾಡಿಯಾದ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್‌ಗೆ ಕಳೆದೊಂದು ವಾರದ ಹಿಂದೆ ಶೂನ್ಯ ಒಳಹರಿವು ಇತ್ತು. ಕುಡಿವ ನೀರಿನ ಸಮಸ್ಯೆ ಕೂಡ ಎದುರಾಗುವ ಸಾಧ್ಯತೆಗಳು ಹೆಚ್ಚಾಗಿತ್ತು. ಆದರೆ ಮಲೆನಾಡು ಪ್ರದೇಶದಲ್ಲಿ ಭರ್ಜರಿ ಮಳೆಯಾದ ಪರಿಣಾಮ ಎರಡು ದಿನಗಳಿಂದ ಬ್ಯಾರೇಜ್‌ಗೆ ಒಳಹರಿವು ಪ್ರಾರಂಭವಾಗಿದೆ.

ಸಿಂಗಟಾಲೂರು ಬ್ಯಾರೇಜ್‌ 509 ಅಡಿ ನೀರಿನ ಸಂಗ್ರಹ ಸಾಮರ್ಥ್ಯವಿದೆ. ಕೆಲ ಭಾಗಗಳಲ್ಲಿ ಮುಳುಗಡೆ ಪ್ರದೇಶ ಸ್ಥಳಾಂತರಕ್ಕೆ ತೊಂದರೆ ಉಂಟಾಗಿರುವ ಕಾರಣ ಪೂರ್ಣ ಪ್ರಮಾಣದ ನೀರು ಸಂಗ್ರಹ ಸಾಧ್ಯವಾಗಿಲ್ಲ. ಸದ್ಯ 507.80 ಅಡಿ ನಿಲುಗಡೆ ಮಾಡಿದ್ದು, ಇದರಿಂದ 2.2 ಟಿಎಂಸಿ ನೀರು ಸಂಗ್ರಹವಾಗಿದೆ.

ಕಾಲುವೆ, ಕೆರೆಗಳಿಗೆ ನೀರು:

ಒಳಹರಿವಿನ ಪ್ರಮಾಣ ಹೀಗೆ ಹೆಚ್ಚಳವಾದರೆ ಮಾತ್ರ ಕಾಲುವೆಗಳಿಗೆ ಮತ್ತು ಕೆರೆಗಳಿಗೆ ನಿರಂತರವಾಗಿ ನೀರು ಹರಿಸಬಹುದು. ಮತ್ತೆ ಎರಡು ಮೂರು ದಿನಗಳಲ್ಲಿ ನೀರಿನ ಒಳಹರಿವು ಕಡಿಮೆಯಾದರೆ ನೀರು ಹರಿಸುವುದು ಕಷ್ಟ ಎನ್ನುತ್ತಾರೆ ಅಧಿಕಾರಿಗಳು.

ಸಿಂಗಟಾಲೂರು ಏತ ನೀರಾವರಿ ಯೋಜನೆ ಪ್ರದೇಶದ ವ್ಯಾಪ್ತಿಯ ಆಯಾ ಗ್ರಾಪಂಗಳಿಗೆ ನೋಟಿಸ್‌ ನೀಡಲಾಗುವುದು. ಬ್ಯಾರೇಜ್‌ಗೆ ಒಳಹರಿವು ಹೆಚ್ಚಿದರೆ ಮಾತ್ರ ಕಾಲುವೆಗಳಿಗೆ ನೀರು ಹರಿಸಲಾಗುದು. ಇದೇ ನೀರನ್ನು ನಂಬಿಕೊಂಡು ಯಾವ ರೈತರೂ ಬೆಳೆ ಬೆಳೆಯಬಾರದು. ಒಂದು ವೇಳೆ ನೀರಿನ ಪ್ರಮಾಣ ಕಡಿಮೆಯಾದ ಕೂಡಲೇ ಯಾವುದೇ ಕ್ಷಣದಲ್ಲಾದರೂ ಕಾಲುವೆಗಳಿಗೆ ನೀರು ಹರಿಯುವುದನ್ನು ನಿಲ್ಲಿಸುತ್ತೇವೆ. ಈ ಕುರಿತು ಆಯಾ ಗ್ರಾಪಂಗಳಿಗೆ ನೋಟಿಸ್‌ ನೀಡಿ ರೈತರಿಗೆ ಮಾಹಿತಿ ತಿಳಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಲೂಕಿನಲ್ಲಿ ನೀರಿನ ಅಭಾವ ಇರುವ ಕಡೆಗಳಲ್ಲಿನ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದ್ದು, ಮಾಗಳದ 10 ಕೆರೆ ತುಂಬಿಸುವ ಯೋಜನೆಗೆ ನೀರು ಹರಿಸಲಾಗುತ್ತಿದೆ. ಜತೆಗೆ ಹ್ಯಾರಡ ಕೆರೆಗಳಿಗೆ ಹಾವೇರಿ ಜಿಲ್ಲೆಯ ಶಾಕಾರ ಬಳಿಯ ಜಾಕ್‌ವೆಲ್‌ನಿಂದ ನೀರು ಹರಿಸಲಾಗುವುದು ಎಂದು ತಿಳಿಸಿದ್ದಾರೆ.

ನಿಟ್ಟುಸಿರು ಬಿಟ್ಟ ಜನತೆ:

ತಾಲೂಕಿನ ತುಂಗಭದ್ರಾ ನದಿಯಲ್ಲಿ ನೀರು ಇಲ್ಲದ್ದರಿಂದ ರೈತರು ಭತ್ತ ನಾಟಿ ಮಾಡಲು ಹಿಂದೇಟು ಹಾಕುತ್ತಿದ್ದರು. ಆದರೆ ಮಲೆನಾಡು ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ನದಿ ನೀರು ಹರಿದು ಬಂದಿದೆ. ಭತ್ತದ ನಾಟಿ ಮಾಡುವ ಕಾರ್ಯ ಭರದಿಂದ ಸಾಗಿದೆ.

ಸಿಂಗಟಾಲೂರು ಬ್ಯಾರೇಜ್‌ನ ಹಿನ್ನೀರಿನಲ್ಲಿ ಹೂವಿನಹಡಗಲಿ, ಗದಗ, ಲಕ್ಷೇಶ್ವರ, ಶಿರಹಟ್ಟಿ, ಮುಂಡರಗಿ ತಾಲೂಕಿನ ನೂರಾರು ಹಳ್ಳಿಗಳ ಜನರಿಗೆ ಕುಡಿವ ನೀರಿನ ದಾಹ ನೀಗಿಸುವ ಯೋಜನೆಯಾಗಿದೆ. ನದಿಗೆ ನೀರು ಹರಿದು ಬಂದ ಕಾರಣ ಕುಡಿವ ನೀರಿನ ಆತಂಕ ದೂರವಾಗಿದೆ.

ಮಲೆನಾಡಿನಲ್ಲಿ ಮಳೆಯಾದ ಕಾರಣ ತುಂಗಭದ್ರಾ ನದಿಗೆ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚಾಗಿದೆ. 2.2 ಟಿಎಂಸಿ ನೀರು ಸಂಗ್ರಹವಿದೆ. ಒಳಹರಿವು ಹೆಚ್ಚಾದರೆ ಕಾಲುವೆಗಳು, ಕೆರೆಗಳಿಗೆ ನೀರು ಹರಿಸುತ್ತೇವೆ. ಈ ಕುರಿತು ಆಯಾ ಗ್ರಾಪಂಗಳಿಗೆ ನೋಟಿಸ್‌ ಕಳಿಸುತ್ತೇವೆ ಎನ್ನುತ್ತಾರೆ ಹೂವಿನಹಡಗಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಎಇಇ ರಾಘವೇಂದ್ರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೌಶಲ್ಯ ಅಭಿವೃದ್ಧಿ ಪಡಿಸುವುದೇ ಕಲಾ ಉತ್ಸವದ ಉದ್ದೇಶ: ತಹಸೀಲ್ದಾರ
ಮೂಲಭೂತ ಸೌಲಭ್ಯಕ್ಕೆ ಆಗ್ರಹ: ಎಸ್‌ಐಆರ್‌ ಜಾಗೃತಿ ಬೈಕ್‌ ರ್‍ಯಾಲಿಗೆ ತಡೆ