ಆಲಮಟ್ಟಿ ಜಲಾಶಯದಿಂದ 67,500 ಕ್ಯುಸೆಕ್ ನೀರು ಬಿಡುಗಡೆ

KannadaprabhaNewsNetwork |  
Published : Jul 25, 2026, 03:00 AM IST
24 ಆಲಮಟ್ಟಿ :1 | Kannada Prabha

ಸಾರಾಂಶ

ಒಳಹರಿವು ಹೆಚ್ಚಳ ಹಿನ್ನೆಲೆ ಈ ವರ್ಷದಲ್ಲಿ ಮೊದಲ ಬಾರಿಗೆ ಆಲಮಟ್ಟಿ ಜಲಾಶಯದ 14 ಗೇಟ್‌ಗಳನ್ನು ಶುಕ್ರವಾರದಿಂದ ತೆರೆದು ಕೃಷ್ಣಾ ನದಿ ಪಾತ್ರಕ್ಕೆ ನೀರು ಬಿಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಒಳಹರಿವು ಹೆಚ್ಚಳ ಹಿನ್ನೆಲೆ ಈ ವರ್ಷದಲ್ಲಿ ಮೊದಲ ಬಾರಿಗೆ ಆಲಮಟ್ಟಿ ಜಲಾಶಯದ 14 ಗೇಟ್‌ಗಳನ್ನು ಶುಕ್ರವಾರದಿಂದ ತೆರೆದು ಕೃಷ್ಣಾ ನದಿ ಪಾತ್ರಕ್ಕೆ ನೀರು ಬಿಡಲಾಗುತ್ತಿದೆ.

ಜಲಾಶಯದ ಬಲಭಾಗದ ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕದ ಮೂಲಕ 42,500 ಕ್ಯುಸೆಕ್ ಮತ್ತು ಗೇಟ್‌ಗಳ ಮೂಲಕ 25,000 ಕ್ಯುಸೆಕ್ ಸೇರಿ ಒಟ್ಟು 67,500 ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ಗುರುವಾರ 42,500 ಕ್ಯುಸೆಕ್ ಇದ್ದ ಹೊರಹರಿವು ಶುಕ್ರವಾರ ಬೆಳಗ್ಗೆ 8 ಗಂಟೆಗೆ ಹೆಚ್ಚಿಸಲಾಯಿತು. ಗರಿಷ್ಠ 519.60 ಮೀಟರ್ ಎತ್ತರದಲ್ಲಿ 123.081 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಶುಕ್ರವಾರ 518.60 ಮೀಟರ್ ಎತ್ತರದಲ್ಲಿ ಒಟ್ಟು 106.32 ಟಿಎಂಸಿ ನೀರು ಸಂಗ್ರಹವಾಗಿತ್ತು. ಒಳಹರಿವು 73,162 ಕ್ಯುಸೆಕ್ ಇತ್ತು.

ಮಹಾರಾಷ್ಟ್ರದಲ್ಲಿ ಮಳೆ: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಕೊಯ್ನಾ 77 ಮಿ.ಮೀ, ನವಜಾ 66 ಮಿಮೀ, ಮಹಾಬಳೇಶ್ವರ 78 ಮಿಮೀ, ರಾಧಾನಗರಿ 24 ಮಿಮೀ, ಧೂದಗಂಗಾ 48 ಮಿಮೀ ಮಳೆಯಾಗಿದೆ. ಗುರುವಾರಕ್ಕಿಂತ ಶುಕ್ರವಾರ ಮಳೆಯ ಪ್ರಮಾಣ ಕಡಿಮೆಯಾಗಿದೆ.

ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಕಲ್ಲೋಳ ಬ್ಯಾರೇಜ್‌ನಿಂದ ಹೆಚ್ಚಿನ ನೀರನ್ನು ಕೃಷ್ಣಾ ನದಿಗೆ ಹರಿಸುತ್ತಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಅಧಿಕವಾಗಿದೆ.

270 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ: ಜಲಾಶಯದ ಬಲಭಾಗದ ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಎಲ್ಲಾ 6 ಘಟಕಗಳ ಮೂಲಕ 270 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಕೆಪಿಸಿಎಲ್ ಮೂಲಗಳು ತಿಳಿಸಿವೆ.

ಹವಾಮಾನ ಇಲಾಖೆಯ ಮುನ್ಸೂಚನೆ ಮತ್ತು ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆ ಪರಿಗಣಿಸಿದರೆ, ಮುಂದಿನ ದಿನಗಳಲ್ಲಿ ಜಲಾಶಯಕ್ಕೆ ಒಳಹರಿವು ಇನ್ನಷ್ಪು ಹೆಚ್ಚುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ನೀರಿನ ಹೊರಹರಿವಿನ ಪ್ರಮಾಣ ಅಗತ್ಯವಿದ್ದರೆ ಮತ್ತಷ್ಟು ಪರಿಷ್ಕರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾಗೃತಿ ಮೂಡಿಸಿದ ಆಡಳಿತ: ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುತ್ತಿರುವುದರಿಂದ ಆಲಮಟ್ಟಿಯಿಂದ ಕೆಳಭಾಗದ ಕೃಷ್ಣಾ ನದಿಪಾತ್ರದ ಗ್ರಾಮಗಳ ನಿವಾಸಿಗಳು, ರೈತರು, ಮೀನುಗಾರರು ಮತ್ತು ಸಾರ್ವಜನಿಕರು ನದಿಯ ದಡಕ್ಕೆ ಅನಗತ್ಯವಾಗಿ ತೆರಳದಂತೆ, ಜಾನುವಾರುಗಳನ್ನು ನದಿಗೆ ಇಳಿಸದಂತೆ ಹಾಗೂ ಮಕ್ಕಳನ್ನು ನದಿಯ ಸಮೀಪ ಬಿಡದಂತೆ ಜಲಾಶಯ ಆಡಳಿತ ಮನವಿ ಮಾಡಿದೆ.

ಸಂಬಂಧಿಸಿದ ತಾಲೂಕು ಮತ್ತು ಗ್ರಾಮ ಮಟ್ಟದ ಅಧಿಕಾರಿಗಳು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡುವಂತೆ ಸೂಚಿಸಲಾಗಿದೆ. ನದಿ ತೀರಕ್ಕೆ ಜನ-ಜಾನುವಾರು ಸುಳಿಯದಂತೆ ಡಂಗೂರ ಸಾರುವುದು ಮತ್ತು ಧ್ವನಿವರ್ಧಕ ಮೂಲಕ ಜನರನ್ನು ಎಚ್ಚರಿಸಲಾಗುತ್ತಿದೆ.

ಜಲಾಶಯದಿಂದ 4 ಲಕ್ಷ ಕ್ಯುಸೆಕ್ ಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಟ್ಟಾಗ ಮಾತ್ರ ತಾಲೂಕಿನ ಮಸೂತಿ ಗ್ರಾಮದ ಜನವಸತಿ ಪ್ರದೇಶಕ್ಕೆ ಸ್ವಲ್ಪ ನೀರು ಬರುತ್ತದೆ. ಉಳಿದಂತೆ ತಾಲೂಕಿನ ಯಾವುದೇ ಜನವಸತಿ ಪ್ರದೇಶಗಳಿಗೆ ನೀರು ನುಗ್ಗುವುದಿಲ್ಲ. ಮುಂಜಾಗ್ರತೆ ಕ್ರಮವಾಗಿ ಈಜುಗಾರರು, ಉರಗ ತಜ್ಞರು, ಸುಸಜ್ಜಿತ ಬೋಟ್‌ಗಳನ್ನು ಗುರುತು ಮಾಡಿಟ್ಟುಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಎ.ಡಿ. ಅಮರಾವದಗಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೆಹಲಿ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ಕ್ಯಾಂಡಲ್ ಮಾರ್ಚ್
ಯುವಕರನ್ನು ಕೆಣಕಿದವರಾರೂ ಉದ್ಧಾರವಾಗಿಲ್ಲ: ಸುನೀಲಗೌಡ ಪಾಟೀಲ