- ಸರ್ಕಾರಿ ಮಳಿಗೆಗಳು, ಕಾಪೌಂಡ್ ತೆರವಿಗೆ ಸೂಚನೆ । ಪ್ರತಿಭಟನೆ ಸ್ಥಗಿತ
ಕನ್ನಡಪ್ರಭ ವಾರ್ತೆ ಜಗಳೂರು
ನನ್ನ ಆಡಳಿತಾವಧಿಯಲ್ಲಿ ಪರಿಹಾರ ಕೊಟ್ಟು ಪಟ್ಟಣದ ಮುಖ್ಯ ರಸ್ತೆಯಿಂದ ಎರಡೂ ಕಡೆ 69 ಅಡಿಗಳವರೆಗೆ ವಿಸ್ತರಣೆ ಮಾಡಿಯೇ ತೀರುವೆ. ತಕ್ಷಣವೇ ಅಂಬೇಡ್ಕರ್ ವೃತ್ತದಿಂದ ಚಳ್ಳಕೆರೆ ರಸ್ತೆವರೆಗೆ ಬರುವ ಸರ್ಕಾರಿ ಮಳಿಗೆಗಳು, ಕಾಪೌಂಡ್‌ಗಳನ್ನು ನಾಳೆಯಿಂದಲೇ ತೆರುವುಗೊಳಿಸಬೇಕು ಎಂದು ಪಟ್ಟಣ ಪಂಚಾಯಿತಿ, ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ ಶಾಸಕ ಬಿ.ದೇವೇಂದ್ರಪ್ಪ ಸೂಚನೆ ನೀಡಿದರು.ಪಟ್ಟಣದ ತಾಲೂಕು ಕಚೇರಿ ಮುಂಭಾಗ ಮಲ್ಪೆ- ಮೊಳಕಾಲ್ಮೂರು ರಾಜ್ಯ ಹೆದ್ದಾರಿ ಮುಖ್ಯ ರಸ್ತೆ 69 ಅಡಿಗಳವರೆಗೆ ವಿಸ್ತರಣೆಗೆ ಆಗ್ರಹಿಸಿ ರಸ್ತೆ ಅಗಲೀಕರಣ ಹೋರಾಟ ಸಮಿತಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಜಿಲ್ಲಾಧಿಕಾರಿ ಜತೆ ಆಗಮಿಸಿ ಅವರು ಮಾತನಾಡಿದರು. ಮುಖ್ಯ ರಸ್ತೆಯಲ್ಲಿರುವ ಆಸ್ತಿಗಳ ಮಾಲೀಕರು ತಮ್ಮ ಜಾಗ ಬಿಟ್ಟು ಸರ್ಕಾರಿ ಜಾಗ ಒತ್ತುವರಿ ಮಾಡಿದ್ದರೆ 3 ನೋಟಿಸ್ ಕೊಟ್ಟು ತೆರುವುಗೊಳಿಸಬೇಕು ಎಂದರು.
ಮಲ್ಪೆ- ಮೊಳಕಾಲ್ಮೂರು ರಾಜ್ಯ ಹೆದ್ದಾರಿ ಮುಖ್ಯ ರಸ್ತೆ ವಿಸ್ತರಣೆ ಕಾರ್ಯಕ್ಕೆ ಶಾಸಕ ಸ್ಥಾನ ಮುಡಿಪಾಗಿಟ್ಟು ಕೈ ಹಾಕಿರುವೆ. ವರ್ತಕರನ್ನು ಕರೆದು ವಿಶ್ವಾಸಕ್ಕೆ ಪಡೆದಾಗ ಅವರ ಬೇಡಿಕೆಯಂತೆ 69 ಅಡಿಗಳವರೆಗೆ ರಸ್ತೆ ಅಗಲೀಕರಣದಲ್ಲಿ ವಿನಾಯಿತಿ ನೀಡಿದೆ. ಆದರೂ ಹೈಕೋರ್ಟ್ ಮೊರೆ ಹೋಗಿದ್ದು ನೋವು ತಂದಿದೆ. ಇನ್ನು ಮುಂದೆ ವಿಳಂಬವಾಗದೇ ಹೋರಾಟಗಾರರಿಗೆ ಬೆನ್ನೆಲುಬಾಗಿ ನಿಂತು, ಅಧಿಕಾರಿಗಳಿಂದ ಶೀಘ್ರ ಕಟ್ಟಡ ತೆರವು ಕಾಮಗಾರಿ ಪ್ರಕ್ರಿಯೆ ಆರಂಭಿಸುವೆ ಎಂದರು.
ಇದೇ ವೇಳೆ ಹೋರಾಟ ಸಮಿತಿ ಗೌರವ ಅಧ್ಯಕ್ಷ ಆರ್.ಓಬಳೇಶ್, ಅಧ್ಯಕ್ಷ ಸಣ್ಣ ಓಬಯ್ಯ, ಮರೇನಹಳ್ಳಿ ಬಸವರಾಜ್ ಅವರು ಬೇಡಿಕೆಗಳನ್ನು ಪ್ರಸ್ತಾಪಿಸಿ, ಚರ್ಚಿಸಿದರು. ರಸ್ತೆ ಅಗಲೀಕರಣ ಪ್ರಕ್ರಿಯೆ ವಿಳಂಬ ಸಲ್ಲದು. ಜಿಲ್ಲಾಧಿಕಾರಿ ಕೂಡಲೇ ಅಗತ್ಯ ಕ್ರಮ ಕೈಗೊಂಡು, ಕೆವಿಟ್ ಸಲ್ಲಿಸಿ, ಹೈಕೋರ್ಟ್‌ನಲ್ಲಿನ ಅರ್ಜಿ ವಜಾಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಬಳಿಕ ಧರಣಿ ಹಿಂಪಡೆಯಲಾಯಿತು.
- - -
ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಶಾಸಕ ಬಿ.ದೇವೇಂದ್ರಪ್ಪ, ಜಿಲ್ಲಾಧಿಕಾರಿ ಡಾ.ಗಂಗಾಧರ ಸ್ವಾಮಿ ಆಗಮಿಸಿ ಮನವಿ ಸ್ವೀಕರಿಸಿದರು.