ಮಾರುತಿ ಶಿಡ್ಲಾಪುರಕನ್ನಡಪ್ರಭ ವಾರ್ತೆ, ಹಾನಗಲ್ಲ ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಶಾಲೆಯ 690 ವಿದ್ಯಾರ್ಥಿಗಳಿಗೆ ಶೌಚಾಲಯವೇ ಇಲ್ಲ!
ಶತಮಾನ ಕಂಡ ಈ ಶಾಲೆ ಈಗ ಸರ್ಕಾರಿ ಪ್ರೌಢಶಾಲೆಯೂ ಆಗಿದೆ. ಎಲ್‌ಕೆಜಿಯಿಂದ 10ನೇ ತರಗತಿವರೆಗೆ 690 ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ. 27 ರಲ್ಲಿ 12 ಜನ ಕಾಯಂ ಶಿಕ್ಷಕರಿದ್ದಾರೆ. ಉಳಿದವರೆಲ್ಲ ಅತಿಥಿ ಹಾಗೂ ನಿಯೋಜಿತ ಶಿಕ್ಷಕರು. 8 ಕೊಠಡಿಗಳ ಅಗತ್ಯವಿದೆ. 7ನೇ ತರಗತಿಯಲ್ಲಿ 75 ಮಕ್ಕಳಿದ್ದು, ಡಿವಿಜನ್ ಮಾಡಿಲ್ಲ. ಕುಡಿಯಲು ಶುದ್ಧ ನೀರಿನ ಅನುಕೂಲ ಇಲ್ಲ.
ಆರೇಳು ತಿಂಗಳಿನಿಂದ ಐವರು ಅತಿಥಿ ಶಿಕ್ಷಕರಿಗೆ ಗೌರವ ಧನ ನೀಡಿಲ್ಲ, ₹23 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಶೌಚಾಲಯ ಆರಂಭಗೊಂಡು ವಾರದಲ್ಲಿಯೇ ದುರ್ವಾಸನೆ, ಬಳಕೆಗೆ ಆಗದಂತೆ ವಸ್ತುಗಳು ಕಳಚಿ ಬಿದ್ದು ಒಡೆದಿದ್ದರಿಂದ ವಿದ್ಯಾರ್ಥಿನಿಯರು, ಶಿಕ್ಷಕರು ಪರದಾಡುತ್ತಿದ್ದಾರೆ. ಸಮನ್ವಯದ ಕೊರತೆ; ಶಾಲೆಯ ಅಕೌಂಟ್‌ನಲ್ಲಿ ₹19 ಲಕ್ಷ ಅನುದಾನವಿದೆ. ಆದರೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಮುಖ್ಯೋಪಾಧ್ಯಾಯರ ನಡುವೆ ಸಮನ್ವಯವಿಲ್ಲದೆ ಇದನ್ನು ಬಳಸಲಾಗಿಲ್ಲ. 5 ಜನ ಪಿಎಂಶ್ರೀ ಶಿಕ್ಷಕರಿಗೆ ಗೌರವ ಧನ ನೀಡಿಲ್ಲ. ಕಳೆದ ವರ್ಷದ ₹1.5 ಲಕ್ಷ ಅನುದಾನ ಈ ಕಾರಣಕ್ಕಾಗಿಯೇ ಸರ್ಕಾರಕ್ಕೆ ಮರಳಿ ಹೋಗಿದೆ. ಇದೇ ಮಾರ್ಚ್ ಒಳಗೆ ಈ ವರ್ಷದ ಹಣವನ್ನು ಬಳಸುವ ಅನಿವಾರ್ಯತೆ ಇದೆ. ಅದರೆ ಅದು ಸಾಧ್ಯವಾಗುತ್ತಿಲ್ಲ. ಶಾಲೆಯ ₹18 ಸಾವಿರ ವಿದ್ಯುತ್ ಬಿಲ್ ಕೆಇಬಿಗೆ ಪಾವತಿಸಿಲ್ಲ.ತಿಂಗಳುಗಟ್ಟಲೇ ಶಾಲೆಗೆ ಬಾರದ ಪ್ರಭಾರ ಮುಖ್ಯೋಪಾಧ್ಯಾಯ ಈಗ ಅಮಾನತ್ತಿನಲ್ಲಿದ್ದಾರೆ. ಇದೇ ಶಾಲೆಗೆ ವರ್ಗಾವಣೆಗೊಂಡು ಇದೇ ಊರಿನ ಸರ್ಕಾರಿ ಉರ್ದು ಶಾಲೆಯಲ್ಲಿ ಪ್ರಭಾರ ಮುಖ್ಯೋಪಾಧ್ಯಾಯ ವೀರಪ್ಪ ಕರೆಗೊಂಡರ ಅವರಿಗೆ ಮತ್ತೆ ಇದೇ ಶಾಲೆಯ ಮುಖ್ಯೋಪಾಧ್ಯಾಯ ಪ್ರಭಾರವನ್ನೂ ನೀಡಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೇಲಿಂದ ಮೇಲೆ ಸಭೆ ನಡೆಸಿ ಶಾಲೆಯ ವಾತಾವರಣ ಸುಧಾರಿಸುವ ಕ್ರಮಕ್ಕೆ ಮುಂದಾದರೂ ಪರಿಸ್ಥಿತಿ ಬಗೆಹರಿಯುತ್ತಿಲ್ಲ.
ಪಟ್ಟಣದ ಶಾಸಕರ ಮಾದರಿ ಶಾಲೆ ಮುಖ್ಯೋಪಾಧ್ಯಾಯರು, ಶಾಲಾಭಿವೃದ್ಧಿ ಸಮಿತಿ ನಡುವೆ ಸಮನ್ವಯವಿಲ್ಲ. ಇದರಿಂದ ಶಾಲೆಯ ಮಕ್ಕಳ ಕಲಿಕೆಗೆ ಅನಾನುಕೂಲ ಆಗದಂತೆ ವಿಶೇಷ ಗಮನ ಹರಿಸಿದ್ದೇವೆ. ಅಲ್ಲದೆ ಪ್ರೌಢ ಹಾಗೂ ಪ್ರಾಥಮಿಕ ವಿಭಾಗಕ್ಕೆ ಶಿಕ್ಷಕರ ಕೊರತೆಯನ್ನು ನೀಗಿಸಲಾಗಿದೆ. ಈ ಬಾರಿ ಮೊದಲ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮಕ್ಕಳನ್ನು ಸಿದ್ಧ ಮಾಡಲಾಗುತ್ತಿದೆ. ಇಲ್ಲಿನ ಎಲ್ಲ ಸಮಸ್ಯೆಗಳ ಬಗೆಗೆ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯಿಂದ ಬಹಳಷ್ಟು ಸಂಗತಿಗಳು ತಿಳಿದು ಬಂದಿವೆ. ಸ್ವಲ್ಪ ಕಾಲಾವಕಾಶದಲ್ಲಿ ಎಲ್ಲವನ್ನು ಸರಿ ಮಾಡುವುದಕ್ಕೆ ನಾನು ಬದ್ಧ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನಿಕಟ್ಟಿ ಹೇಳಿದರು.