23, 24ರಂದು ಬಳ್ಳಾರಿಯಲ್ಲಿ ಕನ್ನಡ ವೈದ್ಯ ಬರಹಗಾರರ 6ನೇ ರಾಜ್ಯ ಸಮ್ಮೇಳನ

KannadaprabhaNewsNetwork |  
Published : Aug 22, 2025, 01:01 AM IST
ಬಳ್ಳಾರಿಯಲ್ಲಿ ಆಗಸ್ಟ್‌ 23 ಮತ್ತು 24 ರಂದು ಜರುಗುವ ಕನ್ನಡ ವೈದ್ಯ ಬರಹಗಾರರ ರಾಜ್ಯ ಸಮ್ಮೇಳನ ಕುರಿತು ವೈದ್ಯ ಬರಹಗಾರರ ಉಪ ಸಮಿತಿ ಅಧ್ಯಕ್ಷ ಡಾ.ಗಡ್ಡಿ ದಿವಾಕರ ಅವರು ಮಾಹಿತಿ ನೀಡಿದರು.  | Kannada Prabha

ಸಾರಾಂಶ

ಆ. 23 ಮತ್ತು 24 ರಂದು ನಗರದ ಬಿಪಿಎಸ್‌ಸಿ ಶಾಲೆಯ ಸಭಾಂಗಣದಲ್ಲಿ ಕನ್ನಡ ವೈದ್ಯ ಬರಹಗಾರರ 6ನೇ ರಾಜ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ರಾಜ್ಯಶಾಖೆ, ಕನ್ನಡ ವೈದ್ಯ ಬರಹಗಾರರ ಸಮಿತಿ ಹಾಗೂ ಭಾರತೀಯ ವೈದ್ಯಕೀಯ ಸಂಘ ಬಳ್ಳಾರಿ ಶಾಖೆ ಸಹಯೋಗದಲ್ಲಿ ಆ. 23 ಮತ್ತು 24 ರಂದು ನಗರದ ಬಿಪಿಎಸ್‌ಸಿ ಶಾಲೆಯ ಸಭಾಂಗಣದಲ್ಲಿ ಕನ್ನಡ ವೈದ್ಯ ಬರಹಗಾರರ 6ನೇ ರಾಜ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ವೈದ್ಯ ಬರಹಗಾರರ ಉಪ ಸಮಿತಿ ಅಧ್ಯಕ್ಷ ಡಾ. ಗಡ್ಡಿ ದಿವಾಕರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿರುವ ವೃತ್ತಿ ಸಂಬಂಧಿ ಬರಹಗಾರರು ಹಾಗೂ ವೈದ್ಯೇತರ ಬರಹಗಾರರು ಸಾಕಷ್ಟು ಸಂಖ್ಯೆಯಲ್ಲಿದ್ದು ಸಮಾನ ಮನಸ್ಕರು ಸೇರಿ ಕಳೆದ ಆರು ವರ್ಷಗಳ ಹಿಂದೆ ಸಮಿತಿ ರಚಿಸಿ, ರಾಜ್ಯಮಟ್ಟದ ಸಮ್ಮೇಳನ ಆರಂಭಿಸಲಾಯಿತು. ಈಗಾಗಲೇ ಮಂಗಳೂರು, ಬೆಂಗಳೂರು, ಧಾರವಾಡ, ಶಿವಮೊಗ್ಗ ಹಾಗೂ ಬೆಳಗಾವಿಯಲ್ಲಿ ಸಮ್ಮೇಳನ ನಡೆದಿದ್ದು, 6ನೇ ಸಮ್ಮೇಳನವನ್ನು ಆ.23 ಮತ್ತು 24 ರಂದು ಬಳ್ಳಾರಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಸಾಹಿತಿ ಹಾಗೂ ವೈದ್ಯ ಲೇಖಕ ಡಾ.ಅರವಿಂದ ಪಾಟೀಲ್ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಹಿರಿಯ ಲೇಖಕ ಡಾ. ರಹಮತ್ ತರೀಕೆರೆ ಸಮ್ಮೇಳನಕ್ಕೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ವೈದ್ಯಕೀಯ ಪರಿಷತ್ತಿನ ಅಧ್ಯಕ್ಷ ಡಾ. ವೈ.ಸಿ. ಯೋಗಾನಂದ ರೆಡ್ಡಿ, ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಡಾ. ನಾ.ಸೋಮೇಶ್ವರ, ಡಾ. ಟಿ.ಎ. ವೀರಭದ್ರಯ್ಯ, ಡಾ. ವಿ.ಸೂರಿರಾಜು ಉಪಸ್ಥಿತರಿರುವರು.ಸಮ್ಮೇಳನದಲ್ಲಿ ಶ್ರೇಷ್ಠ ವೈದ್ಯಕೀಯ ಹಸ್ತಪ್ರತಿ ಪ್ರಶಸ್ತಿ, ಶ್ರೇಷ್ಠ ವೈದ್ಯೇತರ ಹಸ್ತಪ್ರಶಸ್ತಿ, ಶ್ರೇಷ್ಠ ವೈದ್ಯಕೀಯ ಕೃತಿ ಪ್ರಶಸ್ತಿ, ಶ್ರೇಷ್ಠ ವೈದ್ಯೇತರ ಕೃತಿ ಪ್ರಶಸ್ತಿಯನ್ನು ನೀಡಲಾಗುವುದು. ಈ ಬಾರಿಯ ಶ್ರೇಷ್ಠ ವೈದ್ಯಕೀಯ ಹಸ್ತಪ್ರತಿ ಪ್ರಶಸ್ತಿಯನ್ನು ಡಾ.ಕೆ.ಎಸ್.ಪವಿತ್ರಾ ಅವರ "ಮನೋಲೋಕ " ಕೃತಿಗೆ ನೀಡಲಾಗುತ್ತಿದೆ. ಶ್ರೇಷ್ಠ ವೈದ್ಯೇತರ ಹಸ್ತಪ್ರತಿ ಪ್ರಶಸ್ತಿಯನ್ನು ಡಾ.ಶಾಂತಲಾ ಕುಮಾರಿ ಅವರ "ಅನಿರೀಕ್ಷಿತ ಗುರುಗಳು " ಕೃತಿಗೆ ನೀಡಲಾಗುವುದು. ಅದೇ ರೀತಿ ಶ್ರೇಷ್ಠ ವೈದ್ಯಕೀಯ ಕೃತಿ ಪ್ರಶಸ್ತಿಯನ್ನು ಡಾ.ಕೆ.ಆರ್‌.ಶ್ರೀಧರ್ ಅವರ "ಚಿತ್ತಚಾಂಚಲ್ಯ " ಕೃತಿ ಹಾಗೂ ಶ್ರೇಷ್ಠ ವೈದ್ಯೇತರ ಕೃತಿ ಪ್ರಶಸ್ತಿಯನ್ನು ಡಾ.ಕೆ.ಬಿ. ಸೂರ್ಯಕುಮಾರ್ ಅವರ "ಮಂಗಳಿ " ಕೃತಿಗೆ ನೀಡಲಾಗುವುದು. ಮುಂದಿನ ವರ್ಷದಿಂದ ಕಾವ್ಯ ಪ್ರಕಾರಕ್ಕೆ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಸಮ್ಮೇಳನದಲ್ಲಿ "ಅನ್ಯ ಭಾಷೆಗಳಲ್ಲಿ ವೈದ್ಯ ಸಾಹಿತ್ಯ ", " ಕಾವ್ಯದ ಪ್ರಕಾರಗಳು ಮತ್ತು ಸಾಮಾನ್ಯ ವ್ಯಾಕರಣ ಬಳಕೆ " " ಕಿರಿಯ ವೈದ್ಯರಲ್ಲಿ ಒತ್ತಡದ ಕಿರಿಕಿರಿ " ವಿಷಯ ಕುರಿತು ಗೋಷ್ಠಿಗಳು, ಕನ್ನಡ ನಾಡು, ನುಡಿ, ನೆಲ, ಜಲ ಕುರಿತು ರಸಪ್ರಶ್ನೆ, ಪ್ರಕಾಶಕರೊಂದಿಗೆ ಸಂವಾದ, ಸಮ್ಮೇಳನದಲ್ಲಿ ಪ್ರಶಸ್ತಿ ಪಡೆದ ಕೃತಿಗಳ ಕುರಿತು ಚರ್ಚೆ, ವೈದ್ಯಕವಿಗೋಷ್ಠಿಗಳು ನಡೆಯಲಿವೆ. ಬರಹಗಳಲ್ಲಿ ಸೃಜನಶೀಲತೆ ಕುರಿತು ಕಾರ್ಯಾಗಾರ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳ 500ಕ್ಕೂ ಅಧಿಕ ವೈದ್ಯ ಬರಹಗಾರರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಆ. 24 ರ ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು, ಸಮ್ಮೇಳನದ ಸರ್ವಾಧ್ಯಕ್ಷ ಡಾ. ಅರವಿಂದ ಪಾಟೀಲ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಐಎಂಎ ರಾಜ್ಯ ಗೌರವ ಕಾರ್ಯದರ್ಶಿ ಡಾ. ಸೂರಿರಾಜು ಭಾಗವಹಿಸುವರು. ಐಎಂಎ ರಾಜ್ಯಾಧ್ಯಕ್ಷ ಡಾ. ವಿ.ವಿ.ಚಿನಿವಾಲರ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷ ಡಾ. ಅರವಿಂದ ಪಾಟೀಲ್, ಡಾ. ದಿನೇಶ್ ಗುಡಿ, ಡಾ. ಪರಸಪ್ಪ ಬಂದ್ರಕಳ್ಳಿ, ಡಾ. ಸುಮಾ ಗುಡಿ, ಡಾ. ದಿವ್ಯಾ ಹಾಗೂ ಡಾ. ಮಾಣಿಕರಾವ್ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ