ರಾಜ್ಯದಲ್ಲಿ ಹೊಸ ವಿದ್ಯುತ್ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡುವ ಜತೆಗೆ ಸ್ಮಾರ್ಟ್ ಮೀಟರ್‌ಗಳಿಗೆ ದುಬಾರಿ ದರ ನಿಗದಿ ಮಾಡಿ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಕೆಟಿಟಿಪಿ ನಿಯಮ ಉಲ್ಲಂಘಿಸಿ ಅನರ್ಹರಿಗೆ ಟೆಂಡರ್ ನೀಡಿ 7,500 ಕೋಟಿ ರು. ಬೃಹತ್ ಹಗರಣ
ವಿಧಾನಸಭೆ : ರಾಜ್ಯದಲ್ಲಿ ಹೊಸ ವಿದ್ಯುತ್ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡುವ ಜತೆಗೆ ಸ್ಮಾರ್ಟ್ ಮೀಟರ್‌ಗಳಿಗೆ ದುಬಾರಿ ದರ ನಿಗದಿ ಮಾಡಿ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಕೆಟಿಟಿಪಿ ನಿಯಮ ಉಲ್ಲಂಘಿಸಿ ಅನರ್ಹರಿಗೆ ಟೆಂಡರ್ ನೀಡಿ 7,500 ಕೋಟಿ ರು. ಬೃಹತ್ ಹಗರಣ ನಡೆಸಿದ್ದು, ಈ ಬಗ್ಗೆ ಜಂಟಿ ಸದನ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಸ್ಮಾರ್ಟ್ ಮೀಟರ್‌ಗೆ ದುಬಾರಿ ದರ ನಿಗದಿ ಮಾಡಿರುವ ಹಾಗೂ ಟೆಂಡರ್ ಅನ್ನು ನಿಯಮ ಬಾಹಿರವಾಗಿ ಅನರ್ಹ ಕಂಪೆನಿಗೆ ನೀಡಿರುವ ಬಗ್ಗೆ ಬಿಜೆಪಿ ಸದಸ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
‘ರಾಜ್ಯ ಸರ್ಕಾರ 4998 ರು. ನಿಗದಿ ಮಾಡಿರುವ ಸಿಂಗಲ್ ಫೇಸ್ ಸ್ಮಾರ್ಟ್ ಮೀಟರ್ ಅನ್ನು ಮಾರುಕಟ್ಟೆಯಲ್ಲಿ 1,500 ರು.ಗೆ ಕೊಡಿಸುತ್ತೇನೆ. ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ?’ ಎಂದು ಬಿಜೆಪಿ ಸದಸ್ಯರು ಸವಾಲು ಎಸೆದರು.
ಇದಕ್ಕೆ ಪ್ರತಿಯಾಗಿ, ‘ಸಚಿವರಿಗೆ ನೋಟಿಸ್ ನೀಡದೆ ವಿಷಯ ಪ್ರಸ್ತಾಪಿಸಿದ್ದಾರೆ. ಸದನ ಸಮಿತಿ ತನಿಖೆಗೆ ವಹಿಸಲು ಸೂಕ್ತ ದಾಖಲೆಗಳನ್ನು ಒದಗಿಸಿ. ಬಿಜೆಪಿ ಸದಸ್ಯರ ಆರೋಪಗಳನ್ನು ಕಡತದಿಂದ ತೆಗೆಸಿ’ ಎಂದು ಕಾಂಗ್ರೆಸ್ ಸದಸ್ಯರು ತಿರುಗೇಟು ನೀಡಿದರು. ಇದು ತೀವ್ರ ಕೋಲಾಹಲಕ್ಕೆ ಕಾರಣವಾಯಿತು.
ಬಜೆಟ್ ಮೇಲಿನ ಚರ್ಚೆ ವೇಳೆ ಬಿಜೆಪಿ ಸದಸ್ಯ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಕೆಇಆರ್‌ಸಿ ನಿಯಮ ಉಲ್ಲಂಘಿಸಿ ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡಿದೆ. ಸಿಂಗಲ್ ಫೇಸ್ ಸ್ಮಾರ್ಟ್ ಮೀಟರ್‌ಗೆ 4,998 ರು, ಎಸ್‌ಪಿ-2 ಮೀಟರ್‌ಗೆ 8,880 ರು, ಎಸ್‌ಪಿ-3 (3ಫೇಸ್- ಎಲ್‌ಟಿಸಿಟಿ ಸೇರಿ) ಮೀಟರ್‌ಗೆ ಬರೋಬ್ಬರಿ 28,080 ರು. ನಿಗದಿ ಮಾಡಿದೆ. ಇದನ್ನು ಗ್ರಾಹಕರೇ ಭರಿಸಬೇಕು ಎಂದು ಹೇಳಿದೆ. ಇದು ಜನರಿಗೆ ಹೊಸ ಹೊರೆ ಎಂದು ದೂರಿದರು.
ಇನ್ನು ಸ್ಮಾರ್ಟ್ ಮೀಟರ್ ಮಾತ್ರವಲ್ಲದೆ, ಇದರ ನಿರ್ವಹಣೆಗೆ ಎಎಂಐ ಸಾಫ್ಟ್‌ವೇರ್‌ಗಾಗಿ ಸಿಂಗಲ್ ಫೇಸ್ ಸ್ಮಾರ್ಟ್ ಮೀಟರ್‌ಗೆ 9,000 ರು, 3 ಫೇಸ್ ಎಸ್‌ಪಿ-2 ಸಂಪರ್ಕಕ್ಕೆ ಹಾಗೂ ಎಸ್‌ಪಿ-3 ಸಂಪರ್ಕಕ್ಕೆ 14,160 ರು. ನಿಗದಿ ಮಾಡಿದೆ.
ಆದರೆ, ಮಧ್ಯಪ್ರದೇಶದಲ್ಲಿ ಸಿಂಗಲ್ ಫೇಸ್ ಸ್ಮಾರ್ಟ್ ಮೀಟರ್ ಹಾಗೂ ತಂತ್ರಾಂಶ ಸೇರಿ 5,000 ರು. ನಿಗದಿ ಮಾಡಲಾಗಿದೆ. ಬೇರೆ ಬೇರೆ ಎಲ್ಲಾ ರಾಜ್ಯಗಳಲ್ಲೂ ಕಡಿಮೆ ಬೆಲೆಗೆ ಸಿಗುವ ಮೀಟರ್‌ಗೆ ರಾಜ್ಯದಲ್ಲಿ ದುಬಾರಿ ಬೆಲೆ ನಿಗದಿ ಮಾಡಲಾಗಿದೆ ಎಂದು ಅಶ್ವತ್ಥನಾರಾಯಣ್ ಹೇಳಿದರು.
ಕೆಟಿಟಿಪಿ ನಿಯಮ ಉಲ್ಲಂಘಿಸಿ ಟೆಂಡರ್ : ರಾಜಶ್ರೀ ಎಲೆಕ್ಟ್ರಿಕಲ್ಸ್ ಎಂಬ ಎಲೆಕ್ಟ್ರಿಕಲ್ ಕಂಬ ತಯಾರಿಸುವ ಕಂಪೆನಿಗೆ ಟೆಂಡರ್ ನೀಡಲಾಗಿದೆ. ಕೆಟಿಟಿಪಿ ನಿಯಮಗಳ ಪ್ರಕಾರ ಒಂದು ವರ್ಷದ ಗುತ್ತಿಗೆ ಮೊತ್ತಕ್ಕೆ ದುಪ್ಪಟ್ಟು ವ್ಯವಹಾರವನ್ನು ಕಂಪೆನಿ ಮಾಡಿರಬೇಕು. ಆದರೆ 7,500 ಕೋಟಿ ರು. ಗಾತ್ರದ ಟೆಂಡರ್ ಅನ್ನು ಅರ್ಹತೆಯೇ ಇಲ್ಲದ ಸರಬರಾಜುದಾರ ಕಂಪೆನಿಗೆ ಟೆಂಡರ್ ನೀಡಲಾಗಿದೆ. ರಾಜಶ್ರೀ ಎಲೆಕ್ಟ್ರಿಕಲ್ಸ್ ಸಾಫ್ಟ್‌ವೇರ್ ನಿರ್ವಹಣೆಯನ್ನು ಬೇರೆ ಕಂಪೆನಿಗೆ ವಹಿಸಿದೆ. ಆ ಕಂಪೆನಿಯನ್ನು ಉತ್ತರ ಪ್ರದೇಶದಲ್ಲಿ ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ಡಾ.ಸಿ.ಎನ್. ಅಶ್ವತ್ಥನಾರಾಯಣ್ ದೂರಿದರು.ಸಚಿವರಿಗೆ ರಾಜೀನಾಮೆ ಸವಾಲು
ಬಿಜೆಪಿ ಸದಸ್ಯ ಎಸ್.ಆರ್.ವಿಶ್ವನಾಥ್, ರಾಜ್ಯ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಸರ್ಕಾರ 5,000 ರು. ನಿಗದಿ ಮಾಡಿರುವ ಸ್ಮಾರ್ಟ್ ಮೀಟರ್ ಅನ್ನು ನಾನು 1,500 ರು.ಗೆ ಕೊಡಿಸುತ್ತೇನೆ. ಸಚಿವರು ರಾಜೀನಾಮೆ ನೀಡುತ್ತಾರಾ? ಎಂದು ಸವಾಲು ಹಾಕಿದರು.
ಎಲ್ಲವೂ ಸುಳ್ಳು ಆರೋಪ: ಜಾರ್ಜ್ ತಿರುಗೇಟು
ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ.ಜೆ.ಜಾರ್ಜ್, ಕೆಟಿಟಿಪಿ ಕಾಯಿದೆ ಉಲ್ಲಂಘನೆ ಆಗಿದೆ ಎಂಬುದು ಸುಳ್ಳು. 1,500 ರು.ಗೆ ಸ್ಮಾರ್ಟ್ ಮೀಟರ್ ದೊರೆಯುವುದಾದರೆ ಟೆಂಡರ್ ಕರೆದಾಗ ಇವರೇ ಭಾಗವಹಿಸಿ ಪೂರೈಕೆ ಮಾಡಬೇಕಿತ್ತು. ಕೇಂದ್ರ ಸರ್ಕಾರ ಸೂಚಿರುವ ನಿಯಮಗಳ ಅಡಿಯಲ್ಲೇ ಟೆಂಡರ್ ಕರೆಯಲಾಗಿದೆ. ಇನ್ನು ನನಗೆ ನೋಟಿಸ್ ನೀಡದೆ ವಿಷಯ ಪ್ರಸ್ತಾಪ ಮಾಡಿದ್ದಾರೆ. ಇದರ ಬಗ್ಗೆ ಶುಕ್ರವಾರ ಕೂಲಂಕುಷವಾಗಿ ಉತ್ತರ ನೀಡುತ್ತೇನೆ ಎಂದು ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆ, ಅಕ್ರಮ ಆಗಿರುವ ಬಗ್ಗೆ ದಾಖಲೆ ನೀಡಿ. ಸುಮ್ಮನೆ ಜಂಟಿ ಸದನ ಸಮಿತಿಗೆ ವಹಿಸಿ ಎಂದರೆ ವಹಿಸಲು ಆಗುತ್ತದೆಯೇ? ಎಂದು ಕಿಡಿಕಾರಿದರು.