ಕನ್ನಡಪ್ರಭ ವಾರ್ತೆ ಬೆಂಗಳೂರು
ಎಚ್‌ಡಿಎಫ್‌ಸಿ ಬ್ಯಾಂಕ್‌ನ ₹7.11 ಕೋಟಿ ಎಟಿಎಂ ದರೋಡೆ ಪ್ರಕರಣ ಸಂಬಂಧ ಆರೋಪಿಗಳ ಸೆರೆಗೆ ಹೊರರಾಜ್ಯಗಳಲ್ಲಿ ಕಾರ್ಯಾಚರಣೆ ಮುಂದುವರೆಸಿರುವ ಬೆಂಗಳೂರು ಪೊಲೀಸರು, ದರೋಡೆ ಹಣಕ್ಕಾಗಿ ತೀವ್ರ ಶೋಧ ನಡೆಸಿದ್ದಾರೆ.ಇನ್ನೊಂದೆಡೆ ಈ ಪ್ರಕರಣ ಸಂಬಂಧ ಸಿಎಂಎಸ್ ಕಂಪನಿಯ ಹಾಲಿ ಇಬ್ಬರು ನೌಕರರನ್ನು ದಕ್ಷಿಣ ವಿಭಾಗದ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈಗಾಗಲೇ ಪ್ರಕರಣದ ಸಂಬಂಧ ಗೋವಿಂದಪುರ ಠಾಣೆಯ ಕಾನ್‌ಸ್ಟೇಬಲ್ ಅಣ್ಣಪ್ಪ ನಾಯಕ್ ಹಾಗೂ ಸಿಎಂಎಸ್ ಕಂಪನಿಯ ಮಾಜಿ ಉದ್ಯೋಗಿ ಜೇವಿಯರ್‌ಗೆ ಪೊಲೀಸರು ಗ್ರಿಲ್ ಮಾಡಿದ್ದಾರೆ. ಈ ದರೋಡೆ ಕೃತ್ಯದ ಸಂಚಿನಲ್ಲಿ ಸಿಎಂಎಸ್ ಕಂಪನಿಯ ಹಾಲಿ ಹಾಗೂ ಮಾಜಿ ಉದ್ಯೋಗಿಗಳು ಪಾತ್ರ ವಹಿಸಿರುವ ಮಾಹಿತಿ ತನಿಖೆ ವೇಳೆ ಲಭ್ಯವಾಗಿದೆ ಎಂದು ಮೂಲಗಳು ಹೇಳಿವೆ.
ಆದರೆ ಇದುವರೆಗೆ ದರೋಡೆ ಸಂಚಿನಲ್ಲಿ ಪಾಲ್ಗೊಂಡವರು ಮಾತ್ರ ಪೊಲೀಸರ ಬಲೆಗೆ ಬಿದ್ದಿದ್ದು, ಸಂಚು ಕಾರ್ಯರೂಪಕ್ಕೆ ತಂದವರು ಹಾಗೂ ದರೋಡೆಯಾದ ಹಣ ಪತ್ತೆಯಾಗಿಲ್ಲ. ಹೀಗಾಗಿ ಹಣದ ಸಮೇತ ಪರಾರಿ ಆಗಿರುವ ಆರೋಪಿಗಳಿಗೆ ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.ಬಿಡಿಗಾಸು ಹಣ ಸಿಕ್ಕಿಲ್ಲ; ಆಯುಕ್ತ
ಬೆಂಗಳೂರಿನಲ್ಲಿ ದರೋಡೆಯಾಗಿದ್ದ ₹7 ಕೋಟಿ ಎಟಿಎಂ ಹಣದಲ್ಲಿ ಸುಮಾರು ₹5 ಕೋಟಿ ತಮಿಳುನಾಡಿನ ಚೆನ್ನೈ ನಗರದಲ್ಲಿ ಜಪ್ತಿಯಾಗಿದೆ ಎಂದ ಸುದ್ದಿ ಹರಿದಾಡಿತ್ತು. ಆದರೆ ಹಣದ ಪತ್ತೆಯನ್ನು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನಿರಾಕರಿಸಿದ್ದಾರೆ. ಇದುವರೆಗೆ ತನಿಖೆಯಲ್ಲಿ ಬಿಡಿಗಾಸು ಹಣ ಸಿಕ್ಕಿಲ್ಲ ಎಂದು ಅವರು ‘ಕನ್ನಡಪ್ರಭ’ಕ್ಕೆ ಸ್ಪಷ್ಟಪಡಿಸಿದ್ದಾರೆ.ದರೋಡೆ ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಿದೆ. ಆರೋಪಿಗಳಿಗೆ ಹಗಲಿರುಳು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಶೀಘ್ರವೇ ಆರೋಪಿಗಳನ್ನು ಬಂಧಿಸುತ್ತೇವೆ. ಈ ಕೃತ್ಯದಲ್ಲಿ ಪಾಲ್ಗೊಂಡವರ ಬಗ್ಗೆ ಖಚಿತ ಮಾಹಿತಿ ಇದೆ ಎಂದು ಆಯುಕ್ತರು ಹೇಳಿದ್ದಾರೆ.
ದೂರು ನೀಡಲು 2 ತಾಸುವಿಳಂಬ: ಹಲ ಅನುಮಾನ
ದರೋಡೆ ಕೃತ್ಯದ ಬಗ್ಗೆ ಪೊಲೀಸರಿಗೆ ದೂರು ಕೊಡಲು ಸಿಎಂಎಸ್ ಕಂಪನಿ ಸಿಬ್ಬಂದಿ ಎರಡು ಗಂಟೆ ವಿಳಂಬ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಜಯನಗರದ ಅಶೋಕ್ ಪಿಲ್ಲರ್‌ನಲ್ಲಿ ಸಿಎಂಎಸ್ ಕಂಪನಿಯ ವಾಹನವನ್ನು ದರೋಡೆಕೋರರು ಅಡ್ಡಗಟ್ಟಿದ್ದರು. ಆ ವಾಹನದಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳಾದ ರಾಜು, ತಮ್ಮಯ್ಯ, ಕಸ್ಟೋಡಿಯನ್ ಅಫ್ತಾಬ್ ಹಾಗೂ ಚಾಲಕ ಬಿನೋದ್ ಕುಮಾರ್ ಇದ್ದರು. ಆದರೆ ತಮ್ಮ ಇನ್ನೋವಾಗೆ ಚಾಲಕನ ಹೊರತುಪಡಿಸಿ ಮೂವರನ್ನು ದರೋಡೆಕೋರರು ಹತ್ತಿಸಿಕೊಂಡಿದ್ದರು. ಸಿಎಂಎಸ್ ವಾಹನದಲ್ಲಿ ಚಾಲಕನ ಜತೆ ಮತ್ತಿಬ್ಬರು ದರೋಡೆಕೋರು ತೆರಳಿದ್ದರು. ಆದರೆ ಡೇರಿ ವೃತ್ತದ ಸಮೀಪವೇ ತಮ್ಮ ಕಾರಿನಲ್ಲಿದ್ದ ಕಸ್ಟೋಡಿಯನ್ ಅಫ್ತಾಬ್ ಹಾಗೂ ಸೆಕ್ಯೂರಿಟಿ ಗಾರ್ಡ್‌ಗಳನ್ನು ದರೋಡೆಕೋರರು ಕೆಳಗಿಳಿಸಿದ್ದರು. ನಂತರ ಡೇರಿ ವೃತ್ತದ ಮೇಲ್ಸೇತುವೆಯಲ್ಲಿ ಸಿಎಂಎಸ್ ವಾಹನ ನಿಲ್ಲಿಸಿ ಅದರಲ್ಲಿದ್ದ ಹಣದ ಟ್ರಂಕ್‌ಗಳನ್ನು ಇನ್ನೋವಾಗೆ ತುಂಬಿಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕೃತ್ಯ ಮಧ್ಯಾಹ್ನ 12.30 ಗಂಟೆಗೆ ನಡೆದಿದೆ. ಆದರೆ ಪೊಲೀಸರಿಗೆ ಮಧ್ಯಾಹ್ನ 2.30 ಗಂಟೆಗೆ ಸುಮಾರಿಗೆ ಸಿಬ್ಬಂದಿ ತಿಳಿಸಿದ್ದರು. ಡೇರಿ ವೃತ್ತದಿಂದ ಕೂಗಳತೆ ದೂರದಲ್ಲೇ ಸಿದ್ದಾಪುರ ಪೊಲೀಸ್ ಠಾಣೆ ಇದೆ. ಅಲ್ಲದೆ ಪೊಲೀಸ್ ನಿಯಂತ್ರಣ ಕೊಠಡಿ (ನಮ್ಮ-112) ಸಂಖ್ಯೆ ಸಾರ್ವಜನಿಕವಾಗಿ ಲಭ್ಯವಿದೆ. ಹೀಗಿದ್ದರೂ ಪೊಲೀಸರಿಗೆ ಸಿಎಂಎಸ್ ಕಂಪನಿ ಸಿಬ್ಬಂದಿ ಮಾಹಿತಿ ನೀಡಿಲ್ಲ. ಅಲ್ಲದೆ ದರೋಡೆ ನಡೆದಾಗ ಸಿಬ್ಬಂದಿ ಸಾರ್ವಜನಿಕರ ರಕ್ಷಣೆಗೆ ಕೂಗಿಕೊಂಡಿಲ್ಲ. ಹೀಗಾಗಿ ಕೃತ್ಯದಲ್ಲಿ ಆ ಕಂಪನಿಯ ನೌಕರರ ಮೇಲೆ ಅನುಮಾನ ಮೂಡಿತು. ಈ ವಿಚಾರ ಕೆದಕಿದಾಗ ಓರ್ವ ಮಾಜಿ ಉದ್ಯೋಗಿ ಹಾಗೂ ಇಬ್ಬರು ಹಾಲಿ ನೌಕರರ ಸಿಕ್ಕಿದ್ದಾರೆ ಎಂದು ಮೂಲಗಳು ವಿವರಿಸಿವೆ.ಖಾಲಿ ಟ್ರಂಕ್ ಪತ್ತೆ
ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಪತ್ತೆಯಾದ ದರೋಡೆ ಕೃತ್ಯಕ್ಕೆ ಬಳಸಿದ್ದ ಇನ್ನೋವಾದಲ್ಲಿ ಎರಡು ಖಾಲಿ ಟ್ರಂಕ್ ಗಳು ಸಿಕ್ಕಿವೆ. ಚಿತ್ತೂರಿನಲ್ಲಿ ಕಾರು ನಿಲ್ಲಿಸಿ ಟ್ರಂಕ್‌ನಿಂದ ಬ್ಯಾಗ್‌ಗಳಿಗೆ ಹಣ ತುಂಬಿಕೊಂಡು ಬೇರೊಂದು ಕಾರಿನಲ್ಲಿ ದರೋಡೆಕೋರರು ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.