ಎಸಿಬಿ ಹೆಸರಲ್ಲಿ 1.5 ಕೋಟಿ ದೋಚಿದ್ದ 7 ಮಂದಿ ಅಂದರ್‌

KannadaprabhaNewsNetwork |  
Published : Oct 12, 2025, 02:00 AM ISTUpdated : Oct 12, 2025, 06:42 AM IST
Arrest

ಸಾರಾಂಶ

ಇತ್ತೀಚೆಗೆ ಖಾಸಗಿ ಕಾಲೇಜಿನ ಪ್ರಾಧ್ಯಾಪಕರ ಮನೆಗೆ ಭ್ರಷ್ಟಾಚಾರ ನಿಗ್ರಹ ದಳದ ಸೋಗಿನಲ್ಲಿ ದಾಳಿ ನಡೆಸಿ ಹಣ ದೋಚಿದ್ದ ಅವರ ಮಾಜಿ ಕಾರು ಚಾಲಕ ಸೇರಿ ಏಳು ಮಂದಿಯನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ಇತ್ತೀಚೆಗೆ ಖಾಸಗಿ ಕಾಲೇಜಿನ ಪ್ರಾಧ್ಯಾಪಕರ ಮನೆಗೆ ಭ್ರಷ್ಟಾಚಾರ ನಿಗ್ರಹ ದಳದ ಸೋಗಿನಲ್ಲಿ ದಾಳಿ ನಡೆಸಿ ಹಣ ದೋಚಿದ್ದ ಅವರ ಮಾಜಿ ಕಾರು ಚಾಲಕ ಸೇರಿ ಏಳು ಮಂದಿಯನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತೆಲಂಗಾಣ ರಾಜ್ಯದ ಜಗನ್‌ ಮಹೋನ್‌ ಗೌಡ್‌, ಯಲಹಂಕದ ರಾಜೇಂದ್ರ ಮುನೋತ್‌, ಶ್ರೀನಗರದ ಕಿರಣ್ ಕುಮಾರ್ ಜೈನ್‌, ಶ್ರೀರಾಮಪುರದ ಹೇಮಂತ್‌, ರಾಮಮೂರ್ತಿ ನಗರದ ಶ್ರೀನಿವಾಸ ಗೌಡ, ವಿಜಯನಗರ ಸಮೀಪದ ಚೋಳರಪಾಳ್ಯದ ಶ್ರೀನಿವಾಸ ದೇವಿಶೆಟ್ಟಿ ಹಾಗೂ ದೊಮ್ಮಲೂರಿನ ಶಂಕರ್‌ ಬಂಧಿತರಾಗಿದ್ದು, ಆರೋಪಿಗಳಿಂದ 1.27 ಕೋಟಿ ರು. ನಗದು ಹಾಗೂ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಕಟ್ಟಿಗೇನಹಳ್ಳಿಯ ವಿನಾಯಕ ನಗರದಲ್ಲಿ ನೆಲೆಸಿರುವ ಖಾಸಗಿ ಕಾಲೇಜಿನ ಪ್ರಾಧ್ಯಾಪಕ ಗಿರಿರಾಜ್ ಅವರ ಮನೆಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಸೋಗಿನಲ್ಲಿ ನುಗ್ಗಿ ದುಷ್ಕರ್ಮಿಗಳು ದರೋಡೆ ನಡೆಸಿದ್ದರು. ಈ ಕೃತ್ಯದ ತನಿಖೆಗಿಳಿದ ಇನ್ಸ್‌ಪೆಕ್ಟರ್‌ ಎಂ.ಎಲ್‌. ಕೃಷ್ಣಮೂರ್ತಿ ಸಾರಥ್ಯದಲ್ಲಿ ಸಬ್ ಇನ್ಸ್‌ಪೆಕ್ಟರ್ ಮಧುಸೂದನ್ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಪ್ರಾಧ್ಯಾಪಕರ ಮಾಜಿ ಕಾರು ಚಾಲಕ ಶಂಕರ್ ಸೇರಿ ಏಳು ಮಂದಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಸ್ಟರ್‌ ಮೈಂಡ್‌ ಮಾಜಿ ಕಾರು ಚಾಲಕ:

ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಗಿರಿರಾಜ್ ಅವರು ತಮ್ಮ ಕುಟುಂಬದ ಜತೆ ವಿನಾಯಕ ನಗರದಲ್ಲಿ ನೆಲೆಸಿದ್ದಾರೆ. ಪ್ರಾಧ್ಯಾಪಕರ ಮನೆಯಲ್ಲಿ ಕಾರು ಚಾಲಕನಾಗಿದ್ದ ದೊಮ್ಮಲೂರಿನ ಶಂಕರ್‌, ಕೆಲ ದಿನಗಳ ಹಿಂದಷ್ಟೇ ಅಲ್ಲಿ ಕೆಲಸ ತೊರೆದಿದ್ದ. ಆತನಿಗೆ ಕಾರು ಚಾಲಕನಾಗಿದ್ದಾಗ ಗಿರಿರಾಜ್ ಅವರ ಆರ್ಥಿಕ ವಹಿವಾಟಿನ ಮಾಹಿತಿ ಇತ್ತು. ಹೀಗಿರುವಾಗ ಇತ್ತೀಚೆಗೆ ಜಮೀನು ಮಾರಾಟ ಸಂಬಂಧ 1.5 ಕೋಟಿ ರು. ಹಣವು ಗಿರಿರಾಜ್ ಅವರ ಮನೆಯಲ್ಲಿದ್ದ ವಿಚಾರ ಶಂಕರ್‌ಗೆ ಗೊತ್ತಾಗಿತ್ತು. ಈ ಹಣ ದೋಚಲು ತನ್ನ ಸ್ನೇಹಿತರ ಜೊತೆಗೂಡಿ ಆತ ಸಂಚು ರೂಪಿಸಿ ಕಾರ್ಯರೂಪಕ್ಕಿಳಿಸಿದ್ದ.

ಇನ್ನು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಹೈದರಾಬಾದ್‌ನ ಜಗನ್‌ಗೆ ಬೆಂಗಳೂರಿನಲ್ಲೂ ಸಹ ವ್ಯವಹಾರಿಕ ಸಂಪರ್ಕ ಇತ್ತು. ಈತನೊಂದಿಗೆ ಶಂಕರ್‌ದ್ದು ಹಳೆ ಸ್ನೇಹವಿತ್ತು. ಅದೇ ರೀತಿ ಜಗನ್ ಮೂಲಕ ಶಂಕರ್‌ಗೆ ಎಲೆಕ್ಟ್ರಿಕಲ್ ಅಂಗಡಿ ಮಾಲಿಕ ರಾಜೇಂದ್ರ ಪರಿಚಯವಾಗಿದೆ. ಅಲ್ಲದೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ವೇದಿಕೆ ಹಾಗೂ ಭ್ರಷ್ಟಾಚಾರ ನಿರ್ಮೂಲನ ವೇದಿಕೆ ಎಂಬ ಹೆಸರಿನ ಸಂಘಟನೆಗಳನ್ನು ರಾಜೇಂದ್ರ ಕಟ್ಟಿಕೊಂಡಿದ್ದ. ಈತನ ಮೂಲಕ ಇನ್ನುಳಿದ ಆರೋಪಿಗಳಾದ ಹಾರ್ಡ್‌ವೇರ್ ಅಂಗಡಿಯ ಕಿರಣ್‌, ಶ್ರೀನಿವಾಸ್‌, ಹೇಮಂತ್ ಹಾಗೂ ದೇವಿಶೆಟ್ಟಿ ಸಂಘಟಿತರಾಗಿದ್ದಾರೆ.

ಸೂಟುಬೂಟಲ್ಲಿ ದಾಳಿ!

ಸೆ.19 ರಂದು ಗಿರಿರಾಜ್ ಅ‍ವರ ಮನೆಗೆ ಕಾರಿನಲ್ಲಿ ಸೂಟುಬೂಟು ಹಾಕಿಕೊಂಡು ಟಾಕುಠೀಕಾಗಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಸೋಗಿನಲ್ಲಿ ಆರೋಪಿಗಳ ಪೈಕಿ ರಾಜೇಂದ್ರ ಸೇರಿ ನಾಲ್ವರು ನುಗ್ಗಿದ್ದರು. ಆಗ ಮನೆ ಹೊರಗೆ ನಿಂತು ಶಂಕರ್ ಸೇರಿ ಇನ್ನುಳಿದವರು ಹೊರಗಿನ ಚಲನವಲನದ ಮೇಲೆ ನಿಗಾ ವಹಿಸಿದ್ದರು. ಬಳಿಕ ತಾವು ಇಡಿ ಇಲಾಖೆಯ ಆ್ಯಂಟಿ ಕರೆಪ್ಷನ್ ಬ್ಯೂರೋದ ಅಧಿಕಾರಿಗಳು. ನೀವು ಅಕ್ರಮವಾಗಿ ವ್ಯವಹಾರಗಳಿಂದ ಹಣ ಸಂಪಾದಿಸಿರುವ ಮಾಹಿತಿ ಇದೆ. ಅದಕ್ಕೆ ಮನೆ ದಾಳಿ ಮಾಡಿದ್ದೇವೆ ಎಂದು ಹೇಳಿ ಗಿರಿರಾಜ್ ಮನೆಯನ್ನು ಶೋಧಿಸಿದ್ದರು. ಕೊನೆಗೆ ವಾರ್ಡ್‌ರೋಬ್‌ನಲ್ಲಿಟ್ಟಿದ್ದ 1.5 ಕೋಟಿ ರು. ಹಣ ಹಾಗೂ ಚಿನ್ನಾಭರಣ ದೋಚಿ ಆರೋಪಿಗಳು ಪರಾರಿಯಾಗಿದ್ದರು. ಎರಡು ದಿನಗಳ ಬಳಿಕ ತಮ್ಮ ಮನೆಗೆ ನಕಲಿ ಸರ್ಕಾರಿ ಅಧಿಕಾರಿಗಳು ದಾಳಿ ನಡೆಸಿರುವುದು ಗೊತ್ತಾಗಿ ಯಲಹಂಕ ಪೊಲೀಸರಿಗೆ ಅವರು ದೂರು ನೀಡಿದ್ದರು.

ಮಾಜಿ ಚಾಲಕನಿಂದ ಸುಳಿವು

ಈ ಕೃತ್ಯದಲ್ಲಿ ಪರಿಚಿತರ ಕೈವಾಡದ ಬಗ್ಗೆ ಶಂಕಿಸಿದ ಪೊಲೀಸರು, ಗಿರಿರಾಜ್‌ ಅವರ ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ಬಗ್ಗೆ ಮಾಹಿತಿ ಕಲೆ ಹಾಕಿದರು. ಆಗ ಗಿರಿರಾಜ್ ಅವರ ಬಳಿ ಕಾರು ಚಾಲಕ ಶಂಕರ್‌ ಕೆಲಸ ಬಿಟ್ಟಿರುವ ವಿಷಯ ಗೊತ್ತಾಯಿತು. ಈ ಸುಳಿವು ಆಧರಿಸಿ ತನಿಖೆಗಿಳಿದ ದರೋಡೆಕೋರರ ಜಾಡು ಸಿಕ್ಕಿದೆ. ಅಂತಿಮವಾಗಿ ಶಂಕರ್‌ ನೀಡಿದ ಮಾಹಿತಿ ಮೇರೆಗೆ ಹೈದರಾಬಾದ್‌, ಮದನಪಲ್ಲಿ ಹಾಗೂ ಬೆಂಗಳೂರಿನ ವಿವಿಧೆಡೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಮೂಲಗಳು ವಿವರಿಸಿವೆ.

PREV
Read more Articles on

Recommended Stories

ಋತು ರಜೆ ಕೊಡದಿದ್ದರೆ ಕ್ರಮ : ಲಾಡ್‌
ಪ್ರೇಮಿ ಜೊತೆ ಓಡಿ ಹೋದ ಮಗಳ ತಿಥಿ ಮಾಡಿದ ಅಪ್ಪ