ಕನ್ನಡಪ್ರಭ ವಾರ್ತೆ ರಾಮದುರ್ಗ
ದವಸಧಾನ್ಯ ಖರೀದಿ ವೇಳೆ ರೈತರಿಗೆ ಮಧ್ಯವರ್ತಿಗಳಿಂದ ಹಾನಿ ಆಗಬಾರದೆಂದು ಸರ್ಕಾರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿಗೊಳಿಸುತ್ತಿದೆ ಹಾಗೂ ಖರೀದಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ರೈತರ ನೆರವಿಗೆ ಬಂದಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಹೇಳಿದರು.ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಭವನದಲ್ಲಿ ಟಿಎಪಿಸಿಎಂಸ್ ಸಹಯೋಗದಲ್ಲಿ ಕರ್ನಾಟಕ ಸಹಕಾರ ಮಹಾ ಮಂಡಳದಿಂದ ಬೆಂಬಲ ಬೆಲೆಯಲ್ಲಿ ಹೆಸರು ಖರೀದಿ ಮತ್ತು ಪ್ರಾದೇಶಿಕ ಎಣ್ಣೆ ಬೆಳೆಗಾರರ ಸಹಕಾರ ಸಂಘದ ಸಹಯೋಗದಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಗಳು ಜಾರಿಗೆ ತರುವ ಜನಪರ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ರೈತರು ಮತ್ತು ಜನಸಾಮಾನ್ಯರಿಗೆ ತಲುಪಿಸಲು ಪಂಚಾಯಿತಿ ಮಟ್ಟದಲ್ಲಿ ಸೂಕ್ತ ಪ್ರಚಾರ ಮಾಡಿದರೆ ಮಾತ್ರ ಸದ್ಬಳಕೆಯಾಗಲು ಸಾಧ್ಯವಿದೆ. ಅಧಿಕಾರಿಗಳು ಸರಿಯಾಗಿ ಪ್ರಚಾರ ಮಾಡಿ ಎಲ್ಲರೂ ಯೋಜನೆಯ ಲಾಭ ಪಡೆಯುವಂತೆ ಮಾಡಬೇಕೆಂದರು. ಮಳೆಗೆ ಹಾನಿಯಾದ ರೈತರ ಬೆಳೆಗೆ ಯೋಗ್ಯ ಪರಿಹಾರ ದೊರಕಲು ಅಧಿಕಾರಿಗಳು ಬೆಳೆ ಹಾನಿ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಯಾವ ರೈತರಿಗೂ ಅನ್ಯಾಯವಾದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.ಸಹಾಯಕ ಕೃಷಿ ನಿರ್ದೇಶಕ ಎಫ್.ಎಸ್.ಬೆಳವಟಗಿ ಮಾತನಾಡಿ, ಸರ್ಕಾರ ಬೆಂಬಲ ಬೆಲೆಯಲ್ಲಿ ಹೆಸರು ಮತ್ತು ಸೂರ್ಯಕಾಂತಿ ಖರೀದಿ ಮಾಡುತ್ತಿದೆ. ಗುಣಮಟ್ಟದ ಬೆಳೆಗೆ ಉತ್ತಮ ಬೆಲೆ ದೊರೆಯುತ್ತಿದೆ ಎಂದರು.
ಟಿಎಪಿಸಿಎಂಎಸ್ ಕಾರ್ಯದರ್ಶಿ ತುಳಜಪ್ಪ ನಡಗಡ್ಡಿ ಮಾತನಾಡಿ, ಹೆಸರು ಬೆಳೆ ಪ್ರತಿ ಕ್ವಿಂಟಲ್‌ಗೆ ₹8768ರಂತೆ ಒಬ್ಬ ರೈತರಿಂದ ಪ್ರತಿ ಎಕರೆಗೆ 3 ಕ್ವಿಂಟಲ್ ಗರಿಷ್ಠ 20 ಕ್ವಿಂಟಲ್ ಖರೀದಿ ಮಾಡಲಾಗುವುದು ಮತ್ತು ಸೂರ್ಯಕಾಂತಿ ಪ್ರತಿ ಕ್ವಿಂಟಲ್‌ಗೆ ₹7721ರಂತೆ ಪ್ರತಿ ರೈತರಿಂದ ಎಕರೆಗೆ 4 ಕ್ವಿಂಟಲ್, ಗರಿಷ್ಠ 20 ಕ್ವಿಂಟಲ್ ಖರೀದಿ ಮಾಡಲಾಗುವುದು. ಬೆಂಬಲ ಬೆಲೆಯಲ್ಲಿ ಮಾರಾಟ ಮಾಡುವ ಬಯಸುವ ರೈತರು ಬ್ಯಾಂಕ್ ಪಾಸ್‌ಬುಕ್, ಪಹಣಿ, ಆಧಾರ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಈ ವೇಳೆ ರೈತರಿಗೆ ರಿಯಾಯತಿ ದರದಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಬೀಜಗಳನ್ನು ಅಶೋಕ ಪಟ್ಟಣ ವಿತರಿಸಿದರು. ಕಾರ್ಯಕ್ರಮದಲ್ಲಿ ಟಿಎಪಿಸಿಎಂಎಸ್ ನಿರ್ದೇಶಕರಾದ ಬಿ.ಎಸ್. ಬೆಳವಣಕಿ, ಕುಬೇರಗೌಡ ಪಾಟೀಲ, ಎಪಿಎಂಸಿ ಕಾರ್ಯದರ್ಶಿ ಶಿವಾನಂದ ಮಠ, ಪರಪ್ಪ ಜಂಗವಾಡ ಶಿವಾನಂದ ಚಿಕ್ಕೋಡಿ ಸೇರಿದಂತೆ ಹಲವರಿದ್ದರು.