ಬೆಳಗಾವಿ : ತೀವ್ರ ಕುತೂಹಲ ಕೆರಳಿಸಿರುವ ಡಿಸಿಸಿ ಬ್ಯಾಂಕ್ ಚುನಾವಣೆ ಮೂಲಕ ಜಾರಕಿಹೊಳಿ ಕುಟುಂಬದ ಎರಡು ಕುಡಿಗಳು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪುತ್ರ ರಾಹುಲ್, ಮಾಜಿ ಸಚಿವ ರಮೇಶ ಜಾರಕಿಹೊಳಿ ಪುತ್ರ ಅಮರನಾಥ ಶನಿವಾರ ನಾಮಪತ್ರ ಸಲ್ಲಿಕೆ ಮಾಡಿದರು. ಇವರ ಜೊತೆಯೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೊಳಿ ನಾಮಪತ್ರ ಸಲ್ಲಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಜಾರಕಿಹೊಳಿ ಪೆನಲ್‌ನ 6 ಅಭ್ಯರ್ಥಿಗಳು ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಆಗಮಿಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಗೋಕಾಕ ಕ್ಷೇತ್ರದಿಂದ ಅಮರನಾಥ್ ಜಾರಕಿಹೊಳಿ, ಮೂಡಲಗಿಯಿಂದ ನೀಲಕಂಠ ಕಪ್ಪಲಗುದ್ದಿ, ಬೆಳಗಾವಿಯಿಂದ ರಾಹುಲ್ ಜಾರಕಿಹೊಳಿ, ಹುಕ್ಕೇರಿಯಿಂದ ರಾಜೇಂದ್ರ ಪಾಟೀಲ, ರಾಮದುರ್ಗದಿಂದ ಎಸ್.ಎಸ್.ಢವಣ, ಇತರೆ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನಾಮಪತ್ರ ಸಲ್ಲಿಸಿದ್ದು, ಒಟ್ಟು 13 ಅಭ್ಯರ್ಥಿಗಳು ಜಾರಕಿಹೊಳಿ ಪೆನಲ್‌ದಿಂದ ಕಣಕ್ಕೆ ಇಳಿದಂತಾಗಿದೆ.
ಇನ್ನೂ ಕೊನೆಯ ದಿನ ಶನಿವಾರದಂದು 8 ಜನರಿಂದ 19 ನಾಮಪತ್ರ ಸಲ್ಲಿಕೆಯಾಗಿದ್ದರೆ, ಒಟ್ಟಾರೆಯಾಗಿ 35 ಅಭ್ಯರ್ಥಿಗಳಿಂದ 70 ನಾಮಪತ್ರಗಳು ಸಲ್ಲಿಕೆಯಾಗಿವೆ.
ನಾಮಪತ್ರ ಸಲ್ಲಿಕೆ ಬಳಿಕ ಜಾರಕಿಹೊಳಿ ಮನೆತನದ ಎರಡನೇ ಜನರೇಶನ್ ಚುನಾವಣಾ ಅಖಾಡಕ್ಕೆ ಧುಮಿಕಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಉತ್ತರಿಸಿ, ಕುಟುಂಬ ರಾಜಕಾರಣ ನಮ್ಮ ಕುಟುಂಬಕ್ಕೆ ಮಾತ್ರ ಸಂಬಂಧಿಸಿಲ್ಲ. ಜಿಲ್ಲೆಯಲ್ಲಿನ 50 ವರ್ಷದ ಇತಿಹಾಸ ನೋಡಿದರೇ ಎಲ್ಲ ಕುಟುಂಬಗಳಲ್ಲೂ ಅವರು, ಅವರ ಮಕ್ಕಳು ರಾಜಕೀಯದಲ್ಲಿ ಮುಂದುವರಿದಿದ್ದಾರೆ. ಮುಂದಿನ ಜನರೇಶನ್ ಬೆಳೆಯಬೇಕು ಅಲ್ಲವೇ. ಎಲ್ಲರೂ ನಿನಮ್ಮನ್ನೆ ನಂಬಿಕೊಂಡ ಜನರು, ಸಂಘಟನೆಗಳು ಇರುತ್ತವೆ. ನಾವು ಮಾಡಿದ ರಥ ಅಲ್ಲೆ ಬಿಟ್ಟು ಹೋಗಲು ಆಗಲ್ಲ. ಅದನ್ನು ಎಳೆದುಕೊಂಡು ಹೋಗುವವರು ಬೇಕಾಗುತ್ತದೆ. ಜನ ಎಲ್ಲಿಯವರೆಗೆ ಆಶೀರ್ವದಿಸಿ ಗೆಲ್ಲಿಸುತ್ತಾರೆ ಅಲ್ಲಿಯವರೆಗೆ ಅಧಿಕಾರದಲ್ಲಿ ಇರುತ್ತೇವೆ. ಯಾವಾಗ ಜನ ಬೇಡ ಎನ್ನುತ್ತಾರೆ ಆಗ ಮನೆಯಲ್ಲಿ ಕೂರುತ್ತೇವೆ ಎಂದರು.
ನಾನು ಸ್ಪರ್ಧಿಸಲ್ಲ, ಅಧ್ಯಕ್ಷನಾಗುವುದಿಲ್ಲ ಅಂತಾ ಹೇಳಿದ್ದೆ. ಆದರೆ, ಅನಿವಾರ್ಯ ಪರಿಸ್ಥಿತಿಯಿಂದ ಗೋಕಾಕಿನಿಂದ ಅಮರನಾಥ್ ಸ್ಪರ್ಧಿಸುತ್ತಿದ್ದಾರೆ. ರಾಜೇಂದ್ರ ಅಂಕಲಗಿ ಆರು ತಿಂಗಳ ಹಿಂದೆ ಬೆಳಗಾವಿಯಿಂದ ರಾಹುಲ್ ಜಾರಕಿಹೊಳಿ ಅವರ ಹೆಸರು ಘೋಷಿಸಿದ್ದರು. ನಮ್ಮ ಕುಟುಂಬದವರು ಬಂದಿದ್ದಾರೆ ಅಂತಾ ಯಾವುದೇ ಸಮಸ್ಯೆ ಇಲ್ಲ. ಡಿಸಿಸಿ ಬ್ಯಾಂಕಿಗೆ ಲಿಂಗಾಯತರೇ ಅಧ್ಯಕ್ಷ ಆಗುತ್ತಾರೆ ಎಂದು ಶಾಸಕ ಬಾಲಚಂದ್ರ ಸ್ಪಷ್ಟಪಡಿಸಿದರು.
ರಾಹುಲ್, ಅಮರನಾಥ್ ಮತ್ತು ಚನ್ನರಾಜ ಹಟ್ಟಿಹೊಳಿ ಸ್ಪರ್ಧೆ ಕೊನೆಕ್ಷಣದವರೆಗೂ ಗೌಪ್ಯತೆ ಕಾಯ್ದುಕೊಂಡಿರುವ ಕುರಿತ ಪ್ರಶ್ನೆಗೆ ಬಾಲಚಂದ್ರ ಜಾರಕಿಹೊಳಿ, ಅದೇ ರಾಜಕಾರಣ ಅಂತಾರೆ. ಚನ್ನರಾಜ 2020ರಲ್ಲಿ ನಿಲ್ಲುತ್ತೇವೆ ಎಂದಿದ್ದರು. ಈ ಬಾರಿ ಬೆಳಗಾವಿ, ಖಾನಾಪುರದಿಂದ ಸ್ಪರ್ಧಿಸಲು ಬಯಸಿದ್ದರು. ಆಗ ಸತೀಶ ಜಾರಕಿಹೊಳಿ ಅವರ ಮಾತಿನಂತೆ ಹಿಂದೆ ಸರಿದಿದ್ದರು. ಮೂರು ಕಡೆ ಬಿಟ್ಟು ಕೊಟ್ಟಿದ್ದರು. ಅವರಿಗೆ ಅವಕಾಶ ಕೊಡಿಸಬೇಕು ಅಂತಾ ಚರ್ಚಿಸಿ ಕಣಕ್ಕೆ ಇಳಿಸಿದ್ದೇವೆ ಎಂದರು.
ನಿಪ್ಪಾಣಿಯಲ್ಲಿ ಉತ್ತಮ ಪಾಟೀಲ ಅವರಿಗೆ ಸ್ಪರ್ಧೆ ಮಾಡಬೇಡಿ, ನಮಗೆ ಸಹಕಾರ ಕೊಡುವಂತೆ ನಾನು ಹತ್ತು ಬಾರಿ ಮನವಿ ಮಾಡಿಕೊಂಡಿದ್ದೇನೆ. ಇನ್ನು ವೀರಕುಮಾರ ಪಾಟೀಲ ಮೂಲಕ ಸತೀಶ ಜಾರಕಿಹೊಳಿ ಅವರು ಕೂಡ ಚುನಾವಣೆಗೆ ನಿಲ್ಲಬೇಡಿ. ನಾವು ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಬೆಂಬಲ ನೀಡುತ್ತಿದ್ದೇವೆ ಅಂತಾ ಅವರಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಆದರೂ ಮಾತು ಕೇಳದೇ ಸ್ಪರ್ಧಿಸಿದ್ದಾರೆ. ಸತೀಶ ಜಾರಕಿಹೊಳಿ ಅವರ ಒಪ್ಪಿಗೆ ಪಡೆದಿಲ್ಲ. ಆ ರೀತಿ ಅವರ ಹೆಸರನ್ನು ಉತ್ತಮ ಪಾಟೀಲ ಹೇಳಬಾರದು ಎಂದರು.
ಕಿತ್ತೂರಿನಲ್ಲಿ ವಿಕ್ರಮ್ ಇನಾಮದಾರ್ ನಮ್ಮ ಅಭ್ಯರ್ಥಿ. ಅವರನ್ನು ಗೆಲ್ಲಿಸಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಬಾಬಾಸಾಹೇಬ ಪಾಟೀಲ ಕಾಂಗ್ರೆಸ್ ಶಾಸಕರು ಹಾಗಾಗಿ, ಅವರ ಸಹೋದರನ ನಿಲ್ಲಿಸಿದ್ದಾರೆ. ಯರಗಟ್ಟಿಗೆ ಹೋಗಬೇಡಿ ಅಲ್ಲಿ ವಿಶ್ವಾಸ ವೈದ್ಯ ನಮ್ಮ ಅಭ್ಯರ್ಥಿ ಅಂತಾ ಸತೀಶ ಜಾರಕಿಹೊಳಿ ಹೇಳಿದ್ದರು. ಆ ಪ್ರಕಾರ ನಾವು ಅಲ್ಲಿ ಪ್ರಚಾರ ಮಾಡಲಿಲ್ಲ. ಅವರಿಗೆ ಏನು ಅನುಕೂಲ ಮಾಡಬೇಕು ಮಾಡಿದ್ದೇವೆ ಎಂದು ಹೇಳಿದರು.
ಅಥಣಿಯಿಂದ ಮಹೇಶ ಕುಮಠಳ್ಳಿ, ಕಾಗವಾಡ ಶ್ರೀನಿವಾಸ ಪಾಟೀಲ ನಾಮಪತ್ರ ಸಲ್ಲಿಸುವಾಗ ನಮ್ಮನ್ನು ಒಂದು ಮಾತು ಕೇಳಿಲ್ಲ. ವೈಯಕ್ತಿಕವಾಗಿ ಅವರು ಸ್ಪರ್ಧಿಸಿದ್ದಾರೆ. ಚಿಕ್ಕೋಡಿ, ಅಥಣಿ, ಕಾಗವಾಡ ನಮಗೆ ಸಂಬಂಧ ಇಲ್ಲ. 13 ಅಭ್ಯರ್ಥಿಗಳನ್ನು ಮಾತ್ರ ನಿಲ್ಲಿಸುತ್ತೇವೆ ಅಂತಾ ಹೇಳಿದ್ದೇವು. ಅವರು ನಮ್ಮ ಪೆನಲ್ ಅಭ್ಯರ್ಥಿಗಳಲ್ಲ ಎಂದು ಸ್ಪಷ್ಟಪಡಿಸಿದರು.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಸಂಖ್ಯೆ ಹೆಚ್ಚಾಗುತ್ತದೆ ಎಂಬ ಲಕ್ಷ್ಮಣ ಸವದಿ ಹೇಳಿಕೆಗೆ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಅವರು ಸವದಿ, ಕಾಗೆ ಇಬ್ಬರೇ ಅಂತಾ ಹೇಳಿದರು. ಚಿಕ್ಕೋಡಿಯಲ್ಲಿ ಗಣೇಶ ಹುಕ್ಕೇರಿ ಒಬ್ಬರೆ ಎಂದಿದ್ದಾರೆ. ನಾವು ಸತೀಶ ಜಾರಕಿಹೊಳಿ, ಅಣ್ಣಾಸಾಹೇಬ ಜೊಲ್ಲೆ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿಕೊಂಡು 13 ಜನರನ್ನು ನಿಲ್ಲಿಸಿದ್ದೇವೆ. ಹಾಗಾಗಿ, ನಮ್ಮ ಸೀಟ್ ಹೆಚ್ಚು ಬರುತ್ತವೆ ಎಂದು ತಿರುಗೇಟು ಕೊಟ್ಟರು.
ಸೂರ್ಯ, ಚಂದ್ರರಿಗೆ ಗ್ರಹಣ ಹಿಡಿದಾಗ ಪೂಜೆ ಮಾಡಬೇಕಾಗುತ್ತದೆ ಎಂಬ ಲಕ್ಷ್ಮಣ ಸವದಿ ಹೇಳಿಕೆಗೆ ನನ್ನ ಹೆಸರು ಚಂದ್ರ ಇದೆ. ನಾನು ದೇವರು ಇದ್ದ ಹಾಗೆ, ಜನರು ಬಂದು ನನಗೆ ಪೂಜೆ ಮಾಡುತ್ತಾರೆ. ಆದರೆ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಚುನಾವಣೆ ಅಂದ ಮೇಲೆ ಇಂಥ ಮಾತು ಬರುತ್ತವೆ. ಅಥಣಿ, ಕಾಗವಾಡ, ಚಿಕ್ಕೋಡಿ ನಮಗೆ ಸಂಬಂಧ ಇಲ್ಲ. ಎಲ್ಲವನ್ನೂ ಸರಳ ಮಾಡಲು ಪ್ರಯತ್ನಿಸುತ್ತೇವೆ. ಆಗಲಿಲ್ಲ ಎಂದರೆ ಅನಿವಾರ್ಯವಾಗಿ ಚುನಾವಣೆ ಮಾಡುತ್ತೇವೆ ಎಂದರು.
ಹುಕ್ಕೇರಿ ಕೆಇಬಿ ಚುನಾವಣೆ ಡಿಸಿಸಿ ಬ್ಯಾಂಕಿಗೆ ಹೋಲಿಕೆ ಮಾಡಬೇಡಿ. ಅದು ಆ ತಾಲೂಕಿಗೆ ಸಿಮೀತವಾದ ಚುನಾವಣೆ. ಇದು ಜಿಲ್ಲಾಮಟ್ಟದ್ದು. ಅ.19ರಂದು ಬರುವ ಫಲಿತಾಂಶ ರಾಜ್ಯಮಟ್ಟದಲ್ಲಿ ಸುದ್ದಿಯಾಗುತ್ತದೆ. ಇನ್ನು ಹುಕ್ಕೇರಿಯಲ್ಲಿ ರಾಜೇಂದ್ರ ಪಾಟೀಲ ಅವರನ್ನು ಅಭ್ಯರ್ಥಿಯಾಗಿ ನಿಲ್ಲಿಸಿದ್ದೇವೆ. ನಾಳೆಯಿಂದ ಕೆಲಸ ಶುರು ಮಾಡುತ್ತೇವೆ. ಮತದಾರರು ಕೊಟ್ಟ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ ಎಂದ ಅವರು, ರಾಮದುರ್ಗದಲ್ಲಿ ಎಸ್.ಎಸ್.ಢವಣ ನಮ್ಮ ಅಭ್ಯರ್ಥಿ. ಅಶೋಕ ಪಟ್ಟಣ, ಮಹಾದೇವಪ್ಪ ಯಾದವಾಡ ಏನು ಮಾಡುತ್ತಾರೋ ನಮಗೆ ಗೊತ್ತಿಲ್ಲ. ಢವಣ ಗೆಲ್ಲಿಸಲು ನಾವು ಶ್ರಮಿಸುತ್ತೇವೆ. ಇನ್ನು ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ಮಾಡುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದರು.
ಚನ್ನರಾಜ ಹಟ್ಟಿಹೊಳಿ ಅವರು ಮೊನ್ನೆ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಚೇರ್ಮನ್ ಆಗಿದ್ದಾರೆ. ಸಹಕಾರ ಕ್ಷೇತ್ರಕ್ಕೆ ಬರಬೇಕು. ಕೆಲಸ ಮಾಡುವ ಆಸೆ ಇದೆ. ಬೆಳಗಾವಿ ಜಿಲ್ಲೆಯ ಬಹಳಷ್ಟು ಜನರು ಸಹಕಾರ ಕ್ಷೇತ್ರದಿಂದ ಬಂದು ಎತ್ತರದ ಮಟ್ಟಕ್ಕೆ ಬೆಳೆದಿದ್ದಾರೆ. ಎಂ.ಕೆ.ಹುಬ್ಬಳ್ಳಿ ಫ್ಯಾಕ್ಟರಿ ಸುಧಾರಣೆ ಮಾಡಲು ಹೊರಟಿದ್ದಾರೆ. ರೈತರಿಗೆ ಎಷ್ಟು ಒಳ್ಳೆಯ ಕೆಲಸ ಮಾಡುತ್ತಾರೆ ಮಾಡಲಿ ಎಂದರು.
ಬಹಳಷ್ಟು ಕಡೆ ಅವಿರೋಧ ಆಗುವ ಸಾಧ್ಯತೆ ಇತ್ತು. ಆದರೆ, ಕೆಲವೊಂದು ಜನರು ಅಲ್ಲೆಲ್ಲಾ ಯಾರನ್ನೋ ಕರೆದುಕೊಂಡು ಬಂದು ಚುನಾವಣೆಗೆ ನಿಲ್ಲಿಸುತ್ತಿದ್ದಾರೆ. ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ ಎನ್ನುವುದು ಅವರಿಗೂ ಗೊತ್ತಿದೆ. ಆದರೂ ನಮ್ಮ ಅಭ್ಯರ್ಥಿಗಳಿಗೆ ತೊಂದರೆ ಕೊಡಬೇಕು ಅಂತಾ ಈ ರೀತಿ ಮಾಡುತ್ತಿದ್ದಾರೆ. ಏನೇ ಆದರೂ ನಮ್ಮ 13 ಅಭ್ಯರ್ಥಿಗಳು ನೂರಕ್ಕೆ ನೂರು ಗೆಲ್ಲುತ್ತಾರೆ. ಒಳ್ಳೆಯ ಅಭ್ಯರ್ಥಿಗಳನ್ನು ತಂದು ಅವರಿಗಿಂತ ಚನ್ನಾಗಿ ಬ್ಯಾಂಕ್ ನಡೆಸಿ ತೋರಿಸುತ್ತೇವೆ. ತಮ್ಮ ವಿರುದ್ಧ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್ ಮುಂದೆ ವಿಶ್ವಾಸ ವೈದ್ಯ, ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ತಮ್ಮ ನಾಯಕರನ್ನು ಹೆಗಲ ಮೇಲೆ ಹೊತ್ತುಕೊಂಡು ವಿಜಯೋತ್ಸವ ಆಚರಿಸಿದರು. ಇದೇ ವೇಳೆ ಗಣೇಶ ಹುಕ್ಕೇರಿ ಅಭಿಮಾನಿಗಳು ಕೂಡ ಅವರ ಮತ್ತು ವಿಧಾನಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಭಾವಚಿತ್ರ ಹಿಡಿದು ಸಂಭ್ರಮಾಚರಣೆ ಮಾಡಿದರು.
ಡಿಸಿಸಿ ಬ್ಯಾಂಕಿಗೆ ಲಿಂಗಾಯತರ ದೊಡ್ಡ ಸೇವೆ, ಕೊಡುಗೆ ಇದೆ. ಮುರಗೋಡ ಮಹಾಂತ ಅಜ್ಜನವರ ಆಶೀರ್ವಾದದಿಂದ ಬ್ಯಾಂಕ್ ಕಟ್ಟಿದ್ದು, ಹೆಚ್ಚಿನ ಸೇವೆ ಸಲ್ಲಿಸಿದ್ದು, ಶ್ರಮ ಪಟ್ಟಿದ್ದಾರೆ. ಹಾಗಾಗಿ, ಲಿಂಗಾಯತರನ್ನೆ ಅಧ್ಯಕ್ಷರನ್ನಾಗಿ ಮಾಡುತ್ತೇವೆ. ಹಾಲು ಒಕ್ಕೂಟಕ್ಕೆ ನಾನು ಅಧ್ಯಕ್ಷನಾಗಿದ್ದೇನೆ. ಎಲ್ಲ ಸಮಾಜದವರು ಇರಬೇಕು ಅಂತಾ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಬಾಲಚಂದ್ರ ಹೇಳಿದರು.
ನನ್ನ ಗೆಲುವನ್ನು ಯರಗಟ್ಟಿ ತಾಲೂಕಿನ ಎಲ್ಲ ಪಿಕೆಪಿಎಸ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕಾರ್ಯದರ್ಶಿಗಳು ಹಾಗೂ ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಸಮಸ್ತ ಮಹಾಜನತೆಗೆ ಅರ್ಪಿಸುತ್ತೇನೆ. ಸತೀಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಅವರ ಆಶೀರ್ವಾದದಿಂದ ಗೆಲುವು ಸಾಧ್ಯ ಆಗಿದೆ. ನನ್ನ ಜೊತೆಗೆ ಅವಿರೋಧವಾಗಿ ಆಯ್ಕೆ ಆಗಿರುವ ನಾಲ್ವರು ಅಭ್ಯರ್ಥಿಗಳಿಗೆ ಅಭಿನಂದಿಸುತ್ತೇನೆ. ಇನ್ನುಳಿದಂತೆ ಅ.19ರಂದು ನಡೆಯಲಿರುವ ಚುನಾವಣೆಯಲ್ಲಿ 9 ಅಭ್ಯರ್ಥಿಗಳು ಗೆದ್ದು, ಜಾರಕಿಹೊಳಿ ಪೆನಲ್ 13 ಸ್ಥಾನಗಳೊಂದಿಗೆ ಡಿಸಿಸಿ ಬ್ಯಾಂಕ್ ಚುಕ್ಕಾಣಿ ಹಿಡಿಯಲಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಈ ವೇಳೆ ನೀಲಕಂಠ ಕಪ್ಪಲಗುದ್ದಿ ಮಾತನಾಡಿ, ನನ್ನ ಗೆಲುವನ್ನು ಇಡೀ ಜಾರಕಿಹೊಳಿ ಕುಟುಂಬಕ್ಕೆ ಹಾಗೂ ನಮ್ಮ ಭಾಗದ ಪಿಕೆಪಿಎಸ್‌ಗಳಿಗೆ ಅರ್ಪಣೆ ಮಾಡುತ್ತೇನೆ. ಸತತ ಮೂರನೇ ಬಾರಿ ಗೆಲುವು ಸಾಧಿಸಿದ್ದೇನೆ. ನಮ್ಮದೇ ಪೆನಲ್ ಬಹುಮತ ಪಡೆಯಲಿದೆ. ಅಧ್ಯಕ್ಷ, ಉಪಾಧ್ಯಕ್ಷರು ನಮ್ಮವರೇ ಆಗುತ್ತಾರೆ. ಬಡ್ಡಿ ರಹಿತ ಸಾಲ, ಸಬ್ಸಿಡಿ ದರದಲ್ಲಿ ಟ್ರ್ಯಾಕ್ಟರ್ ಸಾಲ ಸೇರಿ ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ಅನುಕೂಲ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.
4 ಸದಸ್ಯರು ಅವಿರೋಧ ಆಯ್ಕೆ
ಚಿಕ್ಕೋಡಿ ತಾಲೂಕಿನಿಂದ ಯಾವುದೇ ಬಣಕ್ಕೆ ಸೇರದ ಗಣೇಶ ಹುಕ್ಕೇರಿ ಒಬ್ಬರೆ ನಾಮಪತ್ರ ಸಲ್ಲಿಸಿದ್ದರು. ಜಾರಕಿಹೊಳಿ ಬಣದಿಂದ ಸ್ಪರ್ಧಿಸಿದ್ದ ಸವದತ್ತಿ ವಿರೂಪಾಕ್ಷಿ ಮಾಮನಿ, ಯರಗಟ್ಟಿಯ ವಿಶ್ವಾಸ ವೈದ್ಯ, ಗೋಕಾಕನಿಂದ ಅಮರನಾಥ್ ಜಾರಕಿಹೊಳಿ, ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಬಹುತೇಕ ಅವಿರೋಧವಾಗಿ ಆಯ್ಕೆಯಾಗುವ ಸಂಭವವಿದೆ.
ಸಚಿವ ಸತೀಶ ಜಾರಕಿಹೊಳಿ ಪುತ್ರ ರಾಹುಲ ಜಾರಕಿಹೊಳಿ ಬೆಳಗಾವಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದು, ಎದುರಾಳಿ ಯಾರೂ ಇರುವುದಿಲ್ಲ ಎನ್ನಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಒಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಮೂಡಲಗಿ ಕ್ಷೇತ್ರದಲ್ಲಿಯೂ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರೂ ನಾನೇ ಅವಿರೋಧವಾಗಿ ಆಯ್ಕೆಯಾಗಿದ್ದೇನೆ ಎಂದು ಬ್ಯಾಂಕ್ ಆವರಣದಲ್ಲಿ ಜಾರಕಿಹೊಳಿ ಬಣದ ಅಭ್ಯರ್ಥಿ ನೀಲಕಂಠ ಕಪ್ಪಲಗುದ್ದಿ ವಿಜಯೋತ್ಸವ ಆಚರಿಸಿದರು.