ಕನ್ನಡಪ್ರಭ ವಾರ್ತೆ ಕಾಗವಾಡ
ಕಾರ್ಖಾನೆ ಮಾಲೀಕರು, ತಮ್ಮ ಲಾಭಕ್ಕಾಗಿ ವೈಯಕ್ತಿಕ ಹಿತಾಸಕ್ತಿಗಳನ್ನು ತೊರೆದು, ಪಕ್ಷಾತೀತವಾಗಿ ಒಂದಾಗುವುದಾದರೇ ಕಬ್ಬು ಬೆಳೆಗಾರ ರೈತರು ಯಾಕೆ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು, ಜ್ಯಾತ್ಯಾತೀತವಾಗಿ ಪಕ್ಷಾತೀತವಾಗಿ ಒಗ್ಗಟ್ಟಾಗಬಾರದು ಎಂದು ಸ್ವಾಭಿಮಾನಿ ಶೇತಕರಿ ಸಂಘಟನೆ ಸಂಸ್ಥಾಪಕ ಮತ್ತು ಮಾಜಿ ಸಂಸದ ರಾಜು ಶೆಟ್ಟಿ ಪ್ರಶ್ನಿಸಿದರು.ತಾಲೂಕಿನ ಶಿರಗುಪ್ಪಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಸಭಾಭವನದಲ್ಲಿ ಶುಕ್ರವಾರ ನಡೆದ ಕಬ್ಬು ಬೆಳೆಗಾರ ರೈತರ ಸಭೆಯಲ್ಲಿ ಅವರು ಮಾತನಾಡಿದರು. ಕಾರ್ಖಾನೆ ಮಾಲೀಕರು ರೈತರನ್ನು ಲೂಟಿ ಮಾಡುತ್ತಿದ್ದಾರೆ. ರೈತರು ತಾವು ಬೆಳೆದ ಕಬ್ಬಿಗೆ ಯೋಗ್ಯ ಬೆಲೆ ಮತ್ತು ಕಬ್ಬಿನ ತೂಕದಲ್ಲಾಗುವ ಮೋಸವನ್ನು ತಪ್ಪಿಸಲು ರೈತರು ಒಕ್ಕಟ್ಟಿನಿಂದ ಹೋರಾಟ ಮಾಡಬೇಕೆಂದು ರೈತರಿಗೆ ಕರೆ ನೀಡಿದರು.
ಕಳೆದ 24 ವರ್ಷಗಳಿಂದ ರೈತರು ಬೆಳೆದ ಕಬ್ಬಿಗೆ ಯೋಗ್ಯ ಬೆಲೆ ದೊರಕಿಸಿಕೊಡಲು ಪ್ರತಿ ವರ್ಷ ಸಕ್ಕರೆ ಪರಿಷತ್ ಆಯೋಜಿಸಿ, ಯಾವುದೇ ರಾಜಕೀಯ ಹಿತಾಸಕ್ತಿ, ಸ್ಥಾನಮಾನಕ್ಕೆ ಆಸೆ ಪಡೆದೇ ಹೋರಾಟ ಮಾಡುತ್ತಿದ್ದೇನೆ. ಮೊದಲಿನ 10-12 ವರ್ಷ ಹಿಂದೆ ರೈತರಲ್ಲಿದ್ದ ಉತ್ಸಾಹ ಕ್ರಮೇಣ ಕಳೆದ 4-5 ವರ್ಷಗಳಿಂದ ಕಡಿಮೆಯಾಗಿದೆ. ಇದರಿಂದ ಕಾರ್ಖಾನೆ ಮಾಲೀಕರು ದರ್ಪ ತೋರುತ್ತಿದ್ದು, ಕಬ್ಬಿಗೆ ಯೋಗ್ಯ ಬೆಲೆ ನೀಡದೇ ರೈತರನ್ನು ವಂಚಿಸುತ್ತಿದ್ದಾರೆ. ಯಾವುದೇ ಸರ್ಕಾರವಿದ್ದರೂ ಸಕ್ಕರೆ ಲಾಭಿಗೆ ಒಳಗಾಗದೇ ಇರುವುದಿಲ್ಲ. ಎಲ್ಲ ಪಕ್ಷದ ನಾಯಕರೂ ಸಕ್ಕರೆ ಕಾರ್ಖಾನೆಗಳ ಮಾಲೀಕರಾಗಿದ್ದಾರೆ. ರೈತರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.ರೈತ ಮುಖಂಡ ಸುರೇಶ ಚೌಗುಲೆ ಮಾತನಾಡಿ, ಈ ವರ್ಷ ಕಬ್ಬು ಬೆಳೆ ಕಡಿಮೆ ಇದ್ದು, ಕಾರ್ಖಾನೆಗಳು ಮೂರೇ ತಿಂಗಳಲ್ಲಿ ಕಬ್ಬಿಲ್ಲದೇ ಹಂಗಾಮು ಬಂದ್ ಮಾಡಲಿವೆ. ಆದ್ದರಿಂದ ರೈತರು ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಲು ಪೈಪೋಟಿ ಮಾಡದೇ ಕಾರ್ಖಾನೆಗಳ ದರ ಘೋಷಣೆಯಾಗುವ ವರಗೆ ತಾಳ್ಮೆ ತೋರಬೇಕೆಂದು ಮನವಿ ಮಾಡಿಕೊಂಡರು.
ರೈತರಾದ ಅಜೀತ ಕರವ ತಮ್ಮ ಅನಿಸಿಕೆ ಹಂಚಿಕೊಂಡರು. ಈ ವೇಳೆ ರೈತರಾದ ದಾದಾ ಪಾಟೀಲ, ತಮ್ಮಾ ತಮದಡ್ಡಿ, ಅಣ್ಣಾಸಾಬ ಕಾತ್ರಾಳೆ ಸೇರಿದಂತೆ ಕಾಗವಾಡ, ಶಿರಗುಪ್ಪಿ ಜುಗೂಳ, ಉಗಾರ ಮತ್ತು ಇಂಗಳಿ ಗ್ರಾಮಗಳ ರೈತರು ಇದ್ದರು.