ಮುಂಗಾರು ಪೂರ್ವ ಮಳೆಗೆ 7 ಜನ ಸಾವು, ಮೇ ಮಳೆಗೆ ತತ್ತರಿಸಿದ ಜನಜೀವನ

KannadaprabhaNewsNetwork |  
Published : May 30, 2025, 12:11 AM IST
ರಟ್ಟೀಹಳ್ಳಿ ತಾಲೂಕಿನ ಕಮಲಾಪುರ ಗ್ರಾಮದಲ್ಲಿ ಸಿಡಿಲು ಬಡಿದು 12 ಕುರಿಗಳು ಮೃತಪಟ್ಟಿರುವುದು.(ಸಂಗ್ರಹ ಚಿತ್ರ) | Kannada Prabha

ಸಾರಾಂಶ

ಮೇ ತಿಂಗಳಲ್ಲಿ 45.90 ಮಿಮೀ ವಾಡಿಕೆ ಮಳೆ ಬದಲು 113.80 ಮಿಮೀ ಮಳೆ ಸುರಿದಿದೆ. ಜೂನ್‌ ತಿಂಗಳಲ್ಲಿ ಆರಂಭವಾಗಬೇಕಿದ್ದ ಕೃಷಿ ಚಟುವಟಿಕೆಗಳು ಈಗಲೇ ಶುರುವಾಗಿವೆ. ಕೆಲವು ಕಡೆ ಅತಿಯಾದ ಮಳೆಯಿಂದ ಕೃಷಿ ಚಟುವಟಿಕೆಗೆ ಅಡ್ಡಿಯಾಗಿದೆ.

ನಾರಾಯಣ ಹೆಗಡೆ

ಹಾವೇರಿ: ಮಾನ್ಸೂನ್‌ ಆರಂಭಕ್ಕೂ ಮುನ್ನವೇ ಮೇ ತಿಂಗಳಲ್ಲಿ ಸುರಿದ ಮುಂಗಾರು ಪೂರ್ವ ಮಳೆಯಿಂದ ಜಿಲ್ಲೆಯ ಜನಜೀವನ ತತ್ತರಿಸಿದೆ. ಒಂದು ತಿಂಗಳ ಅವಧಿಯಲ್ಲಿ ಸಿಡಿಲು, ಗೋಡೆ ಕುಸಿತದಿಂದ ಜಿಲ್ಲೆಯಲ್ಲಿ 7 ಜನ ಮೃತಪಟ್ಟಿದ್ದರೆ, 53 ಪ್ರಾಣಿಗಳು ಸಾವಿಗೀಡಾಗಿವೆ.

ಮೇ ತಿಂಗಳಲ್ಲಿ 45.90 ಮಿಮೀ ವಾಡಿಕೆ ಮಳೆ ಬದಲು 113.80 ಮಿಮೀ ಮಳೆ ಸುರಿದಿದೆ. ಜೂನ್‌ ತಿಂಗಳಲ್ಲಿ ಆರಂಭವಾಗಬೇಕಿದ್ದ ಕೃಷಿ ಚಟುವಟಿಕೆಗಳು ಈಗಲೇ ಶುರುವಾಗಿವೆ. ಕೆಲವು ಕಡೆ ಅತಿಯಾದ ಮಳೆಯಿಂದ ಕೃಷಿ ಚಟುವಟಿಕೆಗೆ ಅಡ್ಡಿಯಾಗಿದೆ. ಏಪ್ರಿಲ್‌ನಲ್ಲಿ 40.40 ಮಿಮೀ ವಾಡಿಕೆ ಮಳೆ ಬದಲಿಗೆ 50.80 ಮಿಮೀ ಮಳೆ ಸುರಿದಿತ್ತು. ಮೇ ತಿಂಗಳಲ್ಲಿ ಮೇ 28ರ ವರೆಗೆ 45.9 ಮಿಮೀ ವಾಡಿಕೆ ಮಳೆ ಬದಲು 113.8 ಮಿಮೀ ಸುರಿದಿದೆ. ಕಳೆದ ಒಂದೇ ವಾರದಲ್ಲಿ 14.90 ಮಿಮೀ ವಾಡಿಕೆ ಮಳೆ ಬರಬೇಕಿತ್ತು. ಆದರೆ, ವಾಸ್ತವವಾಗಿ 75.20 ಮಿಮೀ ಮಳೆ ಸುರಿದಿದೆ. ಮುಂಗಾರು ಪೂರ್ವ ಮಳೆಗೆ ಜಿಲ್ಲೆಯಲ್ಲಿ 90 ಮನೆಗಳಿಗೆ ಹಾನಿ ಉಂಟಾಗಿದೆ. ಇದರಲ್ಲಿ 9 ಅರ್ಜಿ ಸ್ವೀಕೃತವಾಗಿದ್ದು, 74 ಅರ್ಜಿಗಳು ತಿರಸ್ಕೃತಗೊಂಡಿವೆ. ₹4.20 ಲಕ್ಷ ಪರಿಹಾರ ನೀಡಲಾಗಿದೆ.ಮುಂಗಾರು ಪೂರ್ವ ಮಳೆಯ ಆರಂಭದಲ್ಲಿ ಸಿಡಿಲು, ಗಾಳಿ, ಮಳೆ ಅಬ್ಬರ ಜೋರಾಗಿತ್ತು. ಈ ವೇಳೆ ಸಿಡಿಲಾಘಾತಕ್ಕೆ ಐವರು ಮೃತಪಟ್ಟಿದ್ದು, ಗೋಡೆ ಕುಸಿದು ಇಬ್ಬರು ಅಸುನೀಗಿದ್ದಾರೆ. ಅಂದಾಜು ₹2.99 ಕೋಟಿ ಮೌಲ್ಯದ ಮೂಲಸೌಕರ್ಯ ಹಾನಿಗೀಡಾಗಿದೆ. ಸುಮಾರು 132 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದ್ದು, ₹17 ಲಕ್ಷ ಪರಿಹಾರ ಬಾಕಿ ಇದೆ. 53.88 ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿಗೀಡಾಗಿದ್ದು, ₹7.91 ಲಕ್ಷ ಪರಿಹಾರವನ್ನು ಸರ್ಕಾರ ರೈತರಿಗೆ ನೀಡಬೇಕಿದೆ.ಆಕಳು, ಎಮ್ಮೆ, ಕುರಿ, ಮೇಕೆ, ಸೇರಿ ಒಟ್ಟು 53 ಪ್ರಾಣಿಗಳು ಮಳೆ ಹಾಗೂ ಸಿಡಿಲಾಘಾತಕ್ಕೆ ಮರಣ ಹೊಂದಿವೆ. ಮೇ ತಿಂಗಳು ಸೇರಿದಂತೆ ಮುಂಗಾರು ಪೂರ್ವ ಮಳೆ ಹಲವು ಅವಾಂತರಗಳಿಗೆ ಕಾರಣವಾಗಿದ್ದು, ಮುಂಗಾರು ಮಳೆ ಆರಂಭವಾಗಿದ್ದು, ಸಂಭವನೀಯ ಅನಾಹುತಗಳ ತಡೆಗಟ್ಟುವಲ್ಲಿ ಜಿಲ್ಲಾಡಳಿತ ಮತ್ತಷ್ಟು ಮುಂಜಾಗ್ರತೆ ವಹಿಸಬೇಕಿದೆ.

ಸಿಡಿಲಿಗೆ ಐವರು ಬಲಿ

ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ವೇಳೆ ಸಿಡಿಲಿಗೆ ಐವರು, ಗೋಡೆ ಕುಸಿದು ಇಬ್ಬರು ಮೃತಪಟ್ಟಿದ್ದಾರೆ. ಏ. 24ರಂದು ಶಿಗ್ಗಾಂವಿ ತಾಲೂಕು ಮಾಳಪ್ಪ ಗಡ್ಡೆ ಹೊಲದಲ್ಲಿ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮೇ 12ರಂದು ಒಂದೇ ದಿನ ಹಿರೇಕೆರೂರು ತಾಲೂಕಿನ ಡಮಳ್ಳಿ ಗ್ರಾಮದ ನಾಗಪ್ಪ ಕುಸಗೂರ, ರಟ್ಟಿಹಳ್ಳಿ ತಾಲೂಕು ಕುಡಪಲಿ ಗ್ರಾಮದ ಸುನೀಲ ಕಾಳೇರ ಹಾಗೂ ಹಾನಗಲ್ಲ ತಾಲೂಕಿನ ಕೊಂಡೋಜಿ ಗ್ರಾಮದ ಮರಿಯವ್ವ ನಾಯ್ಕರ ಸಿಡಿಲು ಬಿಡುದ ಅಸುನೀಗಿದ್ದಾರೆ.

ಹಾವೇರಿ ತಾಲೂಕು ಹೊಸರಿತ್ತಿ ಗ್ರಾಮದಲ್ಲಿ ಮೇ 19ರಂದು ಹನುಮಂತಗೌಡ ರಾಮನಗೌಡ್ರ ಮೃತಪಟ್ಟಿದ್ದಾರೆ. ರಾಣಿಬೆನ್ನೂರು ತಾಲೂಕಿನ ಶಿಡಗನಾಳ ಬಳಿ ಮೇ 23ರಂದು ಹೊಲದಲ್ಲಿ ಸಿಡಿಲು ಬಡಿದು ಯಲ್ಲಮ್ಮ ಉರ್ಮಿ ಮೃತಪಟ್ಟಿದ್ದಾರೆ. ಹಾನಗಲ್ಲ ತಾಲೂಕಿನ ಕಾಲ್ವೆ ಯಲ್ಲಾಪುರ ಗ್ರಾಮದ ರೋಹನ ಹರಿಜನ ಏ. 28ರಂದು ಮಳೆ- ಗಾಳಿಗೆ ಗೋಡೆ ಕುಸಿದು ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ಸರ್ಕಾರ ತಲಾ ₹5 ಲಕ್ಷ ಪರಿಹಾರ ನೀಡಿದೆ. ಹಾನಗಲ್ಲ ತಾಲೂಕು ಕಿರವಾಡಿ ಗ್ರಾಮದ ಶಾಂತಮ್ಮ ತಳವಾರ ಗೋಡೆ ಕುಸಿದು ಮೇ 27ರಂದು ಮೃತಪಟ್ಟಿದ್ದು, ಪರಿಹಾರ ನೀಡುವುದು ಬಾಕಿಯಿದೆ.

ತಾಲೂಕುವಾರು ಮಳೆಯ ಮಾಹಿತಿ (ಮಿಮೀಗಳಲ್ಲಿ) ತಾಲೂಕು ವಾಡಿಕೆ ಮಳೆ ವಾಸ್ತವ ಮಳೆಬ್ಯಾಡಗಿ 56.90 148.70ಹಾನಗಲ್ಲ 54.90 141.60ಹಾವೇರಿ 65.20 141.10ಹಿರೇಕೆರೂರು 48.10 95.08ರಾಣಿಬೆನ್ನೂರು 65.00 123.90ಸವಣೂರು 65.30 106.40ಶಿಗ್ಗಾಂವಿ 55.10 121.20ರಟ್ಟೀಹಳ್ಳಿ 58.10 149.00

ಒಟ್ಟು 45.90 113.80

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ