ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ಮುಂಬಡ್ತಿ, ವರ್ಗಾವಣೆ ಹಾಗೂ ಅನುಕಂಪದ ಆಧಾರದ ನೇಮಕ ಸೇರಿ ಇಲಾಖೆಯಲ್ಲಿ ಯಾವುದೇ ರೀತಿಯ ಕಡತಗಳ ವಿಲೇವಾರಿಗೆ ವಿಳಂಬ ಮಾಡಬಾರದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರು ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದ್ದಾರೆ.
ಈ ಸೂಚನೆ ಬೆನ್ನಲ್ಲೇ ತಿಂಗಳ ಅವಧಿಯಲ್ಲಿ 70ಕ್ಕೂ ಹೆಚ್ಚಿನ ಸಬ್ ಇನ್ಸ್‌ಪೆಕ್ಟರ್‌ಗಳು ಹಾಗೂ ಇನ್ಸ್‌ಪೆಕ್ಟರ್‌ಗಳಿಗೆ ಮುಂಬಡ್ತಿ ಭಾಗ್ಯ ಸಿಕ್ಕಿದೆ. ಹಾಗೆಯೇ ಅನುಕಂಪದ ಆಧಾರದಡಿ ಹಲವು ದಿನಗಳಿಂದ ಉದ್ಯೋಗದ ನಿರೀಕ್ಷೆಯಲ್ಲಿದ್ದ ಸುಮಾರು 20 ಪೊಲೀಸ್ ಕುಟುಂಬಗಳಿಗೆ ಕೆಲಸ ದೊರಕಿದೆ ಎಂದು ಇಲಾಖೆಯ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಕಳೆದ ಎರಡು ವರ್ಷಗಳಿಂದ ವರ್ಗಾವಣೆ ಹಾಗೂ ಮುಂಬಡ್ತಿ ಪ್ರಕ್ರಿಯೆಯಲ್ಲಿ ನಿಧಾನಗತಿ ಪರಿಣಾಮ ರಾಜ್ಯ ಪೊಲೀಸ್ ಇಲಾಖೆಯ ಕೇಂದ್ರ ಕಚೇರಿಯಲ್ಲೇ ಇನ್ಸ್‌ಪೆಕ್ಟರ್, ಡಿವೈಎಸ್ಪಿಗಳು ಹಾಗೂ ಎಎಸ್ಪಿಗಳು ಸೇರಿ 100ಕ್ಕೂ ಹೆಚ್ಚಿನ ಅಧಿಕಾರಿಗಳು ಹುದ್ದೆ ನಿರೀಕ್ಷೆಯಲ್ಲಿದ್ದರು. ಅಲ್ಲದೆ ಮುಂಬಡ್ತಿ ವಿಚಾರವಾಗಿ ಪೊಲೀಸ್ ಕೇಂದ್ರ ಕಚೇರಿಗೆ ಇನ್ಸ್‌ಪೆಕ್ಟರ್‌ಗಳು ಹಾಗೂ ಪಿಎಸ್‌ಐಗಳು ಅಲೆದು ಹೈರಣಾಗಿದ್ದರು. ಇತ್ತ ತಮ್ಮ ತಂದೆ-ತಾಯಿ ಅಕಾಲಿಕ ಮರಣಕ್ಕೆ ತುತ್ತಾದ ಬಳಿಕ ಪೊಲೀಸರ ಮಕ್ಕಳು ಅನುಕಂಪದ ಆಧಾರದಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿದ್ದು, ಕಡತಗಳು ವಿಲೇವಾರಿಯಾಗದೆ ನೊಂದಿದ್ದರು. ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿದ ಡಿಜಿಪಿ ಸಲೀಂ ಅವರು, ಕಾಲಮಿತಿಯೊಳಗೆ ಕಡತ ವಿಲೇವಾರಿಗೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.
ನಿವೃತ್ತಿ ಮರು ದಿನವೇ ಮುಂಬಡ್ತಿ:
ತಮ್ಮ ವಿಭಾಗಗಳಲ್ಲಿ ಪಿಐ, ಪಿಎಸ್‌ಐ, ಎಎಸ್‌ಐ ಹಾಗೂ ಹೆಡ್ ಕಾನ್‌ಸ್ಟೇಬಲ್‌ಗಳು ನಿವೃತ್ತಿಯಾದರೆ ಆ ಹುದ್ದೆಗಳಿಗೆ ಸೇವಾ ಹಿರಿತನ ಆಧಾರದ ಮೇರೆಗೆ ಮರು ದಿನವೇ ಮುಂಬಡ್ತಿ ನೀಡಬೇಕು. ಈ ಮುಂಬಡ್ತಿ ನೀಡಿಕೆ ವಿಚಾರದಲ್ಲಿ ಅನಗತ್ಯ ವಿಳಂಬ ಬೇಡ. ಸೇವಾ ಜೇಷ್ಠತೆ ಮಾತ್ರವಲ್ಲದೆ ಸಿಬ್ಬಂದಿ ಸೇವೆ ಪುರಸ್ಕರಿಸುವಂತೆಯೂ ಡಿಜಿಪಿ ಸೂಚಿಸಿದ್ದಾರೆ.
ಅದೇ ರೀತಿ ಇತರೆ ಮುಂಬಡ್ತಿ ಪ್ರಕ್ರಿಯೆ ಕೂಡ ಕಾಲಾನುಕಾಲಕ್ಕೆ ನಡೆಯಬೇಕು. ಹಿರಿಯ ಅಧಿಕಾರಿಗಳ ಪದೋನ್ನತಿಯಲ್ಲಿ ಸರ್ಕಾರ ತಡೆ ಮಾಡುವುದಿಲ್ಲ. ಸರಿಯಾದ ಸಮಯಕ್ಕೆ ಪದೋನ್ನತಿ ಕೊಡುತ್ತದೆ. ಹೀಗಿರುವಾಗ ಕಿರಿಯ ಅಧಿಕಾರಿಗಳಿಗೆ ಮುಂಬಡ್ತಿ ನೀಡಿಕೆಗೆ ಅನ್ಯಾಯ ಸರಿಯೇ ಎಂದು ಡಿಜಿಪಿ ಸಲೀಂ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದ್ದಾರೆ.
ಅನ್ಯ ಇಲಾಖೆಗೆ ಶಿಫಾರಸು:
ಮೃತ ಪೊಲೀಸ್ ಅಧಿಕಾರಿ-ಸಿಬ್ಬಂದಿ ಕುಟುಂಬದವರಿಗೆ ಅನುಕಂಪ ಆಧಾರದಡಿ ಇಲಾಖೆಯಲ್ಲಿ ಕಾನೂನು ಪ್ರಕಾರ ಉದ್ಯೋಗ ನೀಡಲಾಗುತ್ತದೆ. ಒಂದು ವೇಳೆ ಇಲಾಖೆಯಲ್ಲಿ ಹುದ್ದೆಗಳು ಲಭ್ಯತೆ ಇಲ್ಲದೆ ಹೋದರೆ ಅನ್ಯ ಇಲಾಖೆಯಲ್ಲಿ ಅವರ ನೇಮಕಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ ಎಂದು ಸಲೀಂ ತಿಳಿಸಿದರು.
ನನ್ನ ಮೇಜಿನ ಮೇಲೆ ಯಾವುದೇ ಕಾರಣಕ್ಕೂ ಕಡತಗಳಿರಬಾರದು ಎಂಬ ನಿಲುವು ತಾಳಿದ್ದೇನೆ. ಆಯಾ ದಿನದ ಕೆಲಸ ಆ ದಿನವೇ ಮುಗಿಯಬೇಕು. ಕಡತಗಳ ವಿಲೇವಾರಿಗೆ ಅನಗತ್ಯ ವಿಳಂಬ ಮಾಡದಂತೆ ಸೂಚಿಸಿದ್ದೇನೆ.
-ಡಾ.ಎಂ.ಎ.,ಸಲೀಂ, ರಾಜ್ಯ ಪೊಲೀಸ್ ಮಹಾನಿರ್ದೇಶಕ