ಜಿಲ್ಲೆಯಲ್ಲಿ ೭೦೪ ಗಣಪತಿ ವಿಸರ್ಜನೆಗಳ ಬಾಕಿ

KannadaprabhaNewsNetwork |  
Published : Sep 30, 2026, 01:45 AM IST
೨೯ಕೆಎಂಎನ್‌ಡಿ-1ರೂಟ್‌ಮ್ಯಾಪ್ ಸಿದ್ಧಪಡಿಸಿರುವುದನ್ನು ಪ್ರದರ್ಶಿಸುತ್ತಿರುವ ಡಾ.ವಿ.ಜೆ.ಶೋಭಾರಾಣಿ. | Kannada Prabha

ಸಾರಾಂಶ

ನಿತ್ಯ ಜಿಲ್ಲೆಯಲ್ಲಿ ಕನಿಷ್ಠ ೨೫೦ ರಿಂದ ೩೫೦ ಗಣೇಶಮೂರ್ತಿಗಳನ್ನು ವಿಸರ್ಜನೆ ಮಾಡಲಾಗುತ್ತಿದೆ. ವಿಸರ್ಜನೆಗೂ ಮುನ್ನ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ ಅವರು ಗಣೇಶಮೂರ್ತಿ ಸಾಗುವ ಮೆರವಣಿಗೆಯ ರೂಟ್ ಮ್ಯಾಪ್ ಸಿದ್ಧಪಡಿಸಿಕೊಂಡು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿಕೊಳ್ಳುತ್ತಿದ್ದರು. ಅದಕ್ಕೆ ತಕ್ಕಂತೆ ಪೊಲೀಸರನ್ನು ಭದ್ರತೆಗೆ ನಿಯೋಜಿಸುತ್ತಿದ್ದರು. ಮೆರವಣಿಗೆಯುದ್ದಕ್ಕೂ ಎಲ್ಲೆಡೆಯಿಂದ ಸೀಸಿ ಕ್ಯಾಮೆರಾಗಳ ದೃಶ್ಯಾವಳಿಗಳು ಸೆರೆಯಾಗುವಂತೆ ಅಳವಡಿಸಿ ಭದ್ರತಾ ಲೋಪ ಎಲ್ಲಿಯೂ ಆಗದಂತೆ ವಹಿಸಿದ ಎಚ್ಚರಿಕೆಯಿಂದ ಈ ಬಾರಿ ಗಣೇಶ ಮೂರ್ತಿಗಳ ವಿಸರ್ಜನೆ ಶಾಂತಿಯುತವಾಗಿ ನಡೆಯಲು ಸಾಧ್ಯವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಒಟ್ಟು ೪,೧೭೭ ಗಣೇಶಮೂರ್ತಿಗಳ ಪೈಕಿ ಇದುವರೆಗೆ ೩,೪೭೪ ಗಣೇಶಮೂರ್ತಿಗಳನ್ನು ವಿಸರ್ಜಿಸಲಾಗಿದ್ದು, ಇನ್ನೂ ೭೦೩ ಗಣೇಶಮೂರ್ತಿಗಳು ವಿಸರ್ಜನೆಗೆ ಬಾಕಿ ಉಳಿದಿವೆ. ನವೆಂಬರ್ ೫ಕ್ಕೆ ನಾಗಮಂಗಲದ ಕೋಟೆ ಗಣಪತಿ ವಿಸರ್ಜನೆಯೊಂದಿಗೆ ಗಣೇಶಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ಸಮಾಪ್ತಿಗೊಳ್ಳಲಿದೆ.

ಕಳೆದೆರಡು ವರ್ಷ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಾಗಮಂಗಲ ಹಾಗೂ ಮದ್ದೂರಿನಲ್ಲಿ ಸಂಭವಿಸಿದ್ದ ಕೋಮು ಗಲಭೆಯಿಂದ ತಲ್ಲಣಗೊಂಡಿತ್ತು. ಗಣೇಶ ವಿಸರ್ಜನಾ ಮೆರವಣಿಗೆ ಸಮಯದಲ್ಲಿ ಪರಿಸ್ಥಿತಿ ಪ್ರಕ್ಷುಬ್ಧಗೊಳ್ಳುವಂತೆ ಮಾಡಿತ್ತು. ಆದರೆ, ಗಲಭೆ ನಡೆದ ಸ್ಥಳದಲ್ಲಿ ಈ ಬಾರಿ ಶಾಂತಿಯುತವಾಗಿ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ನಡೆದಿರುವುದು ಹಾಗೂ ನಾಗಮಂಗಲದಲ್ಲಿ ಹಿಂದೂ- ಮುಸ್ಲಿಮರು ಒಂದಾಗಿ ಭಾವೈಕ್ಯತೆಯ ಗಣೇಶೋತ್ಸವ ಆಚರಿಸಿರುವುದು ಆಶಾದಾಯಕ ಬೆಳವಣಿಗೆ ಎನ್ನಬಹುದು.

ನಿತ್ಯ ೨೫೦ ರಿಂದ ೩೫೦ ವಿಸರ್ಜನೆ:

ನಿತ್ಯ ಜಿಲ್ಲೆಯಲ್ಲಿ ಕನಿಷ್ಠ ೨೫೦ ರಿಂದ ೩೫೦ ಗಣೇಶಮೂರ್ತಿಗಳನ್ನು ವಿಸರ್ಜನೆ ಮಾಡಲಾಗುತ್ತಿದೆ. ವಿಸರ್ಜನೆಗೂ ಮುನ್ನ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ ಅವರು ಗಣೇಶಮೂರ್ತಿ ಸಾಗುವ ಮೆರವಣಿಗೆಯ ರೂಟ್ ಮ್ಯಾಪ್ ಸಿದ್ಧಪಡಿಸಿಕೊಂಡು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿಕೊಳ್ಳುತ್ತಿದ್ದರು. ಅದಕ್ಕೆ ತಕ್ಕಂತೆ ಪೊಲೀಸರನ್ನು ಭದ್ರತೆಗೆ ನಿಯೋಜಿಸುತ್ತಿದ್ದರು. ಮೆರವಣಿಗೆಯುದ್ದಕ್ಕೂ ಎಲ್ಲೆಡೆಯಿಂದ ಸೀಸಿ ಕ್ಯಾಮೆರಾಗಳ ದೃಶ್ಯಾವಳಿಗಳು ಸೆರೆಯಾಗುವಂತೆ ಅಳವಡಿಸಿ ಭದ್ರತಾ ಲೋಪ ಎಲ್ಲಿಯೂ ಆಗದಂತೆ ವಹಿಸಿದ ಎಚ್ಚರಿಕೆಯಿಂದ ಈ ಬಾರಿ ಗಣೇಶ ಮೂರ್ತಿಗಳ ವಿಸರ್ಜನೆ ಶಾಂತಿಯುತವಾಗಿ ನಡೆಯಲು ಸಾಧ್ಯವಾಗಿದೆ.

೩೭೮ ಸೀಸಿ ಕ್ಯಾಮೆರಾ ಅಳವಡಿಕೆ:

ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ವೇಳೆ ಕಾನೂನು- ಸುವ್ಯವಸ್ಥೆ ಕಾಪಾಡುವ ಸಲುವಾಗಿ ಇಲಾಖೆಯ ೧೧೦ ಸೀಸಿ ಕ್ಯಾಮೆರಾಗಳ ಜೊತೆಗೆ ೨೬೮ ಹೊಸ ಸೀಸಿ ಕ್ಯಾಮೆರಾಗಳನ್ನು ಬಾಡಿಗೆಗೆ ಪಡೆದು ಒಟ್ಟು ೩೭೮ ಸೀಸಿ ಕ್ಯಾಮೆರಾಗಳನ್ನು ಎಲ್ಲೆಡೆ ಅಳವಡಿಸಲಾಗಿತ್ತು. ಇದರ ಜೊತೆಗೆ ಇಲಾಖೆಯ ೩ ಡ್ರೋನ್ ಸೇರಿದಂತೆ ಹಲವು ಡ್ರೋನ್‌ಗಳನ್ನು ಬಾಡಿಗೆಗೆ ಪಡೆದು ಮೆರವಣಿಗೆ ಸಾಗುವ ಮಾರ್ಗಗಳ ಮೇಲೆ ಹದ್ದಿನ ಕಣ್ಣಿಡಲಾಗಿತ್ತು. ಕೆಲವೊಂದು ಕಡೆ ಹೆಚ್ಚುವರಿ ಸೀಸಿ ಕ್ಯಾಮೆರಾಗಳ ಅಗತ್ಯ ಕಂಡುಬಂದಲ್ಲಿ ತಕ್ಷಣವೇ ನೂರಾರು ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಿ ಕಟ್ಟೆಚ್ಚರ ವಹಿಸಿದ್ದರು. ಗಣೇಶಮೂರ್ತಿ ಸಂಪೂರ್ಣವಾಗಿ ವಿಸರ್ಜನೆಯಾಗುವವರೆಗೂ ಸ್ಥಳದಲ್ಲೇ ಇದ್ದು ಲೈವ್ ಫೋಟೋ ಕಳುಹಿಸುವಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಎಸ್‌ಪಿ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರು. ವಿಭಾಗವಾರು ಗಣೇಶಮೂರ್ತಿಗಳ ವಿಸರ್ಜನಾ ಕಾರ್ಯಕ್ರಮಕ್ಕೆ ಅಗತ್ಯ ಪೊಲೀಸ್ ಭದ್ರತಾ ವ್ಯವಸ್ಥೆ, ಸೀಸಿ ಕ್ಯಾಮರಾಗಳ ಕಣ್ಗಾವಲಿನೊಂದಿಗೆ ಶಾಂತಿಯುತವಾಗಿ ಕಾರ್ಯಕ್ರಮ ನಡೆಯಲು ನೆರವಾಗುತ್ತಿದ್ದಾರೆ.

------

ಬಾಕಿ ಇರುವ ಗಣೇಶಮೂರ್ತಿಗಳ ವಿವರ

ಮಳವಳ್ಳಿ -೨೩

ಶ್ರೀರಂಗಪಟ್ಟಣ - ೨೯೧

ಮಂಡ್ಯ - ೧೪೦

ನಾಗಮಂಗಲ - ೨೫೦

ಒಟ್ಟು - ೭೦೪

-------

ಶಾಂತಿಯುತ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆಗೆ ಎಲ್ಲ ರೀತಿಯ ಭದ್ರತಾ ವ್ಯವಸ್ಥೆ ಮಾಡಲಾಗುತ್ತಿದೆ. ೩೭೮ ಸೀಸಿ ಕ್ಯಾಮೆರಾ. ಡ್ರೋನ್‌ಗಳ ಕಣ್ಗಾವಲು ಇಡಲಾಗಿದೆ. ೭೦೪ ಗಣೇಶಮೂರ್ತಿಗಳ ವಿಸರ್ಜನೆ ಮಾತ್ರ ಬಾಕಿ ಉಳಿದಿದೆ. ಉಳಿದಂತೆ ೩೪೭೪ ಗಣೇಶಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ನಾಗಮಂಗಲ ಕೋಟೆ ಗಣಪತಿಯೊಂದಿಗೆ ನವೆಂಬರ್ ೫ಕ್ಕೆ ವಿಸರ್ಜನಾ ಕಾರ್ಯಕ್ರಮ ಅಂತ್ಯಗೊಳ್ಳಲಿದೆ.

-ಡಾ.ವಿ.ಜೆ.ಶೋಭಾರಾಣಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಮಂಡ್ಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರಗಾಲದಲ್ಲಿ ಹನಿ ನೀರೂ ಬಂಗಾರ: ಸಿಇಒ
ಹಾಸನಾಂಬೆ ಜಾತ್ರೆ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಬಿಂಬಿಸುವಂತಿರಲಿ