ಜೀವಾಮೃತ ಬ್ಯಾಂಕ್‌ಗೆ 7147 ಮಾತೆಯರ ಎದೆಹಾಲು ದಾನ!

KannadaprabhaNewsNetwork |  
Published : Apr 20, 2026, 02:30 AM IST
ಹುಬ್ಬಳ್ಳಿಯ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜೀವಾಮೃತ ಬ್ಯಾಂಕ್‌ | Kannada Prabha

ಸಾರಾಂಶ

ಹುಬ್ಬಳ್ಳಿ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ರಾಜ್ಯದ ಮೊದಲ "ಜೀವಾಮೃತ ಬ್ಯಾಂಕ್‌ "ಗೆ 2 ವರ್ಷದಲ್ಲೇ 7147 ಮಾತೆಯರು 1,530 ಲೀಟರ್‌ ಎದೆಹಾಲು ದಾನ ಮಾಡುವ ಮೂಲಕ 2,599 ಶಿಶುಗಳಿಗೆ ಮಾತೃಸ್ಪರ್ಶ ನೀಡಿದ್ದಾರೆ.

ಅಜೀಜಅಹ್ಮದ ಬಳಗಾನೂರಹುಬ್ಬಳ್ಳಿ: ಇಲ್ಲಿನ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ರಾಜ್ಯದ ಮೊದಲ "ಜೀವಾಮೃತ ಬ್ಯಾಂಕ್‌ "ಗೆ 2 ವರ್ಷದಲ್ಲೇ 7147 ಮಾತೆಯರು 1,530 ಲೀಟರ್‌ ಎದೆಹಾಲು ದಾನ ಮಾಡುವ ಮೂಲಕ 2,599 ಶಿಶುಗಳಿಗೆ ಮಾತೃಸ್ಪರ್ಶ ನೀಡಿದ್ದಾರೆ.ಮಗುವಿಗೆ ರೋಗ ನಿರೋಧಕ ಶಕ್ತಿ ವೃದ್ಧಿ ಹಾಗೂ ಪೌಷ್ಟಿಕಾಂಶ ಪಡೆಯಲು ತಾಯಿಯ ಹಾಲು ಬಹುಮುಖ್ಯ ಪಾತ್ರವಹಿಸುತ್ತದೆ. ಮಗು ಜನನದ ಬಳಿಕ ಕೆಲ ಬಾಣಂತಿಯರು ಎದೆಹಾಲಿನ ಕೊರತೆ ಅನುಭವಿಸುವ ಪರಿಣಾಮ ಆ ಮಗು ಹಾಲು ದೊರೆಯದೆ ಅಪೌಷ್ಟಿಕತೆಯಿಂದ ಆರೋಗ್ಯ ಸಮಸ್ಯೆ ಎದುರಿಸುವ ಸಾಧ್ಯತೆ ಇರುತ್ತದೆ. ಜತೆಗೆ ಸಾವು ಸಹ ಸಂಭವಿಸಿದ ಉದಾಹರಣೆಗಳಿವೆ.

ಇದನ್ನು ಮನಗಂಡು ಕೆಎಂಸಿಆರ್‌ಐನಲ್ಲಿ 2024ರ ಏ. 12ರಂದು "ಹುಬ್ಬಳ್ಳಿ ಮಿಡ್‌ಟೌನ್ ರೋಟರಿ ಕ್ಲಬ್ ಮತ್ತು ಕೊಪ್ಪೆಲ್ ರೋಟರಿ ಕ್ಲಬ್ " (ಯುಎಸ್‌ಎ) ಸಹಯೋಗದೊಂದಿಗೆ ರಾಜ್ಯದ ಮೊದಲ "ಜೀಮಾಮೃತ " ಹಾಲು ಬ್ಯಾಂಕ್‌ ಸ್ಥಾಪಿಸಿದೆ. ಆಸ್ಪತ್ರೆಗೆ ಹೆರಿಗೆಗೆ ಬಂದ ತಾಯಂದಿರು ಮಗುವಿಗೆ ಜನ್ಮ ನೀಡಿದ ಬಳಿಕ ಅವರಲ್ಲಿರುವ ಹೆಚ್ಚುವರಿ ಹಾಲನ್ನು ದಾನದ ರೂಪದಲ್ಲಿ ನೀಡುತ್ತಿದ್ದಾರೆ. ಹೀಗೇ ಸಂಗ್ರಹವಾದ ಹಾಲನ್ನು ಜೀವಾಮೃತ ಬ್ಯಾಂಕಿನಲ್ಲಿ ಸಂಗ್ರಹಿಸಿ ಅವಶ್ಯವಿರುವ ಮಗುವಿಗೆ ನೀಡಲಾಗುತ್ತಿದೆ.

ನಿರ್ವಹಣೆ: ಮೊದಲಿಗೆ ಎದೆಹಾಲು ನೀಡಲು ಹಿಂದೇಟು ಹಾಕುತ್ತಿದ್ದ ಮಹಿಳೆಯರು ಬಳಿಕ ತಾವೇ ಜೀವಾಮೃತ ಬ್ಯಾಂಕ್‌ಗೆ ಬಂದು ದಾನ ಮಾಡುತ್ತಿದ್ದಾರೆ. ಈ ಕುರಿತು ಜಾಗೃತಿ ಮೂಡಿಸಿದ ಪರಿಣಾಮ ಎರಡು ವರ್ಷದಲೇ 7000ಕ್ಕೂ ಹೆಚ್ಚು ಮಾತೆಯರು ದಾನ ಮಾಡಿದ್ದಾರೆ. ಇದರ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಹೀಗೆ ಸಂಗ್ರಹಗೊಂಡ ಹಾಲನ್ನು ಒಂದು ತಿಂಗಳ ವರೆಗೆ ಸಂಸ್ಕರಿಸಿ ಬೇಕಾದ ಮಗುವಿಗೆ ನೀಡಲು ಸುಸಜ್ಜಿತ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಈ ಯಂತ್ರದಲ್ಲಿ ಏಕಕಾಲಕ್ಕೆ 1500 ಲೀಟರ್‌ ಹಾಲು ಸಂಗ್ರಹಿಸಿ ಇಡಬಹುದಾಗಿದೆ.

7147 ತಾಯಂದಿರಿಂದ ದಾನ: ಈ ಬ್ಯಾಂಕ್ ಮಕ್ಕಳ ಚಿಕಿತ್ಸಾ ವಿಭಾಗದ ಅಡಿ ಕಾರ್ಯನಿರ್ವಹಿಸುತ್ತಿದ್ದು, ನಾಲ್ವರು ದಾದಿಯರು, ಇಬ್ಬರು ಗ್ರೂಪ್ ಡಿ ಕೆಲಸಗಾರರು ಮತ್ತು ಒಬ್ಬ ನೋಡಲ್ ಅಧಿಕಾರಿ ಸೇವೆಯಲ್ಲಿ ಇದ್ದಾರೆ. 7147 ತಾಯಂದಿರು 1530 ಲೀಟರ್‌ ಹಾಲು ದಾನ ಮಾಡಿದ್ದಾರೆ. ಇದನ್ನು ಅವಧಿ ಪೂರ್ವ ಜನಿಸಿದ 1455 ಹಾಗೂ ಅಕಾಲಿಕವಾಗಿ ಜನಿಸಿದ 1444 ಸೇರಿ ಒಟ್ಟು 2599 ಶಿಶುಗಳಿಗೆ ನೀಡಲಾಗಿದೆ. ಈ ವರೆಗೆ 1,492 ಲೀಟರ್ ಹಾಲು ಸಂಸ್ಕರಿಸಲಾಗಿದ್ದು, 9325 ಮಿಲಿ ಲೀಟರ್‌ ಹಾಲು ಈಗ ವಿತರಿಸಲು ಲಭ್ಯವಿದೆ.

ವಾರದ ಹಿಂದೆ ಅವಧಿಪೂರ್ವ ಗಂಡು ಮಗುವಿಗೆ ಜನ್ಮ ನೀಡಿದ್ದು, ನಾನು ಎದೆಹಾಲು ನೀಡಲು ಸಾಧ್ಯವಾಗಲಿಲ್ಲ. ಜೀವಾಮೃತ ಬ್ಯಾಂಕಿನ ಹಾಲು ನೀಡಿದ ಪರಿಣಾಮ ಮಗು ಆರೋಗ್ಯಪೂರ್ಣವಾಗಿದೆ ಎಂದು ಬಾಣಂತಿ ವಂದನಾ ಹೇಳಿದರು.

ಕೆಎಂಸಿಆರ್‌ಐನಲ್ಲಿ 2024ರಿಂದ ಪ್ರಾರಂಭಿಸಿರುವ ಜೀವಾಮೃತ ಹಾಲಿನ ಬ್ಯಾಂಕಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಗುವಿಗೆ ತಾಯಿಯ ಹಾಲಿನ ಮಹತ್ವ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಕೆಎಂಸಿಆರ್‌ಐ ನಿರ್ದೇಶಕ ಡಾ. ಈಶ್ವರ ಹೊಸಮನಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ‘ಶ್ರೀ ಶಾರದಾ ಆಸರೆ ಯೋಜನೆ’ ಆರಂಭ
ಮಾನವೀಯತೆ ಮೇಲೆ ಸಮಾಜ ನಿರ್ಮಾಣವಾಗಲಿ: ಕಿಮ್ಮನೆ