ಸ್ವಿಗ್ಗಿ, ಝೋಮ್ಯಾಟೊ, ಅಮೆಜಾನ್, ಬ್ಲಿಂಕಿಟ್ ಸಿಬ್ಬಂದಿ ವಿವರ ಠಾಣೆಗೆ ಸಲ್ಲಿಕೆ ಕಡ್ಡಾಯ

KannadaprabhaNewsNetwork |  
Published : Apr 20, 2026, 02:30 AM IST
ಎಸ್ಪಿ ಪನ್ನೇಕರ್ | Kannada Prabha

ಸಾರಾಂಶ

ಆಹಾರ ವಿತರಣಾ ಸಂಸ್ಥೆಗಳು ಮತ್ತು ಖಾಸಗಿ ಟ್ರಾವೆಲ್ಸ್ ಏಜೆನ್ಸಿಗಳು ತಮ್ಮ ಸಿಬ್ಬಂದಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು.

ಬಳ್ಳಾರಿ: ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಿಗ್ಗಿ, ಝೋಮ್ಯಾಟೊ, ಅಮೆಜಾನ್, ಬ್ಲಿಂಕಿಟ್ ಸೇರಿದಂತೆ ವಿವಿಧ ಸಂಸ್ಥೆಗಳು ಮತ್ತು ಖಾಸಗಿ ಸಾರಿಗೆ ಸಂಸ್ಥೆಗಳು ತಮ್ಮಲ್ಲಿ ಕೆಲಸ ಮಾಡುವ ಪ್ರತಿ ಸಿಬ್ಬಂದಿಯ ಪೂರ್ಣ ವಿವರಗಳನ್ನು ಹತ್ತಿರದ ಪೊಲೀಸ್ ಠಾಣೆಗೆ ಸಲ್ಲಿಸುವುದು ಕಡ್ಡಾಯ ಎಂದು ಎಸ್ಪಿ ಡಾ.ಸುಮನ್ ಡಿ.ಪೆನ್ನೇಕರ್ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡೆಲಿವರಿ ಸಮಯದಲ್ಲಿ ಮಾದಕ ವಸ್ತು ಸೇರಿದಂತೆ ಇನ್ನಿತರ ನಿಷೇಧಿತ ವಸ್ತುಗಳನ್ನು ಸಾಗಟ ಮಾಡುವುದನ್ನು ತಡೆಯಲು ಹಾಗೂ ಪ್ರತಿನಿತ್ಯದ ಚಟವಟಿಕೆಗಳ ಮೇಲೆ ನಿಗಾವಣೆ ಇಡಲು, ಗ್ರಾಹಕರ ಹಿತದೃಷ್ಟಿಯಿಂದ ವಿವಿಧ ಇ-ಸೇವಾ ವಲಯಗಳ ಮುಖ್ಯಸ್ಥರೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಂಚೆ ಇಲಾಖೆ, ರೈಲ್ವೆ ಪೊಲೀಸ್, ಇ-ಕಾಮರ್ಸ್ ಸಂಸ್ಥೆಗಳು, ಆಹಾರ ವಿತರಣಾ ಸಂಸ್ಥೆಗಳು ಮತ್ತು ಖಾಸಗಿ ಟ್ರಾವೆಲ್ಸ್ ಏಜೆನ್ಸಿಗಳು ತಮ್ಮ ಸಿಬ್ಬಂದಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ತಮ್ಮ ಪ್ರತಿ ಸಿಬ್ಬಂದಿ ತಮ್ಮ ಆಧಾರ್ ಕಾರ್ಡ್ ಅಥವಾ ಅಧಿಕೃತ ಗುರುತಿನ ಚೀಟಿಯನ್ನು ಹೊಂದಿರಬೇಕು. ಹೊಸದಾಗಿ ಕೆಲಸಕ್ಕೆ ಸೇರುವ ಮತ್ತು ಈಗಾಗಲೇ ಕೆಲಸದಲ್ಲಿರುವ ಸಿಬ್ಬಂದಿ ಕಡ್ಡಾಯವಾಗಿ ಪೊಲೀಸ್ ಪರಿಶೀಲನಾ ಪ್ರಮಾಣಪತ್ರ ಹೊಂದಿರಬೇಕು. ಕಂಪನಿಗಳು ತಮ್ಮಲ್ಲಿ ಕೆಲಸ ಮಾಡುವ ಸಿಬ್ಬಂದಿ ಬಿಟ್ಟು ಹೋದರೆ ಅಥವಾ ಹೊಸದಾಗಿ ಸೇರಿದ ಸಿಬ್ಬಂದಿಯ ಮಾಹಿತಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಿದರು.

ಮುಖ್ಯವಾಗಿ ಡೆಲಿವರಿ ಬಾಯ್ಸ್ ಮತ್ತು ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘಿಸದಂತೆ ಸಂಸ್ಥೆಗಳು ಎಚ್ಚರಿಕೆ ವಹಿಸಬೇಕು. ನಿಯಮಗಳನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ವಸ್ತುಗಳ ದಾಸ್ತಾನು ಹಾಗೂ ಪ್ಯಾಕಿಂಗ್ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ, ಬುಕ್ಕಿಂಗ್ ರಿಜಿಸ್ಟರ್ ನಿರ್ವಹಣೆ, ಸಂಸ್ಥೆಗಳು ಕಡ್ಡಾಯವಾಗಿ ಲೈಸೆನ್ಸ್ ಹೊಂದಿರಬೇಕು, ಡೆಲಿವರಿ ಬಾಯ್ಸ್ ಗಳ ನೊಂದಣಿ ಕಡ್ಡಾಯ, ವಾಹನ ಚಾಲನಾ ಲೈಸನ್ಸ್ ಹೊಂದಿದ ಡೆಲಿವರಿ ಬಾಯ್ಸ್ ಗಳನ್ನು ಮಾತ್ರ ನೇಮಕ ಮಾಡಿಕೊಳ್ಳಲು, ಡೆಲಿವರಿ ಬಾಯ್ಸ್ ಗಳ ಆಧಾರ್ ಕಾರ್ಡ, ಪಾನ್ ಕಾರ್ಡಗಳನ್ನು ಸಂಸ್ಥೆಗಳ ಆಡಳಿತ ಮಂಡಳಿಯವರು ನೇಮಕಾತಿ ಪೂರ್ವದಲ್ಲಿ ಕಡ್ಡಾಯವಾಗಿ ಪಡೆಯಬೇಕು. ಡೆಲಿವರಿ ಬಾಯ್ಸ್ ಹಾಗೂ ಕಚೇರಿ ಸಿಬ್ಬಂದಿಯವರ ಸಮಗ್ರ ಮಾಹಿತಿಯನ್ನು ಕಡ್ಡಾಯವಾಗಿ ಜಿಲ್ಲಾ ಪೊಲೀಸ್ ಕಚೇರಿಗೆ ಸಲ್ಲಿಸಬೇಕು.

ಕೆಲವು ಡೆಲಿವರಿ ಸಂದರ್ಭದಲ್ಲಿ ಗ್ರಾಹಕರಿಗೆ ಆರ್ಡರ್ ಮಾಡಿದ ವಸ್ತುಗಳ ತಲುಪಿಸುವ ಜೊತೆಯಲ್ಲಿಯೇ ಇನ್ನಿತರ ವಸ್ತುಗಳನ್ನು (ಮಾದಕ) ತಲುಪಿಸುತ್ತಿರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ವಿಳಂಬವಾಗಿ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವ ಡೆಲಿವರಿ ಬಾಯ್ಸ್ ಗಳ ಮಾಹಿತಿಯನ್ನು ಕಡ್ಡಾಯವಾಗಿ ಜಿಲ್ಲಾ ಪೊಲೀಸ್ ಕಚೇರಿಗೆ ಸಲ್ಲಿಸಬೇಕು. ಡೆಲಿವರಿ ಪಾರ್ಸಲ್ ಗಳನ್ನು ಗ್ರಾಹಕರಿಗೆ ತಲುಪಿಸುವ ಸಮಯದಲ್ಲಿ, ವಸ್ತುಗಳ ಬಗ್ಗೆ ಅನುಮಾನ ಕಂಡು ಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಪೋಸ್ಟಲ್ ಇಲಾಖೆ, ಡೊಮಿನೋಸ್, ಕೆಎಫ್‌ಸಿ, ಡಿಟಿಡಿಸಿ ಕೊರಿಯರ್, ಟ್ರಾವೆಲ್ಸ್ ಏಜೆನ್ಸಿಗಳು ಸೇರಿದಂತೆ ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ಸೇವಾ ಸಂಸ್ಥೆಗಳು ಈ ಸುರಕ್ಷತಾ ಕ್ರಮಗಳಿಗೆ ಸಹಕರಿಸಬೇಕು ಎಂದು ಎಸ್ಪಿ ಪನ್ನೇಕರ್ ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್.ಎಸ್, ಬಳ್ಳಾರಿ ನಗರ ಉಪವಿಭಾಗದ ಡಿಎಸ್‌ಪಿ ಎಂ.ಗೋವಿಂದ್ ರಾಜ್ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ‘ಶ್ರೀ ಶಾರದಾ ಆಸರೆ ಯೋಜನೆ’ ಆರಂಭ
ಮಾನವೀಯತೆ ಮೇಲೆ ಸಮಾಜ ನಿರ್ಮಾಣವಾಗಲಿ: ಕಿಮ್ಮನೆ