ಬಿ.ರಾಮಪ್ರಸಾದ್ ಗಾಂಧಿ
ತಾಲೂಕಿನ 72ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತಾ ಸಾಗಿದೆ. ಕೆಲವೆಡೆ ಕೊಳವೆಬಾವಿಗಳು ಬತ್ತುತ್ತಿವೆ. ಇನ್ನು ಕೆಲವೆಡೆ ಪೈಪ್‌ಲೈನ್‌ಗಳು ದುರಸ್ತಿ ಹಂತದಲ್ಲಿರುವುದರಿಂದ ನೀರಿನ ಸಮಸ್ಯೆ ತಲೆದೋರಿದೆ.
ಎಲ್ಲೆಲ್ಲಿ ಸಮಸ್ಯೆ?: ಬಾಗಳಿ, ಕಾಯಕದಹಳ್ಳಿ, ಹಗರಿಗುಡಿಹಳ್ಳಿ, ಪಣಿಯಾಪುರ, ಚಟ್ನಿಹಳ್ಳಿ, ಉಚ್ಚಂಗಿದುರ್ಗ, ನಂದಿಬೇವೂರು, ಮತ್ತೂರು, ನಿಟ್ಟೂರು, ಮೈದೂರು, ಶಿವಪುರ, ಚೆನ್ನಾಪುರ , ಡಗ್ಗಿಬಸ್ಸಾಪುರ, ಕಾನಹಳ್ಳಿ, ಲಕ್ಷ್ಮೀಪುರ, ಸೇವಾನಗರ, ಯಡಿಹಳ್ಳಿ, ಬಿಕ್ಕಿಕಟ್ಟಿ, ಚಿಗಟೇರಿ, ಅರಸೀಕೆರೆ ತಿಮಲಾಪುರ, ಹೊಂಬಳಗಟ್ಟಿ, ಜಿ.ದಾದಾಪುರ, ಗಡಿಗುಡಾಳು, ಯು.ಬೇವಿನಹಳ್ಳಿ ತಾಂಡ, ಹುಣಸಿಕಟ್ಟಿ, ಮತ್ತಿಹಳ್ಳಿ, ಗರ್ಭಗುಡಿ ತಾಂಡ, ಕುಂಚೂರು, ಕೆರೆಗುಡಿಹಳ್ಳಿ, ಕೂಲಹಳ್ಳಿ, ಕಡಬಗೇರಿ, ಯರಬಳ್ಳಿ, ಕ್ಯಾರಕಟ್ಟಿ, ಗುಳೇದಹಟ್ಟಿ ತಾಂಡ, ಯರಬಳ್ಳಿ ತಾಂಡ, ಬಂಡ್ರಿ ತಾಂಡ, ಗೌರಿಹಳ್ಳಿ ಸೇರಿದಂತೆ ಒಟ್ಟು 72 ಹಳ್ಳಿಗಳಲ್ಲಿ ವಿವಿಧ ಕಾರಣಗಳಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ.ಇವುಗಳಲ್ಲದೆ ಪ್ರತಿದಿನ ಬೇರೆ ಬೇರೆ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರುತ್ತಲೇ ಇದೆ. ಗ್ರಾಪಂ ಹಾಗೂ ತಾಪಂಗಳಿಗೆ ದೂರುಗಳು ಬರುತ್ತಲೇ ಇವೆ. ವ್ಯಾಸನ ತಾಂಡ, ಗುರುಶಾಂತನಹಳ್ಳಿ, ಕೊರಚರಹಟ್ಟಿ, ಮಾಚಿಹಳ್ಳಿ ತಾಂಡ, ಹೊಂಬಳಗಟ್ಟಿ ಹನುಮನಹಳ್ಳಿ, ಶ್ರೀಕಂಠಪುರ, ಹುಣಸಿಕಟ್ಟಿ ಮುಂತಾದ 15 ಗ್ರಾಮಗಳಲ್ಲಿ ರೈತರ ಖಾಸಗಿ ಕೊಳವೆ ಬಾವಿಗಳಿಂದ ಬಾಡಿಗೆ ಆಧಾರದಲ್ಲಿ ಜನರಿಗೆ ಕುಡಿಯುವ ನೀರು ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಆಯಾ ಗ್ರಾಪಂ ಪಿಡಿಒಗಳು ತಿಳಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ತಾಲೂಕಿನಲ್ಲಿ ಉಲ್ಬಣವಾಗುತ್ತಿರುವುದರ ಬಗ್ಗೆ ತಿಳಿದ ಶಾಸಕಿ ಎಂ.ಪಿ.ಲತಾ, ಈಚೆಗೆ ತಾಪಂನಲ್ಲಿ ಸಭೆ ನಡೆಸಿ, "ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದೇ ನೆಪ ಹೇಳುತ್ತಿದ್ದರೆ ನಿಮಗೆ ಶಾಪ ತಟ್ಟುತ್ತದೆ " ಎಂದು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
₹2.33 ಕೋಟಿ ಪ್ರಸ್ತಾವನೆ:
ಬೇಸಿಗೆ ಆರಂಭದಲ್ಲಿಯೇ ಇಷ್ಟೊಂದು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸಂಬಂಧಿಸಿದ ಅಧಿಕಾರಿಗಳು ಬಿಸಿಲಿನ ಧಗೆ ಹೋಗಲಾಡಿಸಿ ದೇಹ ತಂಪಾಗಿಸಿಕೊಳ್ಳಲು ಸಮರ್ಪಕ ಕುಡಿಯುವ ನೀರು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ.
ಶಾಸಕರು ನೀರಿನ ಸಮಸ್ಯೆ ನಿವಾರಣೆಗೆ ಸಭೆ ನಡೆಸಿ ಸಲಹೆ-ಸೂಚನೆ ನೀಡಿದ್ದಾರೆ. ₹2.33 ಕೋಟಿ ಅನುದಾನ ಬಿಡುಗಡೆಗೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ರೈತರ ಕೊಳವೆಬಾವಿಯಿಂದ ಬಾಡಿಗೆ ಆಧಾರದಲ್ಲಿ ನೀರು ಪೂರೈಕೆ ಮಾಡುವಂತೆ ಪಿಡಿಒಗಳಿಗೆ ಸೂಚಿಸಿದ್ದೇವೆ. ಅನುದಾನ ಬಿಡುಗಡೆಯಾದ ಕೂಡಲೇ ಕೊಳಬೆಬಾವಿ ಕೊರೆಸುವುದು, ಪೈಪ್‌ಲೈನ್ ದುರಸ್ತಿ ಮುಂತಾದ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ಹರಪನಹಳ್ಳಿ ಕುಡಿಯುವ ನೀರು- ನೈರ್ಮಲ್ಯ ಇಲಾಖೆಯ ಎಇಇ ಮಂಜನಾಯ್ಕ.