ಎಲ್.ವಿ ನವೀನ್‌ಕುಮಾರ್
ಈಜಲು ಬರುವ ಸಾರ್ವಜನಿಕರು, ವಿದ್ಯಾರ್ಥಿಗಳು ಕಾವೇರಿ ನದಿ ನೀರಲ್ಲಿ ಮುಳಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ಅರಿತ ತಾಲೂಕು ಆಡಳಿತ ಬಲಮುರಿ ಮತ್ತು ಎಡಮುರಿ ಹಾಗೂ ಕಾರೇಕುರ ಗ್ರಾಮದ ಪ್ರವಾಸಿ ತಾಣ ಕಾವೇರಿ ನದಿ ಪ್ರದೇಶಗಳಿಗೆ ನಿಷೇಧಾಜ್ಞೆ ಹೇರಿ ಆದೇಶಿಸಿದೆ.
ತಾಲೂಕಿನ ಕೆ.ಆರ್. ಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಲಮುರಿ ಮತ್ತು ಎಡಮುರಿ ಕಾವೇರಿ ನದಿ ಪ್ರದೇಶಗಳಲ್ಲಿ ಏ.16ರ ಬೆಳಗ್ಗೆ 6 ರಿಂದ ಹಾಗೂ ಶ್ರೀರಂಗಪಟ್ಟಣ ಪೊಲೀಸ್ ಟೌನ್ ಠಾಣಾ ವ್ಯಾಪ್ತಿಯ ಕಾರೇಕುರ ಗ್ರಾಮದ ಪ್ರವಾಸಿ ತಾಣ ಕಾವೇರಿ ನದಿ ಪ್ರದೇಶಗಳಲ್ಲಿ ತಾಲೂಕು ಆಡಳಿತ ಸಾರ್ವಜನಿಕರ ಪ್ರಾಣರಕ್ಷಣೆ ದೃಷ್ಟಿಯಿಂದ ಏ.15ರ ಬೆಳಗ್ಗೆ 6 ಗಂಟೆಯಿಂದ ಮುಂದಿನ ಆದೇಶದವರೆವಿಗೂ ಬಿಎನ್‌ಎಸ್‌ಎಸ್ ಕಲಂ 163ರ ಅನ್ವಯ ನದಿ ತೀರಗಳಲ್ಲಿ ಕಠಿಣ ನಿಷೇಧಾಜ್ಞೆ ಜಾರಿಗೊಳಿಸಿದೆ.ಈ ಪ್ರದೇಶಗಳಿಗೆ ಪ್ರವಾಸಿಗರು, ಮಕ್ಕಳೊಂದಿಗೆ ಮೋಜು-ಮಸ್ತಿಗೆಂದು ಬಂದು ನದಿಯಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಪಟ್ಟಣದ ಸುತ್ತಮುತ್ತ ಕಾವೇರಿ ನದಿ ತೀರದಲ್ಲಿ ಅಕ್ರಮ ದೋಣಿ ವಿಹಾರದ ಬಗ್ಗೆ ತಲೆ ಕಡೆಸಿಕೊಳ್ಳದೆ ಅವಘಡಗಳು ಸಂಭವಿಸಲಿ ಎಂದು ತಾಲೂಕು ಆಡಳಿತ ಕಾಯ್ದು ಕುಳಿತಂತೆ ಕಾಣುತ್ತಿದೆ.
ಪಟ್ಟಣದ ಪ್ರವಾಸಿ ಮಂದಿರ, ಕಾವೇರಿ ಸಂಗಮ, ದೊಡ್ಡ ಗೋಸಾಯಿಘಾಟ್ ಸೇರಿದಂತೆ ಇತರೆ ಕಾವೇರಿ ನದಿ ತೀರದಲ್ಲಿ ಯಾವುದೇ ಇಲಾಖೆಗಳಿಂದ ಅನುಮತಿ ಪಡೆಯದೇ ಜೊತೆಗೆ ಲೈಫ್ ಜಾಕೆಟ್ ಸೇರಿದಂತೆ ಮುಂಜಾಗ್ರತಾ ಕ್ರಮ ಅನುಸರಿಸದೇ 100 ರು. ಪಡೆದು ಪ್ರವಾಸಿಗರು ಹಾಗೂ ಸಾರ್ವಜನಿಕರನ್ನು ತಮ್ಮ ತೆಪ್ಪಗಳಲ್ಲಿ ಕೂರಿಸಿ ಅಕ್ರಮವಾಗಿ ನದಿ ಮಧ್ಯೆ ಕರೆದುಕೊಂಡು ಹೋಗುವ ಕಾಯಕ ನಿತ್ಯ ನಡೆಯುತ್ತಿದೆ.
ಕಳೆದ 12 ವರ್ಷಗಳಲ್ಲಿ 79 ಬಲಿ:
2015ರಲ್ಲಿ 8 ಮಂದಿ, 2016ರಲ್ಲಿ 4, 2017ರಲ್ಲಿ 9, 2018ರಲ್ಲಿ 1, 2019ರಲ್ಲಿ 12, 2020 ರಲ್ಲಿ 4, 2021ರಲ್ಲಿ 3, 2022 ರಲ್ಲಿ 2, 2023 ರಲ್ಲಿ 8, 2024ರಲ್ಲಿ 13 ¸ 2025ರಲ್ಲಿ 11 ಹಾಗೂ 2026ರಲ್ಲಿ ಏ.18ರವರೆಗೆ 4 ಮಂದಿ ಸೇರಿ ಇದುವರೆಗೂ 79 ಮಂದಿ ಸಾವನ್ನಪ್ಪಿರುವ ಬಗ್ಗೆ ಪೊಲೀಸರು ದಾಖಲಾತಿಯಲ್ಲಿದೆ.
ಬೇಸಿಗೆ ರಜೆ ವೇಳೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿ ಬೇಸಿಗೆ ದಾಹ ತಣಿಸಲು ನೀರಿನ ಆಳ ಮತ್ತು ಸುಳಿಯ ಅರಿವಿಲ್ಲದೆ ನದಿಗೆ ಇಳಿದು ಸಾವು ತಂದುಕೊಳ್ಳುತ್ತಿದ್ದು, ಈ ಬಗ್ಗೆ ಪೊಲೀಸ್ ವರದಿ ತಿಳಿಸಿದೆ. ಪೋಷಕರು ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕಿದೆ.
ಪರಿಸ್ಥಿತಿ ಗಂಭೀರತೆ ಅರಿತು ತಹಸೀಲ್ದಾರ್ ಚೇತನಾ ಯಾದವ್ ಎರಡು ಪ್ರತ್ಯೇಕ ಆದೇಶಗಳ ಮೂಲಕ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಜನರ ಜೀವ ರಕ್ಷಣೆ, ನದಿಯ ಅಪಾಯಕಾರಿ ಸ್ಥಳಗಳಲ್ಲಿ ಸಾರ್ವಜನಿಕರು ನೀರಿಗೆ ಇಳಿಯದಂತೆ ತಡೆಯಲು, ಅಹಿತಕರ ಘಟನೆಗಳನ್ನು ತಪ್ಪಿಸಲು ನಿಷೇಧ ಹೇರಿದ್ದಾರೆ. ನಿಯಮ ಉಲ್ಲಂಘಿಸಿ ನದಿ ತೀರಕ್ಕೆ ಬರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೆ.ಆರ್.ಸಾಗರ ಮತ್ತು ಶ್ರೀರಂಗಪಟ್ಟಣ ಪೊಲೀಸರು ಎಚ್ಚರಿಸಿದ್ದಾರೆ.
- ಜಗದೀಶ್, ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ
ಬಲಮುರಿ, ಎಡಮುರಿ ಅಲ್ಲದೇ ಕಾವೇರಿ ನದಿ ಪ್ರದೇಶದ ಮಂಡ್ಯಕೊಪ್ಪಲಿನ ಕಾವೇರಿ ಬೋರೆದೇವರ ದೇವಸ್ಥಾನ ಸೇರಿದಂತೆ ಇತರೆ ಅಪಾಯ ಸ್ಥಳಗಳಲ್ಲಿ ಈಜಲು ಹೋಗಿ ವಿದ್ಯಾರ್ಥಿಗಳು ಸೇರಿ ಹಲವರು ಸಾವನ್ನಪ್ಪಿರುವ ವರದಿಗಳು ಸಂಭವಿಸಿದೆ. ಪೊಲೀಸ್ ಇಲಾಖೆಯಲ್ಲಿ 79 ಸಾವನ್ನಪ್ಪಿರುವ ಪ್ರಕರಣ ದಾಖಲಾಗಿದ್ದರೂ ಅದಕ್ಕಿಂತ ಹೆಚ್ಚಿನ ಮಂದಿ ಸಾವನ್ನಪ್ಪಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಮುಂದಾಗಬೇಕಿದೆ.-ಶಂಕರ್‌ಬಾಬು ಮಂಡ್ಯ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರು