ಸಿಎಂ ರಾಜೀನಾಮೆಗೆ ವಿಪಕ್ಷ ನಾಯಕ ಅಶೋಕ್‌ ಆಗ್ರಹ

KannadaprabhaNewsNetwork |  
Published : Jun 13, 2024, 12:52 AM ISTUpdated : Jun 13, 2024, 04:06 PM IST
ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಸುದ್ದಿಗೋಷ್ಠಿ | Kannada Prabha

ಸಾರಾಂಶ

ರಾಜ್ಯದಲ್ಲಿ ಬಿಜೆಪಿ ಹಿಂದಿಗಿಂತ ಕಡಿಮೆ ಸೀಟು ಪಡೆದಿರುವ ಬಗ್ಗೆ ಆತ್ಮಾವಲೋಕನ ನಡೆಸಲಾಗುವುದು. ಬಿಜೆಪಿ ಜತೆಗಿನ ಜೆಡಿಎಸ್‌ ಮೈತ್ರಿ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಮುಂದುವರಿಯಲಿದೆ ಎಂದು ಆರ್‌. ಅಶೋಕ್‌ ಸ್ಪಷ್ಟಪಡಿಸಿದರು.

  ಮಂಗಳೂರು :  ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಅವರು ಶೇ.20ರಷ್ಟು ಕಮಿಷನ್‌ ಪಡೆದಿರಬಹುದು. ಉಳಿದ ಶೇ.80ರಷ್ಟು ಕಮಿಷನ್‌ ತಿಂದವರಿದ್ದಾರೆ. ನಿಗಮದ ಮೊತ್ತ ಹಂಚಿಕೆಯಾಗಿರುವುದು ಸಿಎಂ ಅವರ ಹಣಕಾಸು ಇಲಾಖೆಯ ಅಡಿಯಲ್ಲೇ ಬರುತ್ತದೆ. ಅದಕ್ಕಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿರುವುದಾಗಿ ಪ್ರತಿಪಕ್ಷ ನಾಯಕ ಅಶೋಕ್‌ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಸಚಿವ ನಾಗೇಂದ್ರ ರಾಜಿನಾಮೆ ನೀಡಿದರು. ಈ ಪ್ರಕರಣದಲ್ಲಿ ಸಚಿವರ ಆಪ್ತ ಸಹಾಯಕರನ್ನೇ ಬಂಧಿಸಲಾಗಿದೆ. ಪ್ರಸ್ತುತ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ ಎಂದರು.

ಈ ಪ್ರಕರಣದಲ್ಲಿ 180 ಕೋಟಿ ರು. ಮೊತ್ತವನ್ನು ಬೇನಾಮಿ ಖಾತೆಗಳಿಗೆ ಜಮೆ ಮಾಡಲಾಗಿದೆ. ಐಟಿ ಕಂಪನಿಗಳ ಖಾತೆಗೂ ಹಣ ವರ್ಗಾವಣೆಯಾಗಿದೆ. ಈ ಮೊತ್ತ ತೆಲಂಗಾಣದಲ್ಲಿ ಡ್ರಾ ಆಗಿದೆ. ಅದನ್ನು ಯಾರೆಲ್ಲ ಯಾಕಾಗಿ ಡ್ರಾ ಮಾಡಿದರು? ಈ ಮೊತ್ತವನ್ನು ಕಾಂಗ್ರೆಸ್‌ ಚುನಾವಣೆಗೆ ಬಳಕೆ ಮಾಡಿರುವ ಸಾಧ್ಯತೆ ಬಗ್ಗೆ ತನಿಖೆ ಆಗಬೇಕು ಎಂದರು.

ಬಿಜೆಪಿಗೆ ಶೇ.51ರಷ್ಟು ಮತ ಹೆಚ್ಚಳ: ಲೋಕಸಭಾ ಚುನಾವಣೆಯಲ್ಲಿ 224 ಕ್ಷೇತ್ರ ಪೈಕಿ 143 ಅಸೆಂಬ್ಲಿ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಪಡೆದಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಈ ಬಾರಿ ಕಾಂಗ್ರೆಸ್‌ನ ಕೈ ಹಿಡಿಯಲಿಲ್ಲ. ಜೆಡಿಎಸ್‌ ಜತೆಗಿನ ಮೈತ್ರಿಯಿಂದಾಗಿ ಕಾಂಗ್ರೆಸ್‌ಗಿಂತ ಬಿಜೆಪಿ ಎರಡು ಪಟ್ಟು ಹೆಚ್ಚು ಮತಗಳನ್ನು ಅಂದರೆ ಶೇ.51ರಷ್ಟು ಮತ ಹೆಚ್ಚಳ ಪಡೆದುಕೊಂಡಿದೆ. ಇದರ ಸ್ಪಷ್ಟತೆ ಗೊತ್ತಿಲ್ಲದೆ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಶೇ.46ರಷ್ಟು ಮತ ಪಡೆದಿದೆ ಎಂದು ತಪ್ಪಾಗಿ ಹೇಳುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಬಿಜೆಪಿ ಹಿಂದಿಗಿಂತ ಕಡಿಮೆ ಸೀಟು ಪಡೆದಿರುವ ಬಗ್ಗೆ ಆತ್ಮಾವಲೋಕನ ನಡೆಸಲಾಗುವುದು. ಬಿಜೆಪಿ ಜತೆಗಿನ ಜೆಡಿಎಸ್‌ ಮೈತ್ರಿ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಮುಂದುವರಿಯಲಿದೆ ಎಂದು ಆರ್‌. ಅಶೋಕ್‌ ಸ್ಪಷ್ಟಪಡಿಸಿದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ