ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಮಹಾವಿದ್ಯಾಲಯ, ಅಖಿಲ ಭಾರತ ಸುಸಂಘಟಿತ ಜೋಳ ಮತ್ತು ಹತ್ತಿ ಬೆಳೆಗಳ ಪ್ರಾಯೋಜನೆ ಹಾಗೂ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಮುಂಗಾರು ತಾಂತ್ರಿಕ ಕಾರ್ಯಾಗಾರವನ್ನು ಕೇಂದ್ರದ ಆವರಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಈ ನಿಟ್ಟಿನಲ್ಲಿ ಪರ್ಯಾಯವಾಗಿ ವಿಶ್ವವಿದ್ಯಾನಿಲಯದಿಂದ ಪರಿಚಯಿಸಿರುವ ಸುಧಾರಿತ, ಅಲ್ಪಾವಧಿ ದ್ವಿದಳ ಧಾನ್ಯ ತಳಿಗಳ ಬೇಸಾಯವನ್ನು ಕೈಗೊಂಡು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿದರು. ರೈತರು ಪೊಟ್ಯಾಷ್ ಗೊಬ್ಬರವನ್ನು ಬಳಸದಿರುವುದು ಬೆಳೆಗಳಲ್ಲಿ ರೋಗ ಕೀಟ ಹಾಗೂ ಇತರೆ ಸಮಸ್ಯೆಗಳಿಗೆ ಆಸ್ಪದವಾಗಿದ್ದು, ಪೊಟ್ಯಾಶ್‌ಯುಕ್ತ ಸಂಯುಕ್ತ ರಸಗೊಬ್ಬರಗಳನ್ನು ಬಳಸಲು ತಿಳಿಸಿದರು. ಜೊತೆಗೆ ಮಣ್ಣು ಪರೀಕ್ಷೆ ಆಧಾರಿತವಾಗಿ ಸಮತೋಲನ ಸಸ್ಯಪೋಷಣೆಗೆ ಆದ್ಯತೆ ನೀಡಿ ಮಣ್ಣಿನ ಸಂರಕ್ಷಣೆ ಮಾಡಬೇಕೆಂದು ತಿಳಿಸಿದರು.ಕೃಷಿ ಮಹಾವಿದ್ಯಾಲಯದ ವಿಶೇಷ ಅಧಿಕಾರಿ ಡಾ.ಸಿ. ದೊರಸ್ವಾಮಿ ಅವರು ಈ ರೀತಿಯ ವಿಸ್ತರಣಾ ಕಾರ್ಯಕ್ರಮಗಳು ರೈತರಿಗೆ ಉತ್ತಮ ತಾಂತ್ರಿಕ ಮಾಹಿತಿ ಕೊಡುವ ಒಂದು ವ್ಯವಸ್ಥೆಯಾಗಿದ್ದು ಒಂದೇ ವೇದಿಕೆಯಲ್ಲಿ ವಿಜ್ಞಾನಿಗಳು ಮತ್ತು ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ರೈತ ಬಾಂಧವರಿಗೆ ಲಭ್ಯವಾಗಿರುತ್ತಾರೆ, ಈ ನಿಟ್ಟಿನಲ್ಲಿ ರೈತ ಬಾಂಧವರು ಇಂತಹ ಕಾರ್ಯಕ್ರಮಗಳ ಸದುಪಯೋಗಪಡಿಸಿಕೊಂಡು ಉತ್ತಮ ಬೇಸಾಯ ಕೈಗೊಳ್ಳಬೇಕೆಂದು ತಿಳಿಸಿದರು. ಬೆಳೆ ಬೇಸಾಯಕ್ಕೂ ಮೊದಲು, ಶಿಫಾರಸ್ಸಿನ ಪ್ರಮಾಣದ ಸಾವಯವ ಗೊಬ್ಬರಗಳ ಬಳಕೆ, ಹಗುರ ಮಣ್ಣಿನಲ್ಲಿ ಕೆರೆಗೋಡಿನ ಬಳಕೆ ಮಾಡಬೇಕೆಂದು ತಿಳಿಸುತ್ತಾ ವಿವೇಚನೆ ಇಲ್ಲದೆ ರಾಸಾಯನಿಕ ಗೊಬ್ಬರಗಳನ್ನು ಬಳಸಿದರೆ ಅದು ಮಣ್ಣಿನ ನಾಶಕ್ಕೆ ಕಾರಣವಾಗಿ ವ್ಯವಸಾಯ ಲಾಭಕರವಾಗುವುದಿಲ್ಲ ಎಂದು ತಿಳಿಸಿದರು. ವ್ಯವಸಾಯದಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಉತ್ತಮ ಇಳುವರನ್ನು ಪಡೆದು, ಮಣ್ಣು ನೀರು ಸಂರಕ್ಷಣೆಯಾಗುವುದೆಂದು ತಿಳಿಸಿದರು. ಬೆಂಗಳೂರು ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಓ.ಆರ್. ನಟರಾಜು ಮಾತನಾಡಿ, ಕೃಷಿಯಲ್ಲಿ ಹೈನುಗಾರಿಕೆ ಅಳವಡಿಕೆಯ ಉದ್ದೇಶಗಳನ್ನು ಮನನ ಮಾಡಿಕೊಟ್ಟರು. ಕಡಿಮೆ ಖರ್ಚಿನಲ್ಲಿ ಪಶು ಸಂಗೋಪನೆ ಕೈಗೊಳ್ಳಲು ಆಹಾರ ನಿರ್ವಹಣೆ ಮತ್ತು ಆರೋಗ್ಯ ನಿರ್ವಹಣೆಗೆ ಸುಲಭ ಹಾಗೂ ಸ್ಥಳೀಯ ಕ್ರಮಗಳನ್ನು ಅನುಸರಿಸಬೇಕು. ರೈತರು ಕೃತಕ ಆಹಾರಗಳಿಗೆ ಹೆಚ್ಚಿನ ಖರ್ಚು ಮಾಡುತ್ತಿದ್ದು, ಸ್ಥಳೀಯವಾಗಿ ಸಿಗುವ ಏಕದಳ ಧಾನ್ಯ, ದ್ವಿದಳ ಧಾನ್ಯಗಳು ಹಾಗೂ ಇತರ ಮೇವಿನ ಬೆಳೆಗಳ ಸಂಯೋಜನೆ ಮಾಡಿ ಕಡಿಮೆ ಖರ್ಚಿನಲ್ಲಿ ಪಶು ಆಹಾರ ತಾವೇ ಉತ್ಪಾದಿಸಿ ನಿರ್ವಹಿಸಬೇಕು. ಶುಚಿ ಹಾಲು ಉತ್ಪಾದನೆಗೆ ಅಗತ್ಯ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಲು ಕರೆ ನೀಡಿದರು.
ರೇಷ್ಮೆ ಇಲಾಖೆ ಉಪ ನಿರ್ದೇಶಕ ಗಿರೀಶ್ ಮಾತನಾಡಿ ಸಮಗ್ರ ಕೃಷಿಯಲ್ಲಿ ರೇಷ್ಮೆ ಬೇಸಾಯ ಬಹಳ ಸೂಕ್ತವಾಗಿದ್ದು, ಇದು ಸ್ಥಳೀಯ ಸಂಪನ್ಮೂಲಗಳ ಸದ್ಬಳಕೆ ಹಾಗೂ ನಿರಂತರ ಆದಾಯಕ್ಕೆ ಪೂರಕವಾಗಿದೆ, ರೈತರು ನಮ್ಮ ಜಿಲ್ಲೆಯಲ್ಲೇ ಇರುವ ಮಾರುಕಟ್ಟೆ ಬಳಕೆ ಮಾಡಿಕೊಳ್ಳಲು ಉತ್ತಮವಾಗಿ ರೇಷ್ಮೆ ಉತ್ಪಾದನೆ ಕೈಗೊಳ್ಳಬೇಕು. ಇಲಾಖೆ ಮತ್ತು ವಿಜ್ಞಾನಿಗಳನ್ನು ಸಂಪರ್ಕಿಸಿ ಅವರ ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಡಾ.ಮನೋಹರ್ ಸರ್ಕಾರದ ಪಶುಸಂಗೋಪನೆ ಕುರಿತಾದ ಯೋಜನೆಗಳ ಬಗ್ಗೆ ವಿವರಣೆ ನೀಡಿ ಸೂಕ್ತ ಲಸಿಕೆಗಳ ಬಗ್ಗೆ ಮಾಹಿತಿ ಒದಗಿಸಿದರು. ಇದಲ್ಲದೇ, ಜಾನುವಾರುಗಳ ವಿಮೆ ಮಾಡಿಸುವುದರಿಂದ ಆಗುವ ಅನುಕೂಲಗಳು ಹಾಗೂ ಅದಕ್ಕಿರುವ ಮಾನದಂಡಗಳ ಬಗ್ಗೆ ತಿಳಿಸಿಕೊಟ್ಟರು.
ರೈತರು ಬಿಜೋತ್ಪಾದನೆ ಮೂಲಕ ಶೇಕಡ ೧೫ ರಿಂದ ೨೦ ರಷ್ಟು ಹೆಚ್ಚಿನ ಆದಾಯವನ್ನು ಆಯ್ದ ಬೆಳೆಗಳಲ್ಲಿ ಪಡೆದುಕೊಳ್ಳಬೇಕೆಂದು ತಿಳಿಸುತ್ತಾ ಮಳೆ ಅನಿಶ್ಚಿತತೆ ಸಂದರ್ಭದಲ್ಲಿ ಪರ್ಯಾಯ ಬೆಳೆ ಯೋಜನೆಗೆ ಪೂರಕವಾದ ಅಲ್ಪಾವಧಿ ಬೆಳೆ ತಳಿಗಳ ಬಗ್ಗೆ ಮತ್ತು ಆ ತಳಿಗಳ ವಿಶೇಷತೆಗಳ ಬಗ್ಗೆ ಮಾಹಿತಿ ಒದಗಿಸಿದರು.
ಅದೇ ರೀತಿ ಮುಂದಿನ ದಿನಗಳಲ್ಲಿ ಬಿತ್ತುವ ಕಡಲೆಕಾಯಿ ಬೆಳೆಗೆ ಕಡ್ಡಾಯವಾಗಿ ಜಿಪ್ಸಂ ಬಳೆಸಲು ತಿಳಿಸಿ, ಇದರಿಂದ ಕಾಳು ಗಟ್ಟಿಗೊಂಡು, ಇಳುವರಿ ಹೆಚ್ಚಳವಾಗಿ, ಉತ್ತಮ ಎಣ್ಣೆ ಅಂಶ ಪಡೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಕೀಟಶಾಸ್ತ್ರ ವಿಜ್ಞಾನಿ ಡಾ.ಶಿವರಾಯ ನಾವಿ ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಸಸ್ಯ ಸಂರಕ್ಷಣಾ ಕ್ರಮಗಳನ್ನು ತಿಳಿಸಿಕೊಟ್ಟು ರೈತರು ಸ್ಥಳೀಯವಾಗಿ ತಯಾರಿಸಿ ಬಳಸಬಹುದಾದ ಸಾವಯವ ಸಸ್ಯ ಸಂರಕ್ಷಣಾ ಪರಿಕರಗಳ ಬಗ್ಗೆ ವಿವರಣೆ ನೀಡಿದರು.
ಬೀಜೋತ್ಪಾದನೆ ಮಾಡಲು ಆಸಕ್ತಿ ಇರುವ ರೈತರು ಕೇಂದ್ರವನ್ನು ಸಂಪರ್ಕಿಸಲು ಮನವಿ ಮಾಡಿದರು. ಮುಂದುವರೆದು, ಮುಂಗಾರು ಹಂಗಾಮಿನ ಬೆಳೆ ನಿರ್ವಹಣೆಯನ್ನು ವೈಜ್ಞಾನಿಕ ಶಿಫಾರಸ್ಸಿನ ಮೇರೆಗೆ ಕೈಗೊಂಡು ಮಾರುಕಟ್ಟೆ ಪೂರಕ ಉತ್ಪನ್ನಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕೊಡಸೋಗೆ, ಹರದನಹಳ್ಳಿ, ಪುತ್ತನಪುರ, ಬೂದಿಪಡಗ, ಮುನೇಶ್ವರ ಕಾಲೋನಿ, ಅರಕಲವಾಡಿ, ಯಳಂದೂರು, ವೈ.ಕೆ.ಮೋಳೆ, ಇರಸವಾಡಿ ಹಾಗೂ ಇತರೆ ಗ್ರಾಮಗಳ ರೈತರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರೈತ ವಿಜ್ಞಾನಿಗಳ ಸಂವಾದ ಕೈಗೊಂಡು ರೈತರ ಹಲವಾರು ವ್ಯವಸಾಯ ಸಂಬಂಧಿತ ಸಮಸ್ಯೆಗಳಾದ ಬೀಜೋಪಚಾರ, ಕಳೆನಿರ್ವಹಣೆ, ರೋಗಗಳ ನಿರ್ವಹಣೆ, ಕೀಟಗಳ ನಿರ್ವಹಣೆ ಹಾಗೂ ನೀರು ನಿರ್ವಹಣೆ ಕುರಿತ ರೈತರ ಪ್ರಶ್ನೆಗಳಿಗೆ ವಿಜ್ಞಾನಿಗಳಿಂದ ಸೂಕ್ತ ಹಾಗು ಸಮಂಜಸ ಪರಿಹಾರಗಳನ್ನು ತಿಳಿಸಿಕೊಡಲಾಯಿತು.
ಕೇಂದ್ರದ ಗೃಹ ವಿಜ್ಞಾನಿ ಡಾ. ದೀಪ,ಜೆ. ನಿರೂಪಿಸಿ ಕೊನೆಯಲ್ಲಿ ವಂದಿಸಿದರು. ಕಾರ್ಯಕ್ರಮದ ಪ್ರಯುಕ್ತ ಕೃಷಿ ತಂತ್ರಜ್ಞಾನಗಳ ಸಂಬಂಧಿತ ಒಂದು ವಸ್ತು ಪ್ರದರ್ಶನ ಮತ್ತು ಸುಧಾರಿತ ಆಯ್ದ ಬೆಳೆಗಳ ತಳಿ ಬೀಜಗಳ ಮಾರಾಟ ವ್ಯವಸ್ಥೆಯನ್ನು ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಆದಾಯ ದ್ವಿಗುಣಗೊಳಿಸಿಕೊಂಡಿರುವ ಆಯ್ದ ಸಮಗ್ರ ಕೃಷಿಕರನ್ನು ಪ್ರಮಾಣಪತ್ರ ವಿತರಿಸಿ ಗೌರವಿಸಲಾಯಿತು.