ಹೇಮಗಿರಿ ನಾಲೆ ಏರಿಯ ಎರಡು ಬದಿ ಕುಸಿತ

KannadaprabhaNewsNetwork |  
Published : Jun 13, 2024, 12:52 AM IST
12ಕೆಎಂಎನ್ ಡಿ11,12 | Kannada Prabha

ಸಾರಾಂಶ

ಕೆ.ಆರ್ .ಪೇಟೆ ತಾಲೂಕಿನ ಹರಿಹರಪುರ ಗ್ರಾಮ ವ್ಯಾಪ್ತಿಯ ಹೇಮಗಿರಿ ನಾಲೆ ಏರಿ ಎರಡೂ ಬದಿಗಳು ಕುಸಿದು ನಾಲೆ ಒಡೆಯುವ ಅಪಾಯಕ್ಕೆ ಸಿಲುಕಿರುವುದು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಹರಿಹರಪುರ ಗ್ರಾಮ ವ್ಯಾಪ್ತಿಯ 14 ನೇ ಕಿ.ಮೀ ಆರಂಭದ ಸ್ಥಳದಲ್ಲಿ ಹೇಮಗಿರಿ ನಾಲೆ ಏರಿ ಎರಡೂ ಬದಿಗಳೂ ಕುಸಿಯುತ್ತಿದ್ದು, ನಾಲೆ ಒಡೆಯುವ ಅಪಾಯದಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ನಾಲೆ ಏರಿ ಕುಸಿಯುತ್ತಿರುವುದರ ಬಗ್ಗೆ ರೈತರು ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ನಾಲಾ ಏರಿ ಸರಿ ಪಡಿಸಲು ಇದುವರೆಗೂ ಮುಂದಾಗಿಲ್ಲ. ಹೇಮಗಿರಿ ನಾಲೆಯನ್ನು 2010 ರಲ್ಲಿ ಆಧುನೀಕರಣ ಮಾಡಲಾಗಿತ್ತು. ಆಧುನೀಕರಣದ ವೇಳೆ ನಾಲೆ ಎರಡೂ ಬದಿಗಳನ್ನೂ ಸಿಮೆಂಟ್ ಲೈನಿಂಗ್ ಮಾಡಲಾಗಿತ್ತು. ಸದ್ಯ ಕಾಲುವೆ ಏರಿ 14 ಕಿ.ಮೀ ವ್ಯಾಪ್ತಿಯಲ್ಲಿ ಕುಸಿದಿದ್ದರೂ ಲೈನಿಂಗ್ ಆಧಾರದ ಮೇಲೆ ನಾಲೆ ಒಡೆಯದೆ ನಿಂತಿದೆ. ಲೈನಿಂಗ್ ತಳಭಾಗದಿಂದ ಕಾಲುವೆ ನೀರು ಸೋರಿಕೆಯಾಗುತ್ತಿದೆ. ಸದರಿ ನಾಲೆಯಿಂದ ಇದುವರೆಗೂ ಮುಂಗಾರು ಹಂಗಾಮಿನ ಬೇಸಾಯಕ್ಕೆ ನೀರು ಹರಿಸಿಲ್ಲ. ಈಗಾಗಲೇ ಜೂನ್ ತಿಂಗಳ ಮಧ್ಯ ಭಾಗಕ್ಕೆ ಬಂದಿದ್ದು ರೈತರ ಕೃಷಿ ಚಟುವಟಿಕೆಗಳಿಗೆ ಈ ಕಾಲುವೆ ಮೂಲಕ ನೀರು ಹರಿಸುವ ಸಮಯ ಹತ್ತಿರವಾಗಿದೆ.

ಆದರೆ,14 ನೇ ಕಿ.ಮೀ ಬಳಿ ಕುಸಿದಿರುವ ನಾಲೆ ಏರಿಯನ್ನು ಸರಿಪಡಿಸದಿದ್ದರೆ ನಾಲೆ ಒಡೆದು ರೈತರು ಬೆಳೆ ನಷ್ಠಕ್ಕೆ ಒಳಗಾಗುವ ಅಪಾಯ ಎದುರಾಗಿದೆ. ಜೊತೆಗೆ ನಾಲೆಯ ಮುಂದಿನ ಹಂತದ ರೈತರು ನೀರಿಲ್ಲದ ಸಂಕಷ್ಠಕ್ಕೆ ಒಳಗಾಗುವ ಆತಂಕವಿದೆ. ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದೆ. ರೈತ ಸಮುದಾಯ ಮುಂಗಾರು ಹಂಗಾಮಿನ ಬೇಸಾಯದ ಸಿದ್ದತೆಯಲ್ಲಿದೆ. ತಾಲೂಕಿನ ನದಿ ಅಣೆಕಟ್ಟೆಗಳಾದ ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳು ಮತ್ತು ಹೇಮಗಿರಿ ನದಿ ಅಣೆಕಟ್ಟೆ ನಾಲಾ ವ್ಯಾಪ್ತಿಯ ರೈತರು ಮುಂದಿನ ಬೇಸಾಯಕ್ಕಾಗಿ ಕಾಲುವೆಗಳಲ್ಲಿ ನೀರು ಹರಿಯುವುದನ್ನು ಕಾಯುತ್ತಾ ಕುಳಿತ್ತಿದ್ದಾರೆ.

ಜೂನ್ ತಿಂಗಳಿನಲ್ಲಿ ಕಾಲುವೆ ಮೂಲಕ ನೀರು ಹರಿಸಲು ನೀರಾವರಿ ಇಲಾಖೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ನೀರು ಬಿಡುವ ಮುನ್ನ ನಾಲಾ ಏರಿಗಳ ಮೇಲೆ ಸಂಚರಿಸಿ ಕಾಲುವೆಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ನೀರು ಬಿಟ್ಟಾಗ ಕಾಲುವೆ ಒಡೆಯದಂತೆ ಎಚ್ಚರಿಕೆ ವಹಿಸಬೇಕು. ಆದರೆ, ತಾಲೂಕು ನೀರಾವರಿ ಇಲಾಖೆ ಮಾತ್ರ ಯಾವುದೇ ಕ್ರಮವಹಿಸದೆ ದಿವ್ಯ ನಿರ್ಲಕ್ಷ್ಯದಲ್ಲಿದೆ. ಕರ್ತವ್ಯ ಪ್ರಜ್ಞೆಯನ್ನು ಮರೆತಿರುವ ನೀರಾವರಿ ಇಲಾಖೆ ಕಾರ್ಯವೈಖರಿ ಬಗ್ಗೆ ರೈತ ಸಮುದಾಯದಲ್ಲಿ ಆತಂಕ ಹೆಚ್ಚಾಗಿದೆ. ಶತಮಾನದ ಇತಿಹಾಸ ಹೊಂದಿರುವ ಈ ನಾಲೆಯ ಎರಡೂ ಬದಿಗಳನ್ನು ಸಿಮೆಂಟ್ ಹಾಗೂ ಕಬ್ಬಿಣ ಬಳಕೆ ಮಾಡಿ ಲೈನಿಂಗ್ ಮಾಡಲಾಯಿತು. ಆದರೆ, ಏರಿಯನ್ನು ಆಧುನೀಕರಣ ಮಾಡಲಿಲ್ಲ. ಇದರ ಪರಿಣಾಮ ಹೇಮಗಿರಿ ನಾಲಾ ಏರಿ ಹಲವು ಕಡೆ ದುರ್ಬಲಗೊಂಡಿವೆ. ತಕ್ಷಣವೇ ನೀರಾವರಿ ಇಲಾಖೆ ನಾಲಾ ಏರಿಯ ಉದ್ದಕ್ಕೂ ಸಂಚರಿಸಿ ದುರ್ಬಲ ಭಾಗಗಳನ್ನು ಗುರುತಿಸಿ ಸರಿಪಡಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌