ಚಿಕ್ಕಮಗಳೂರು, ಮನುಷ್ಯನ ಬಾಳಿಗೆ ಧರ್ಮ ಶಾಶ್ವತ ನಂದಾದೀಪ. ಸಮಸ್ತ ಭೋಗ ಮೋಕ್ಷಗಳಿಗೆ ಧರ್ಮವೇ ಮೂಲ. ಮಾನವ ಜೀವನವನ್ನು ಶುದ್ಧ ಸುಂದರಗೊಳಿಸುವುದೇ ಗುರುವಿನ ಧರ್ಮ. ಬಾಳಿನ ಭಾಗ್ಯೋದಯಕ್ಕೆ ಗುರು ಕಾರುಣ್ಯ ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ನುಡಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ । ಭಕ್ತಿ ಭಂಡಾರಿ ಶ್ರೀ ಬಸವೇಶ್ವರ ಜಯಂತ್ಯುತ್ಸವ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮನುಷ್ಯನ ಬಾಳಿಗೆ ಧರ್ಮ ಶಾಶ್ವತ ನಂದಾದೀಪ. ಸಮಸ್ತ ಭೋಗ ಮೋಕ್ಷಗಳಿಗೆ ಧರ್ಮವೇ ಮೂಲ. ಮಾನವ ಜೀವನವನ್ನು ಶುದ್ಧ ಸುಂದರಗೊಳಿಸುವುದೇ ಗುರುವಿನ ಧರ್ಮ. ಬಾಳಿನ ಭಾಗ್ಯೋದಯಕ್ಕೆ ಗುರು ಕಾರುಣ್ಯ ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ನುಡಿದರು.ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಬುಧವಾರ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಭಕ್ತಿ ಭಂಡಾರಿ ಶ್ರೀ ಬಸವೇಶ್ವರ ಜಯಂತ್ಯುತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.ಭೌತಿಕ ಬದುಕಿಗೆ ಆಧ್ಯಾತ್ಮದ ಅರಿವು ಮುಖ್ಯ. ಮೌಲ್ಯಾಧಾರಿತ ಬದುಕಿಗೆ ಧರ್ಮಾಚರಣೆ ಅಗತ್ಯವಿದೆ. ಮಾನವನನ್ನು ಪರಿಪೂರ್ಣದೆಡೆಗೆ ಕರೆದೊಯ್ಯುವುದೇ ನಿಜವಾದ ಧರ್ಮ. ಹಣ, ಕೆಟ್ಟಚಟ ಕಲಿಸುತ್ತದೆ. ಹಸಿವು ಬದುಕಿನ ಪಾಠ ಕಲಿಸುತ್ತದೆ. ಹಣ ಮಾನವೀಯತೆ ಮರೆಸಿದರೆ ಹಸಿವು ಅರಿವು ಮೂಡಿಸುವ ಕಾರ್ಯ ಮಾಡುತ್ತದೆ. ಮನೆ ಅಂಗಳದ ಕಸ ಯಾರಾದರೂ ಹಸನಗೊಳಿಸಬಹುದು. ಆದರೆ ಮನದಂಗಳದ ಕಸವನ್ನು ನಾವೇ ಹಸನು ಮಾಡಿಕೊಳ್ಳಬೇಕಾಗುತ್ತದೆ ಎಂದರು.
ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಸಿದ್ಧಾಂತಗಳು ಮತ್ತು ಶ್ರೀ ಬಸವಣ್ಣನವರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಗಳು ಜೀವ ಜಗತ್ತಿಗೆ ಸಂಜೀವಿನಿಯಾಗಿವೆ. ಫಲಭರಿತ ಬಾಳೆಯಂತೆ ಮನುಷ್ಯ ಬಾಗಬೇಕಲ್ಲದೇ ಬೀಗಬಾರದು. ದೇವರಿಗೆ ಕೊಡುವುದೂ ಗೊತ್ತು. ಕೊಟ್ಟಿದ್ದನ್ನು ಕಿತ್ತುಕೊಳ್ಳುವುದೂ ಗೊತ್ತು. ಆದ್ದರಿಂದ ಮನುಷ್ಯ ಗುರು ಹಿರಿಯರ ಮತ್ತು ಸಜ್ಜನ ಸತ್ಪುರುಷರ ಮಾರ್ಗದರ್ಶನದಲ್ಲಿ ಬದುಕು ಕಟ್ಟಿಕೊಳ್ಳಬೇಕೆಂದರು.ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವ್ಯಕ್ತಿಗೆ ಕೊಳೆ ಅಂಟಿದರೆ ಶುದ್ಧ ಮಾಡಬಹುದು. ಆದರೆ ವ್ಯಕ್ತಿತ್ವವೇ ಕೊಳಕಾಗಿದ್ದರೆ ತೊಳೆ ಯುವುದು ಕಷ್ಟ. ಆದ್ದರಿಂದ ಶ್ರೀ ಗುರುವಿನ ಬೋಧಾಮೃತದಲ್ಲಿ ಮುನ್ನಡೆದು ಜೀವನ ಪಾವನ ಗೊಳಿಸಿಕೊಳ್ಳಬೇಕು ಎಂದರು.
ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿ ಮತ್ತು ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳು ಶ್ರೀ ಜಗದ್ಗುರು ರೇಣುಕಾಚಾರ್ಯರ ಮತ್ತು ಭಕ್ತಿ ಭಂಡಾರಿ ಬಸವಣ್ಣನವರ ವಿಚಾರ ಧಾರೆಗಳನ್ನು ಭಕ್ತ ಸಂಕುಲಕ್ಕೆ ಮನವರಿಕೆ ಮಾಡಿಕೊಟ್ಟರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಜನ ಸಮುದಾಯದಲ್ಲಿ ಧಾರ್ಮಿಕ ಸದ್ಭಾವನೆ ಬೆಳೆದು ಬರಲು ಇಂಥ ಸಮಾರಂಭಗಳ ಅವಶ್ಯಕತೆಯಿದೆ. ಶ್ರೀ ಜಗದ್ಗುರು ರೇಣುಕರ, ಬಸವಣ್ಣನವರ ಚಿಂತನೆಗಳು ಸರ್ವ ಜನಾಂಗದ ಶ್ರೇಯೋಭಿವೃದ್ಧಿಗೆ ಸಹಕಾರಿ. ಮತ್ತೊಮ್ಮೆ ಚಿಕ್ಕಮಗಳೂರು ನಗರದಲ್ಲಿ ಶ್ರೀ ರಂಭಾಪುರಿ ಪೀಠದ ದಸರಾ ದರ್ಬಾರ ನಡೆಸಬೇಕೆಂಬುದು ನಮ್ಮೆಲ್ಲರ ಆಶೆಯಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಮಾತನಾಡಿ, ಭಾರತೀಯ ಸಂಸ್ಕೃತಿ ಉತ್ಕೃಷ್ಠವಾದುದು. ಇರುವುದೊಂದೇ ಧರ್ಮ, ಇನ್ನುಳಿದವುಗಳೆಲ್ಲವೂ ಮತಗಳಾಗಿವೆ. ಮತವನ್ನೇ ಧರ್ಮವೆಂದು ಕೆಲವರು ತಿಳಿದಿದ್ದಾರೆ. ಧರ್ಮದ ದೂರದೃಷ್ಠಿ ಮತ್ತು ಅನೇಕ ದಾರ್ಶನಿಕರ ವಿಚಾರ ಧಾರೆಗಳು ಜನರ ಉನ್ನತಿಗೆ ಅವಶ್ಯಕವಾಗಿವೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಟ್ರಸ್ಟಿನ ಉಪಾಧ್ಯಕ್ಷ ಎ.ಬಿ. ಸುದರ್ಶನ್ ಮಾತನಾಡಿ, ಜೀವನದಲ್ಲಿ ನಡೆ ನುಡಿಗಳು ಶುದ್ಧವಾಗಿರಬೇಕು. ಗುರಿಯತ್ತ ನಮ್ಮೆಲ್ಲರ ಗಮನ ಇರಬೇಕೇ ಹೊರತು ಸಮಸ್ಯೆ ಅಡೆತಡೆ ಮೇಲಲ್ಲ. ಶ್ರೀ ಜಗದ್ಗುರು ರೇಣುಕರ ಮತ್ತು ಬಸವಣ್ಣನವರ ಬೋಧನೆ ಸಾಧನೆಗಳು ನಮ್ಮೆಲ್ಲರ ಬಾಳಿಗೆ ಬೆಳಕು ತೋರುತ್ತವೆ ಎಂದರು.
ಟ್ರಸ್ಟ್ ಗೌರವ ಕಾರ್ಯದರ್ಶಿ ಸಿ.ವಿ.ಮಲ್ಲಿಕಾರ್ಜುನ್, ಸದಸ್ಯರಾದ ಎಂ.ಡಿ.ಪುಟ್ಟಸ್ವಾಮಿ, ಎಸ್.ಎಂ. ದೇವಣ್ಣಗೌಡ, ಎ.ಎಸ್.ಸೋಮಶೇಖರಯ್ಯ, ಎಚ್.ಎಸ್.ನಂಜೇಗೌಡ ಉಪಸ್ಥಿತರಿದ್ದರು. ಟ್ರಸ್ಟ್ ಖಜಾಂಚಿ ಯು.ಎಂ.ಬಸವರಾಜು ಸ್ವಾಗತಿಸಿದರು. ಟ್ರಸ್ಟ್ ಸದಸ್ಯ ಬಿ.ಬಿ.ರೇಣುಕಾರ್ಯರು ನಿರೂಪಿಸಿ ದರು. ಟ್ರಸ್ಟ್ ಸದಸ್ಯ ಬಿ.ಎ.ಶಿವಶಂಕರ ವಂದನಾರ್ಪಣೆ ಸಲ್ಲಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಗೋಷ, ಮಹಿಳಾ ಸದಸ್ಯರಿಂದ ಭಕ್ತಿಗೀತೆ ನಡೆದವು.ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜಾ ಜರುಗಿತು. ಇದೇ ಸಂದರ್ಭದಲ್ಲಿ ಹಲವಾರು ವೀರಮಾಹೇಶ್ವರ ಜಂಗಮ ವಟುಗಳಿಗೆ ವೀರಶೈವ ಧರ್ಮ ಪರಂಪರೆಯಂತೆ ಶಂಕರದೇವರ ಮಠದ ಚಂದ್ರಶೇಖರ ಶ್ರೀಗಳು ಶಿವದೀಕ್ಷಾ ನೆರವೇರಿಸಿ ಮಂತ್ರೋಪದೇಶಗೈದರು. 12 ಕೆಸಿಕೆಎಂ 1ಚಿಕ್ಕಮಗಳೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಬುಧವಾರ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಭಕ್ತಿ ಭಂಡಾರಿ ಶ್ರೀ ಬಸವೇಶ್ವರ ಜಯಂತ್ಯುತ್ಸವನ್ನು ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು, ಶಾಸಕ ಎಚ್.ಡಿ. ತಮ್ಮಯ್ಯ, ಎಂಎಲ್‌ಸಿ ಸಿ.ಟಿ. ರವಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.