ಸೌರ ವಿದ್ಯುತ್ ಉತ್ಪಾದನೆಗೆ ಶೇ.80ರಷ್ಟು ಸಬ್ಸಿಡಿ

KannadaprabhaNewsNetwork |  
Published : Aug 09, 2024, 12:31 AM IST
ಸಿಕೆಬಿ-3 ಇಂಧನ ಇಲಾಖೆಯ ವಿಷಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ  ಸಚಿವ ಕೆ.ಜೆ. ಜಾರ್ಜ್ತ ಮಾನಾಡಿದರು  | Kannada Prabha

ಸಾರಾಂಶ

ಸರ್ಕಾರ ಕೈಗೊಂಡ ಕೆಲವು ಮುನ್ನೆಚ್ಚರಿಕೆ ಕ್ರಮಗಳಿಂದ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಾಗಿ ಬೇರೆ ರಾಜ್ಯಗಳಿಗೆ ಪೂರೈಸುವ ಸ್ಥಿತಿಗೆ ತಲುಪಿದ್ದೇವೆ.. ಹೀಗೆಯೇ ಮುಂದುವರೆಸಿದರೆ ರಾಜ್ಯವು ವಿದ್ಯುತ್ ಉತ್ಪಾದನೆಯಲ್ಲಿ ಮೊದಲನೆ ಸ್ಥಾನಕ್ಕೆ ಬರಲಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಕುಸುಮ ಸೌರ ವಿದ್ಯುತ್ ಬಿ ಮತ್ತು ಸಿ ಯೋಜನೆ”ಯ ಅನುಷ್ಠಾನವು ನಮ್ಮ ರಾಜ್ಯದ ರೈತರ ವಿದ್ಯುತ್ ಬೇಡಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು. ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಇಂಧನ ಇಲಾಖೆಯ ವಿಷಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸೌರ ವಿದ್ಯುತ್ ಯೋಜನೆ ಅನುಷ್ಠಾನ

ಸರ್ಕಾರ ಕೈಗೊಂಡ ಕೆಲವು ಮುನ್ನೆಚ್ಚರಿಕೆ ಕ್ರಮಗಳಿಂದ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಾಗಿ ಬೇರೆ ರಾಜ್ಯಗಳಿಗೆ ಪೂರೈಸುವ ಸ್ಥಿತಿಗೆ ತಲುಪಿದ್ದೇವೆ.. ಹೀಗೆಯೇ ಮುಂದುವರೆಸಿದರೆ ರಾಜ್ಯವು ವಿದ್ಯುತ್ ಉತ್ಪಾದನೆಯಲ್ಲಿ ಮೊದಲನೆ ಸ್ಥಾನಕ್ಕೆ ಬರಲಿದೆ. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಕುಸುಮ ಸೌರ ವಿದ್ಯುತ್ ಯೋಜನೆಯನ್ನು ರಾಜ್ಯದಾದ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಿ ಸಹಾಯಧನವನ್ನು ಹೆಚ್ಚಿಸಿದೆ ಎಂದರು.

ಶೇ. 80 ರಷ್ಟು ಸಹಾಯಧನ

ಪ್ರಸ್ತುತ ರಾಜ್ಯ ಸರ್ಕಾರ ಶೇ. 50 ರಷ್ಟು ಸಹಾಯಧನ ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಶೇ. 30 ರಷ್ಟು ಸಹಾಯಧನ ನೀಡುತ್ತಿದ್ದು, ಪ್ರಸ್ತುತ ರಾಜ್ಯದಲ್ಲಿ ಒಟ್ಟು ಶೇ. 80 ರಷ್ಟು ಸಹಾಯಧನವನ್ನು ಕುಸುಮ ಯೋಜನೆಯಡಿ ರೈತರ ನೀರಾವರಿ ಉದ್ದೇಶಗಳಿಗೆ ನೀಡಲು ಮುಂದಾಗಿದೆ. ಈ ಯೋಜನೆಯು ಅನುಷ್ಠಾನಗೊಂಡಲ್ಲಿ ರೈತರ ವಿದ್ಯುತ್ ಬೇಡಿಕೆಯ ಎಲ್ಲ ಸಮಸ್ಯೆಗಳು ಪರಿಹಾರವಾಗಲಿದೆ. ಜೊತೆಗೆ ಮುಂದಿನ ದಿನಗಳಲ್ಲಿ ವಿದ್ಯುತ್ ಕೊರತೆಯ ಸಂಕಷ್ಟಕ್ಕೆ ರಾಜ್ಯ ಸಿಲುಕದಂತೆ ಕಾಪಾಡಬಹುದಾಗಿದೆ. ಆದ್ದರಿಂದ ರೈತರು ಆನ್ ಲೈನ್ ಮೂಲಕ ಈ ಯೋಜನೆಯಡಿ ಅರ್ಜಿ ಹಾಕಿಕೊಳ್ಳಲು ಮನವಿ ಮಾಡಿದರು.ಕುಸುಮ ಸೌರ ವಿದ್ಯುತ್ ಯೋಜನೆಯಡಿ ನೋಂದಾಯಿತ ರೈತರಿಗೆ ಕೊಳವೆ ಬಾವಿ ಮತ್ತು ನೀರು ಇದ್ದಲ್ಲಿ ಸೌರ ವಿದ್ಯುತ್ ಪಂಪ್ ಸೆಟ್ ಮತ್ತು ಪ್ಯಾನಲ್ ಬೋರ್ಡ್ ಸಹಿತ ಇತರ ಪರಿಕರಗಳನ್ನು ಸರ್ಕಾರ ನೀಡಲಿದೆ. ಅದಕ್ಕಾಗಿ ಅರ್ಹ ಹಾಗೂ ಮಾನ್ಯತೆ ಪಡೆದ ಗುತ್ತಿಗೆದಾರರನ್ನು ಗುರ್ತಿಸಲಾಗಿದೆ. ಜೊತೆಗೆ ಸ್ಥಳೀಯವಾಗಿ 4-5 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸಲು ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಲು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ 871 ಎಕರೆ ಜಾಗವನ್ನು ಗುರ್ತಿಸಿ ನೀಡುವಂತೆ ತಿಳಿಸಲಾಗಿದೆ ಎಂದರು.

ಸ್ಥಳೀಯವಾಗಿ ವಿದ್ಯುತ್‌ ವಿತರಣೆ

ಈ ರೀತಿ ಉತ್ಪಾದನೆಯಾದ ವಿದ್ಯುತ್ ನ್ನು ವಿದ್ಯುತ್ ಉಪ ಕೇಂದ್ರದಿಂದ 500 ಮೀಟರ್ ಅಂತರದ ಸ್ಥಳೀಯ ರೈತರಿಗೆ, ಸರ್ಕಾರಿ ಶಾಲೆ, ಅಂಗನವಾಡಿಗಳು ಹಾಗೂ ಇತರ ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ಅನ್ನು ಪೂರೈಸಲಾಗುವುದು. ಉಳಿದ ವಿದ್ಯುತ್ ಅನ್ನು ಗ್ರಿಡ್‌ಗಳ ಮೂಲಕ ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳುವ ಗುರಿ ಹೊಂದಲಾಗಿದೆ ಎಂದರು.

ದಿಬ್ಬೂರು ಮತ್ತು ಕೇತೇನಹಳ್ಳಿ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯದ ಸಮಸ್ಯೆಯು ಹೆಚ್ಚಿರುವುದು ಗಮನಕ್ಕೆ ಬಂದಿದೆ. ಈ ತಿಂಗಳ 31ನೇ ತಾರೀಖಿನ ಒಳಗಾಗಿ ಆ ಸಮಸ್ಯೆಯನ್ನು ಪರಿಹರಿಸಿ ನಿರಂತರವಾಗಿ ವಿದ್ಯುತ್ ಪೂರೈಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗೌರಿಬಿದನೂರಿನಲ್ಲಿ ವಿಭಾಗೀಯ ಕಚೇರಿಯನ್ನು ಮತ್ತು 220 ಕೆ.ವಿ. ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ ತೆರೆಯಲು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ ಸುಧಾಕರ್, ಶಾಸಕರಾದ ಪ್ರದೀಪ್ ಈಶ್ವರ್, ಕೆ.ಹೆಚ್ ಪುಟ್ಟಸ್ವಾಮಿ ಗೌಡ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ,ಕ.ವಿ.ಪ್ರ.ನಿ.ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬಿಳಗಿ, ಬೆ.ವಿ.ಕಂ (ತಾಂತ್ರಿಕ) ನಿರ್ದೇಶಕ ಹೆಚ್.ಜೆ. ರಮೇಶ್, ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಜಿ.ಪಂ. ಸಿಇಓ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಎಸ್ಪಿ ಕುಶಲ್ ಚೌಕ್ಸೆ, ಡಿಸಿಎಫ್ ಓ ಬಿ.ಆರ್ ರಮೇಶ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು