ರಸ್ತೆ ಸುರಕ್ಷತಾ ಸಮಿತಿ ಸಭೆ । ಅಜಾಗರೂಕತೆಯ ಚಾಲನೆ ವಿರುದ್ಧ ಕಠಿಣ ಕ್ರಮದ ಮಾಹಿತಿ
ಉಡುಪಿ ಜಿಲ್ಲೆಯಲ್ಲಿ ಅತೀ ವೇಗ, ಅಜಾಗರೂಕತೆಯಿಂದ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣವಾದ 82 ಜನರ ಚಾಲನ ಪರವಾನಗಿಯನ್ನು 6 ತಿಂಗಳ ಅವಧಿಗೆ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಮಾಹಿತಿ ನೀಡಿದ್ದಾರೆ.ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಗುರುತಿಸಲಾಗಿರುವ ಬ್ಲಾಕ್‌ಸ್ಪಾಟ್‌ಗಳಲ್ಲಿ ವಾಹನಗಳ ಸುರಕ್ಷಿತ ಚಾಲನೆಗೆ ಅಗತ್ಯ, ವೈಜ್ಞಾನಿಕ ಕ್ರಮಗಳನ್ನು ಆದ್ಯತೆಯಲ್ಲಿ ಕೈಗೊಳ್ಳಬೇಕು, ಅವಶ್ಯವಿದ್ದಲ್ಲಿ ಹಂಪ್‌ಗಳ ಅಳವಡಿಕೆ, ಸೂಚನಾ ಫಲಕ ಮತ್ತಿತರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರ ವ್ಯಾಪ್ತಿಯಲ್ಲಿ ಬಸ್‌ಗಳನ್ನು ಅತೀ ವೇಗವಾಗಿ ಓಡಿಸುವ, ಎಲ್ಲೆಂದರಲ್ಲಿ ನಿಲ್ಲಿಸುವ, ಸುಗಮ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಮತ್ತು ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಡಿಸಿ ಸೂಚನೆ ನೀಡಿದರು.
.....................................
ಆಟೋ ನಿಲ್ದಾಣ ಸದಸ್ಯತ್ವಕ್ಕೆ 1 ಲಕ್ಷ ರು. ವಸೂಲಿ !ಉಡುಪಿಯಲ್ಲಿ ಆಟೋ ನಿಲ್ದಾಣಗಳಲ್ಲಿ ಆಟೋ ನಿಲ್ಲಿಸಲು, ಸದಸ್ಯತ್ವ ಎಂದು ಹೇಳಿ 40 ಸಾವಿರದಿಂದ 1 ಲಕ್ಷ ರು.ಗಳವರೆಗೆ ಹಣ ವಸೂಲಿ ಮಾಡಿದ ಬಗ್ಗೆ ದೂರುಗಳು ಬಂದಿವೆ. ಆಟೋ ನಿಲ್ದಾಣದ ಸ್ಥಳ ನಗರಸಭೆಯ ಸೊತ್ತಾಗಿದೆ. ಈ ನಿಲ್ದಾಣಗಳಿಗೆ ಯಾರೂ ಸದಸ್ಯತ್ವ ನೀಡುವ, ಹಣ ವಸೂಲಿ ಮಾಡುವ ಹಾಗಿಲ್ಲ. ಈ ಬಗ್ಗೆ ನಗರಸಭಾ ಆಯುಕ್ತರು ಸೂಕ್ತ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.