ಐದೂವರೆ ವರ್ಷದಲ್ಲಿ ರಾಜ್ಯದಲ್ಲಿ 82 ಹುಲಿಗಳು ಬಲಿ

KannadaprabhaNewsNetwork | Updated : Jun 29 2025, 07:42 AM IST

ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ 5 ಹುಲಿಗಳ ಅಸಹಜ ಸಾವು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದೆ. ಕಳೆದ ಐದೂವರೆ ವರ್ಷಗಳಲ್ಲಿ ರಾಜ್ಯದಲ್ಲಿ 82 ಹುಲಿಗಳು ಸಾವನ್ನಪ್ಪಿವೆ.

 ಬೆಂಗಳೂರು :  ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ 5 ಹುಲಿಗಳ ಅಸಹಜ ಸಾವು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದೆ. ಕಳೆದ ಐದೂವರೆ ವರ್ಷಗಳಲ್ಲಿ ರಾಜ್ಯದಲ್ಲಿ 82 ಹುಲಿಗಳು ಸಾವನ್ನಪ್ಪಿವೆ.

ಹುಲಿ ಸಂರಕ್ಷಣೆ ದೃಷ್ಟಿಯಿಂದಾಗಿ ದೇಶದಲ್ಲಿ ಕಠಿಣ ಕಾನೂನು ಜಾರಿಗೊಳಿಸಲಾಗಿದೆ. ಅದರೊಂದಿಗೆ ಹುಲಿ ಬೇಟೆ ಸೇರಿದಂತೆ ಹುಲಿಗಳ ಅಸಹಜ ಸಾವಿಗೆ ಕಾರಣರಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೂ, ರಾಜ್ಯ ಸೇರಿದಂತೆ ದೇಶದಲ್ಲಿ ಹುಲಿ ಬೇಟೆ, ವಿಷ ಪ್ರಾಶನದಂತಹ ಪ್ರಕರಣಗಳು ನಡೆಯುತ್ತಲೇ ಇವೆ. ಉಳಿದಂತೆ ಸಹಜ ರೀತಿಯಲ್ಲಿ ಸಾವನ್ನಪ್ಪುವ ಹುಲಿಗಳ ಸಂಖ್ಯೆಯೂ ಹೆಚ್ಚಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ)ದ ದಾಖಲೆಯಂತೆ, 2020ರಿಂದ 2025ರ ಜೂನ್‌ 28ರವರೆಗೆ ಒಟ್ಟಾರೆ 82 ಹುಲಿಗಳು ಸಾವನ್ನಪ್ಪಿವೆ. ಅದರಲ್ಲಿ ಬಹುತೇಕ ಹುಲಿಗಳು ಹುಲಿ ಮೀಸಲು ಪ್ರದೇಶಗಳಲ್ಲಿಯೇ ಕೊನೆಯುಸಿರೆಳೆದಿವೆ.

2020ರಿಂದ 2025ರ ಈವರೆಗೆ ದೇಶದಲ್ಲಿ 662 ಹುಲಿಗಳು ಸಾವನ್ನಪ್ಪಿವೆ. ಅದರಲ್ಲಿ ರಾಜ್ಯದಲ್ಲಿಯೇ 82 ಹುಲಿಗಳು ಸಾವಿಗೀಡಾಗಿವೆ. 2020ರಲ್ಲಿ 14, 2021ರಲ್ಲಿ 15, 2022ರಲ್ಲಿ 18, 2023ರಲ್ಲಿ 12, 2024ರಲ್ಲಿ 14 ಹುಲಿಗಳು ಮರಣ ಹೊಂದಿವೆ. ಪ್ರಸಕ್ತ ವರ್ಷದಲ್ಲಿ ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ 5 ಹುಲಿಗಳ ಅಸಹಜ ಸಾವು ಸೇರಿದಂತೆ 9 ಹುಲಿಗಳು ಸಾವಿಗೀಡಾಗಿವೆ. ಅದರಲ್ಲಿ ಶುಕ್ರವಾರ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಮರಣ ಹೊಂದಿದ ಹುಲಿಯೂ ಸೇರಿದೆ. ಉಳಿದಂತೆ 2012-2024ರವರೆಗೆ ರಾಜ್ಯದಲ್ಲಿ 179 ಹುಲಿ ಸಾವಿನ ಪ್ರಕರಣ ಪತ್ತೆಯಾಗಿದೆ.

7 ವರ್ಷಗಳಲ್ಲಿ ನಾಲ್ಕನೇ ವಿಷಪ್ರಾಶನ

ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳು ವಿಷ ಪ್ರಾಶನದಿಂದಲೇ ಸಾವಿಗೀಡಾಗಿರುವುದು ಬಹುತೇಕ ದೃಢಪಟ್ಟಿದೆ. ಈ ಪ್ರಕರಣಕ್ಕೂ ಮುನ್ನ ಮೂರು ಬಾರಿ ವಿಷ ಪ್ರಾಶನದಿಂದ ಹುಲಿಗಳು ಸಾವನ್ನಪ್ಪಿದ ಪ್ರಕರಣ ದಾಖಲಾಗಿದ್ದವು. 2019ರಲ್ಲಿ ನಾಗರಹೊಳೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾಡುಹಂದಿಗಾಗಿ ಇಟ್ಟಿದ್ದ ವಿಷವನ್ನು ಸೇವಿಸಿ ಹುಲಿಯೊಂದು ಮೃತಪಟ್ಟಿತ್ತು. 2021ರಲ್ಲಿ ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಮತ್ತು 2023ರಲ್ಲಿ ಬಂಡೀಪುರದ ಕೆಬ್ಬೇಪುರದಲ್ಲಿ ತಲಾ ಒಂದೊಂದು ಹುಲಿ ವಿಷ ಪ್ರಾಶನದಿಂದ ಮರಣ ಹೊಂದಿದ್ದವು. ಅದರಲ್ಲೂ ಬಂಡೀಪುರದ ಕೆಬ್ಬೇಪುರದಲ್ಲಿ ವಿಷ ಪ್ರಾಶನದಿಂದ ಮೃತಪಟ್ಟಿದ್ದ ಹುಲಿಯನ್ನು ಕಲ್ಲಿಗೆ ಕಟ್ಟಿ ನೀರಿನ ತೊರೆಗೆ ಎಸೆದ ಘಟನೆ ವರದಿಯಾಗಿತ್ತು.

ಒಮ್ಮೆಲೇ 5 ಹುಲಿ ಸಾವು ಇದೇ ಮೊದಲು

ಸಹಜ ಅಥವಾ ಅಸಹಜವಾಗಿ ಗರಿಷ್ಠ ಒಂದು ಅಥವಾ ಎರಡು ಹುಲಿಗಳು ಸಾವನ್ನಪ್ಪಿರುವುದು ರಾಜ್ಯದ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಅದೂ ಕೂಡ ವಯಸ್ಸಿನ ಹೆಚ್ಚು ಅಂತರವಿಲ್ಲದ ಹುಲಿಗಳಾಗಿವೆ. ಆದರೆ, ಒಮ್ಮೆಲೆ ತಾಯಿ ಮತ್ತು ಮರಿ ಹುಲಿಗಳು ಸಾವನ್ನಪ್ಪಿರುವ ಘಟನೆ ಇದೇ ಮೊದಲಾಗಿದೆ. ಅಲ್ಲದೆ, 5 ಹುಲಿಗಳು ಏಕಕಾಲದಲ್ಲಿ ಮರಣ ಹೊಂದಿದ ಪ್ರಕರಣವೂ ಇದೇ ಪ್ರಥಮ ಬಾರಿಯಾಗಿದೆ. 

Read more Articles on