ಸಿದ್ದಾಪುರದಲ್ಲಿ 85 ಹೆಕ್ಟೇರ್‌ ಪ್ರದೇಶದಲ್ಲಿ ಅಡಕೆಗೆ ಕೊಳೆರೋಗ

KannadaprabhaNewsNetwork |  
Published : Jul 26, 2025, 01:30 AM ISTUpdated : Jul 26, 2025, 12:37 PM IST
ಫೋಟೊಪೈಲ್-೨೫ಎಸ್ಡಿಪಿ೪- ಸಿದ್ದಾಪುರದಲ್ಲಿ ತಾಲೂಕ ಪಂಚಾಯತ ಸಾಮಾನ್ಯ ಸಭೆ ಜರುಗಿತು. | Kannada Prabha

ಸಾರಾಂಶ

ಅತಿಯಾದ ಮಳೆಯಿಂದ ಈಗಾಗಲೇ ತಾಲೂಕಿನ 80 ರಿಂದ 85 ಹೆಕ್ಟೇರ್ ಪ್ರದೇಶದಲ್ಲಿ ಅಡಕೆಗೆ ಕೊಳೆರೋಗ ಕಾಣಿಕೊಂಡಿದೆ.

ಸಿದ್ದಾಪುರ: ಅತಿಯಾದ ಮಳೆಯಿಂದ ಈಗಾಗಲೇ ತಾಲೂಕಿನ ೮೦ರಿಂದ ೮೫ ಹೆಕ್ಟೇರ್ ಪ್ರದೇಶದಲ್ಲಿ ಅಡಕೆಗೆ ಕೊಳೆರೋಗ ಕಾಣಿಕೊಂಡಿದೆ. ಕೊಳೆರೋಗ ನಿಯಂತ್ರಣಕ್ಕೆ ಔಷಧಿ ಸಿಂಪಡಿಸಲು ಮಳೆಯಿಂದಾಗಿ ಸಾಧ್ಯವಾಗುತ್ತಿಲ್ಲ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿ ಕೀರ್ತಿ ಹೆಗಡೆ ಹೇಳಿದರು.

ಸ್ಥಳೀಯ ತಾಪಂ ಸಭಾಂಗಣದಲ್ಲಿ ತಾಪಂ ಆಡಳಿತಾಧಿಕಾರಿ ಡಿ.ಆರ್. ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಕೃಷಿ ಅಧಿಕಾರಿ ಪ್ರಶಾಂತ ಜಿ.ಎಸ್. ಮಾತನಾಡಿ, ಈ ವರ್ಷ ತಾಲೂಕಿನಲ್ಲಿ ಮಳೆ ನಿರಂತರವಾಗಿ ಬೀಳುತ್ತಿರುವುದರಿಂದ ಬಿತ್ತನೆ ಕೃಷಿ ಕಡಿಮೆ ಆಗಿದೆ. ಅಗೆ ಮಡಿ ಮಾಡುವ ಸಿದ್ದತೆಯಲ್ಲಿ ರೈತರು ತೊಡಗಿಕೊಂಡಿದ್ದಾರೆ. ಮಳೆಯ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಕೃಷಿ ಕಾರ್ಯವೂ ಕುಂಠಿತಗೊಂಡಿದೆ. ಪ್ರತಿವರ್ಷ ಜುಲೈ ತಿಂಗಳಲ್ಲಿ ಗದ್ದೆ ನಾಟಿ ಕಾರ್ಯ ಶೇ. 60 ರಷ್ಟು ಆಗುತ್ತಿತ್ತು. ಈ ವರ್ಷ ಆಗಿಲ್ಲ. ತಾಲೂಕಿನಲ್ಲಿ ರಸಗೊಬ್ಬರ ಹಾಗೂ ಭತ್ತದ ಬೀಜ ದಾಸ್ತಾನು ಇದೆ ಎಂದರು.

ತಾಲೂಕಿನಲ್ಲಿ ವಿದ್ಯುತ್ ತಂತಿ ಹಾದು ಹೋಗಿರುವಲ್ಲಿನ ಹಾಗೂ ರಸ್ತೆಗೆ ಅಡ್ಡವಾಗಿರುವ ಮರಗಳನ್ನು ತೆರವುಗೊಳಿಸುವುದು ಅಗತ್ಯವಾಗಿದೆ. ತಾಲೂಕಿನ ೨೩ ಗ್ರಾಪಂನಿಂದ ೩೮೩ ಮರಗಳನ್ನು ತೆರವುಗೊಳಿಸಬೇಕಾಗಿದೆ ಹಾಗೂ ೨೫೩ ಮರಗಳ ಟೊಂಗೆಗಳನ್ನು ತೆಗೆಯಬೇಕಾಗಿದೆ. ಈ ಕುರಿತು ಈಗಾಗಲೇ ಆರ್‌ಎಫ್‌ಒಗಳಿಗೆ ಮಾಹಿತಿ ನೀಡಲಾಗಿದೆ. ಎಲ್ಲ ಪಿಡಿಒಗಳು ಸಹ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ ಎಂದು ತಾಪಂ ಇಒ ದೇವರಾಜ ಹಿತ್ತಲಕೊಪ್ಪ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆಡಳಿತಾಧಿಕಾರಿ ಡಿ.ಆರ್. ನಾಯ್ಕ, ಅರಣ್ಯ ಇಲಾಖೆ ಕೂಡಲೇ ಕ್ರಮಕೈಗೊಳ್ಳಬೇಕು. ಅರಣ್ಯ ಇಲಾಖೆಯವರು ಸಭೆಗೆ ಬಾರದೇ ಇರುವುದರಿಂದ ಅವರಿಗೆ ತಾಪಂ ಇಒ ಅವರು ಮಾಹಿತಿ ನೀಡಬೇಕು ಎಂದು ಹೇಳಿದರು.

ತಾಲೂಕಿನಲ್ಲಿ ನಾಯಿ ಕಡಿತದ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಈ ಕುರಿತು ಸಂಬಂಧಪಟ್ಟ ಗ್ರಾಪಂ ಹಾಗೂ ಪಟ್ಟಣದಲ್ಲಿ ಪಪಂ ಆಡಳಿತ ಕ್ರಮಕೈಗೊಳ್ಳಬೇಕು ಎಂದು ಆಡಳಿತಾಧಿಕಾರಿ ಡಿ.ಆರ್. ನಾಯ್ಕ ತಿಳಿಸಿದರು.

ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ವಿವೇಕ ಹೆಗಡೆ ಮಾತನಾಡಿ, ತಾಲೂಕಿನಲ್ಲಿ ೩೫,೧೦೮ ಜಾನುವಾರುಗಳಿಗೆ ಕಾಲು-ಬಾಯಿ ಲಸಿಕೆ ನೀಡಲಾಗಿದೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹೆಚ್ಚಿದೆ. ಇದರಿಂದ ದಿನನಿತ್ಯದ ಕಾರ್ಯ ನಿರ್ವಹಣೆಗೆ ತೊಂದರೆ ಆಗುತ್ತಿದೆ ಎಂದರು.

ಶಿಕ್ಷಣ, ಜಿಪಂ, ಲೋಕೋಪಯೋಗಿ, ನೀರಾವರಿ, ಸಮಾಜ ಕಲ್ಯಾಣ, ಹಿಂದುಳಿದ ಇಲಾಖೆ, ಸಿಡಿಪಿಒ ಮತ್ತಿತರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ತಾಪಂ ಇಒ ದೇವರಾಜ ಹಿತ್ತಲಕೊಪ್ಪ, ತಾಪಂ ಲೆಕ್ಕಾಧಿಕಾರಿ ಸುಬ್ರಹ್ಮಣ್ಯ ಭಟ್ಟ ಉಪಸ್ಥಿತರಿದ್ದರು.

PREV
Read more Articles on

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’