ಸಿದ್ದಾಪುರ: ಕುಮಟಾ- ಕೊಡಮಡಗಿ (ಸಿದ್ದಾಪುರ- ಕುಮಟಾ) ರಾಜ್ಯ ಹೆದ್ದಾರಿಯಲ್ಲಿರುವ ತಾಲೂಕಿನ ಭುವನಗಿರಿ ಸಮೀಪದ ದುಬಾರಿ ಘಟ್ಟದ ತಿರುವಿನಲ್ಲಿ ಭೂಕುಸಿತ ಉಂಟಾಗಿದೆ. ಮುಖ್ಯ ಮಾರ್ಗದಲ್ಲಿ ಸಂಚಾರಕ್ಕೆ ತೊಂದರೆಯಾಗುವ ಆತಂಕ ನಿರ್ಮಾಣವಾಗಿದೆ.
ಕಳೆದ ೨-೩ ವರ್ಷಗಳಿಂದ ಧರೆ ಕುಸಿತ ಉಂಟಾಗುತ್ತಿದೆ. ಈ ಕುರಿತು ಸ್ಥಳೀಯರು ಲೋಕೋಪಯೋಗಿ ಇಲಾಖೆ ಮತ್ತು ತಹಶೀಲ್ದಾರರಿಗೆ ಮಾಹಿತಿ ನೀಡಿದ್ದರು. ಕಳೆದ ವರ್ಷ ತಹಶೀಲ್ದಾರ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಧರೆಯ ಕೆಳಗೆ ಅತಿಕ್ರಮಣ ಜಾಗದಲ್ಲಿ ಮಾಡಿರುವ ಅಡಕೆ ತೋಟದವರು ಧರೆಯ ಮಣ್ಣನ್ನು ತೆಗೆಯುತಿರುವುದರಿಂದ ಧರೆ ಕುಸಿಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು, ರಸ್ತೆ ಕುಸಿತ ತಡೆಯಲು ಸೂಕ್ತ ಕ್ರಮ ಜರುಗುಸುವ ಭರವಸೆ ನೀಡಿದ್ದರು. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿರುವುದೇ ರಸ್ತೆಯ ದುಸ್ಥಿತಿಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಕುಸಿದಿದೆ. ಇದೇ ರೀತಿ ಮಳೆಯಾದರೆ ಸಂಪೂರ್ಣ ಕುಸಿದು ರಸ್ತೆ ಸಂಚಾರ ಸ್ಥಗಿತವಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಸಿದ್ದಾಪುರ-ಕುಮಟಾ ರಾಜ್ಯ ಹೆದ್ದಾರಿ ಜಿಲ್ಲೆಯ ಪ್ರಮುಖ ಸಂಪರ್ಕ ಮಾರ್ಗದಲ್ಲೊಂದಾಗಿದ್ದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಾರ್ಯಪ್ರವರ್ತರಾಗಿ ಮುಂದಾಗುವ ಅವಘಡ ತಪ್ಪಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.
ಸಿದ್ದಾಪುರ ತಾಲೂಕಿನ ಭುವನಗಿರಿ ಸಮೀಪದ ದುಬಾರಿ ಘಟ್ಟದ ತಿರುವಿನಲ್ಲಿ ಭೂಕುಸಿತ ಉಂಟಾಗಿರುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.