ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ಮುಜುಗರಕ್ಕೆ ಈಡು ಮಾಡಿದ್ದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣದ ಹೊಸ ಕಂತು ಪಾವತಿಗೆ ಮುಹೂರ್ತ ಕೊನೆಗೂ ಕೂಡಿ ಬಂದಿದೆ.

ಬೆಳಗಾವಿ : ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ಮುಜುಗರಕ್ಕೆ ಈಡು ಮಾಡಿದ್ದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣದ ಹೊಸ ಕಂತು ಪಾವತಿಗೆ ಮುಹೂರ್ತ ಕೊನೆಗೂ ಕೂಡಿ ಬಂದಿದೆ.

24ನೇ ಕಂತಿನ ಹಣ ಬಿಡುಗಡೆಗೆ ಹಣಕಾಸು ಇಲಾಖೆ ಅನುಮತಿ ನೀಡಿದೆ. ಸೋಮವಾರದಿಂದ ಶನಿವಾರದೊಳಗೆ ಗೃಹಲಕ್ಷ್ಮಿ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಹಣ ಹಾಕಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಫೆಬ್ರವರಿ- ಮಾರ್ಚ್‌ ತಿಂಗಳ ಹಣದ ಬಗ್ಗೆ ಅವರು ಉಲ್ಲೇಖ ಮಾಡಿಲ್ಲ

ಆದರೆ ಅಧಿವೇಶನದ ಸಂದರ್ಭದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ಫೆಬ್ರವರಿ- ಮಾರ್ಚ್‌ ತಿಂಗಳ ಹಣದ ಬಗ್ಗೆ ಅವರು ಉಲ್ಲೇಖ ಮಾಡಿಲ್ಲ. 24ನೇ ಕಂತಿನಲ್ಲಿ ಯಾವ ತಿಂಗಳ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದೂ ಅವರು ಹೇಳಿಲ್ಲ. 23ನೇ ಕಂತಿನಲ್ಲಿ ಸೆಪ್ಟೆಂಬರ್‌ ತಿಂಗಳ ಹಣ ಬಿಡುಗಡೆಯಾಗಿತ್ತು ಎನ್ನಲಾಗಿದೆ. 24ನೇ ಕಂತಿನಲ್ಲಿ ಉಳಿದ ತಿಂಗಳ ಹಣ ಬಿಡುಗಡೆಯಾಗುತ್ತೋ? ಒಂದು ತಿಂಗಳ ಹಣ ಮಾತ್ರ ಬರುತ್ತೋ ಎಂದು ಫಲಾನುಭವಿಗಳು ಚರ್ಚಿಸುತ್ತಿದ್ದಾರೆ.

2025ರ ಜನವರಿ ಮತ್ತು ಫೆಬ್ರವರಿಯಲ್ಲಿ ರಾಜ್ಯ ಸರ್ಕಾರವು ಗೃಹಲಕ್ಷ್ಮೀ ಹಣವನ್ನು ಖಾತೆಗೆ ಜಮೆ ಮಾಡಿರಲಿಲ್ಲ. ಈ ಹಣವನ್ನು ಮಾರ್ಚ್‌ ತಿಂಗಳಲ್ಲಿ ಹಾಕಿತ್ತು. ಏಪ್ರಿಲ್ ಮತ್ತು ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳ ಹಣವನ್ನು ಸರ್ಕಾರವು ಏಪ್ರಿಲ್‌ ತಿಂಗಳಲ್ಲಿ ಒಟ್ಟಿಗೇ ಜಮಾ ಮಾಡಿತ್ತು. ಮೇ ಮತ್ತು ಜೂನ್‌ ತಿಂಗಳ ಹಣವನ್ನು ಆಯಾ ತಿಂಗಳಿನಲ್ಲಿಯೇ ಹಾಕಲಾಗಿದೆ. ಜುಲೈ ಹಣವನ್ನು ಆಗಸ್ಟ್‌ನಲ್ಲಿ ಹಾಕಲಾಗಿದೆ. ಆಗಸ್ಟ್‌ ಹಣ ಅಕ್ಟೋಬರ್‌ನಲ್ಲಿ ಹಾಗೂ ಸೆಪ್ಟೆಂಬರ್‌ ಹಣ ಡಿಸೆಂಬರ್‌ನಲ್ಲಿ ಹಾಕಲಾಗುತ್ತಿದೆ. ಆದರೆ ಅಕ್ಟೋಬರ್‌, ನವೆಂಬರ್‌, ಡಿಸೆಂಬರ್‌ ಹಣ ಇನ್ನೂ ಬಿಡುಗಡೆ ಆಗುವುದು ಬಾಕಿ ಇದೆ.

ಪ್ರತಿಪಕ್ಷಗಳ ಪ್ರಹಾರ:

ಗೃಹ ಲಕ್ಷ್ಮಿ ಹಣ ಸರಿಯಾಗಿ ಬಿಡುಗಡೆ ಆಗುತ್ತಿಲ್ಲ. ₹5000 ಕೋಟಿ ಹಣದ ಲೆಕ್ಕ ಸಿಗುತ್ತಿಲ್ಲ ಎಂದು ಸರ್ಕಾರದ ಮೇಲೆ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಚಳಿಗಾಲದ ಅಧಿವೇಶನದಲ್ಲಿ ಮುಗಿಬಿದ್ದಿದ್ದವು. ಹಣವನ್ನು ಬಿಡುಗಡೆ ಮಾಡಿದ್ದೇವೆ ಎಂದು ಸರ್ಕಾರ ಅಧಿವೇಶನದಲ್ಲಿ ಹೇಳಿಕೆ ನೀಡಿತ್ತು. ಆದರೆ ಪ್ರತಿಪಕ್ಷಗಳು ದಾಖಲೆ ಸಮೇತ ವಾದ ಮಾಡಿಸಿದ್ದರಿಂದ ಇಕ್ಕಟ್ಟಿಗೆ ಸಿಲುಕಿದ ಸರ್ಕಾರ, ಕೆಲ ತಿಂಗಳ ಹಣ ನೀಡಲು ತಡವಾಗಿದೆ ಎಂದು ಹೇಳಿಕೆ ನೀಡಿದರೂ ಪ್ರಯೋಜನವಾಗದೇ ಮುಜುಗರಕ್ಕೆ ಈಡಾಗಿತ್ತು. ಕೊನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಕ್ಷಮೆ ಕೇಳಿದ್ದರು. ಅಲ್ಲದೆ ಹಣ ದುರ್ಬಳಕೆ ಆಗಿಲ್ಲ. ಈ ಹಣವನ್ನು ಕೊಡಲು ತಡವಾಗಿದೆ. ಶೀಘ್ರದಲ್ಲಿಯೇ ನೀಡುತ್ತೇವೆ ಎಂದು ಸಚಿವೆ ಲಕ್ಷ್ಮೀ ಸಮರ್ಥಿಸಿಕೊಳ್ಳಲು ಯತ್ನಿಸಿದ್ದರು. ಈಗ ಹಣ ಬಿಡುಗಡೆ ಮಾಡಲು ಸರ್ಕಾರದ ಹಣಕಾಸು ಇಲಾಖೆ ಸಮ್ಮತಿಸಿದ್ದು, ಅಧಿವೇಶನದಲ್ಲಿ ನೀಡಿದ್ದ ಭರವಸೆಯಂತೆ ಗೃಹ ಲಕ್ಷ್ಮೀಯರ ಖಾತೆಗೆ ಹಣ ನೀಡಲಾಗುತ್ತಿದೆ. ಸೋಮವಾರದಿಂದ ಹಣವನ್ನು ಖಾತೆಗೆ ಹಾಕಲು ಆರಂಭಿಸಲಾಗುತ್ತದೆ. ಶನಿವಾರದೊಳಗೆ ಹಣವು ಖಾತೆಗೆ ಬರಲಿದೆ. ನಾನು ಕಂತಿನ ಬಗ್ಗೆ ಮಾತ್ರ ಹೇಳುವೆ. ತಿಂಗಳ ಬಗ್ಗೆ ಮಾತನಾಡಲ್ಲ ಎಂದು ಸಚಿವೆ ತಿಳಿಸಿದ್ದಾರೆ.

ಇನ್ನು ಮೃತಪಟ್ಟವರ ಖಾತೆಗೆ ಗೃಹಲಕ್ಷ್ಮಿ ಹಣ ಹೋಗಿರುವ ಬಗ್ಗೆಯೂ ಪ್ರತಿಕ್ರಿಯಿಸಿರುವ ಅವರು, ಮೃತಪಟ್ಟವರ ಖಾತೆಗೆ ಹಣ ಹೋಗುವುದು ಗೊತ್ತಾಗಲ್ಲ. ಹಾಗಾಗಿ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮೃತಪಟ್ಟವರ ಪ್ರಮಾಣ ಪತ್ರವನ್ನು ಪರಿಶೀಸಲಾಗುತ್ತದೆ. ಇನ್ನು ಹಣವನ್ನು ವಾಪಾಸ್‌ ಪಡೆಯಲು ಬ್ಯಾಂಕ್‌ನವರೊಂದಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಬ್ಯಾಂಕ್‌ನವರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣ ಬಿಡುಗಡೆಗೆ ಹಣಕಾಸು ಇಲಾಖೆಯವರು ಅನುಮೋದನೆ ಕೊಟ್ಟಿದ್ದಾರೆ. ಈ ಸೋಮವಾರದಿಂದ ಶನಿವಾರದೊಳಗೆ ಮಹಿಳೆಯರ ಖಾತೆಗೆ ಹಣ ಜಮೆಯಾಗುತ್ತದೆ.

- ಲಕ್ಷ್ಮೀ ಹೆಬ್ಬಾಳ್ಕರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ.

 2025 ಗೃಹಲಕ್ಷ್ಮೀ ಹಣ ಜಮಾ

ಜನವರಿ-ಬಂದಿಲ್ಲ

ಫೆಭ್ರವರಿ-ಬಂದಿಲ್ಲ

ಮಾರ್ಚ್‌- ಎರಡು ತಿಂಗಳ ಹಣ ಜಮಾ

ಏಪ್ರಿಲ್‌- ಎರಡು ತಿಂಗಳ ಹಣ ಜಮಾ

ಮೇ- ಬಂದಿದೆ.

ಜೂನ್‌-ಬಂದಿದೆ.

ಜುಲೈ - ಬಂದಿಲ್ಲ

ಅಗಸ್ಟ್‌- ಬಂದಿದೆ.

ಸೆಪ್ಟೆಂಬರ್‌- ಬಂದಿಲ್ಲ.

ಅಕ್ಟೋಬರ್‌- ಬಂದಿದೆ.

ನವೆಂಬರ್‌- ಬಂದಿಲ್ಲ.

ಡಿಸೆಂಬರ್‌- ಬಂದಿದೆ.