ಕೆಲ ಗೃಹ ಲಕ್ಷ್ಮಿ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಸೀಡಿಂಗ್ ಮತ್ತು ಇ-ಕೆ.ವೈ.ಸಿ ಮಾಡಿಸದಿರುವ ಕಾರಣ ಹಣ ಬಂದಿಲ್ಲ. ಆಧಾರ್ ಸೀಡಿಂಗ್ ಮತ್ತು ಇ-ಕೆ.ವೈ.ಸಿ ಮಾಡಿಸುವಂತೆ ಜಾಗೃತಿ ಮೂಡಿಸಬೇಕು. ಫೆಬ್ರವರಿ 2025 ರ ಮಾಹೆಯಿಂದ ನಗದು ಬದಲು ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆ ಮಾಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಲ್ಲಾ ಪಂಚಾಯ್ತಿ ಮಿನಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಮಿತಿ ಸಭೆ ನಡೆಯಿತು.ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿಕ್ಕಲಿಂಗಯ್ಯ ಮಾತನಾಡಿ, ಗೃಹಲಕ್ಷ್ಮಿ ಹಣ ಆಗಸ್ಟ್ ವರೆಗೆ ಪಾವತಿಸಲಾಗಿದೆ. ಆಗಸ್ಟ್ ಮಾಹೆಯಲ್ಲಿ ಜಿಲ್ಲೆಯ 4,61,599 ಮಹಿಳೆಯರಿಗೆ 92.98 ಕೋಟಿ ರು. ನೀಡಲಾಗಿದೆ ಎಂದರು.
ಸೆಪ್ಟೆಂಬರ್ ಮಾಹೆಯಿಂದ ಬರಬೇಕಾದ ಹಣವನ್ನು ಶೀಘ್ರವೇ ಡಿಬಿಟಿ ಮೂಲಕ ನೀಡಲಾಗುವುದು. ಅದರಲ್ಲಿ ಯಾವುದೇ ಗೊಂದಲ ಬೇಡ. ಐಟಿಜಿಎಸ್ ಟಿ ಪಾವತಿದಾರರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ. ಗೃಹ ಲಕ್ಷ್ಮಿ ಹಣ ಶೀಘ್ರವಾಗಿ ಬಿಡುಗಡೆ ಮಾಡುವಂತೆ ಸಂಬಂಧ ಪಟ್ಟ ಅಧಿಕಾರಿಗಳು ಮನವಿ ಸಲ್ಲಿಸಿ ಎಂದರು.ಕೆಲ ಗೃಹ ಲಕ್ಷ್ಮಿ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಸೀಡಿಂಗ್ ಮತ್ತು ಇ-ಕೆ.ವೈ.ಸಿ ಮಾಡಿಸದಿರುವ ಕಾರಣ ಹಣ ಬಂದಿಲ್ಲ. ಆಧಾರ್ ಸೀಡಿಂಗ್ ಮತ್ತು ಇ-ಕೆ.ವೈ.ಸಿ ಮಾಡಿಸುವಂತೆ ಜಾಗೃತಿ ಮೂಡಿಸಬೇಕು. ಫೆಬ್ರವರಿ 2025 ರ ಮಾಹೆಯಿಂದ ನಗದು ಬದಲು ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆ ಮಾಡಲಾಗುತ್ತಿದೆ ಎಂದರು.
ಸಮಿತಿ ಉಪಾಧ್ಯಕ್ಷ ಕೆ.ಸಿ.ಪ್ರಶಾಂತ್ ಬಾಬು ಮಾತನಾಡಿ, ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ಜೂನ್ 2023 ರಿಂದ ನವೆಂಬರ್ 2025 ರ ವರೆಗೂ 492.93 ಕೋಟಿ ವೆಚ್ಚವಾಗಿದೆ. ಗೃಹ ಜ್ಯೋತಿ ಯೋಜನೆಯಡಿ 491.19 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.ಯುವ ನಿಧಿ ಫಲಾನುಭವಿಗಳಿಗೆ ಕೆ.ಎಸ್.ಆರ್.ಟಿ.ಸಿ ಹಾಗೂ ಚೆಸ್ಕಾಂ ನಲ್ಲಿ ತಾಂತ್ರಿಕ ಕೆಲಸಗಳಿಗೆ ಬೇಕಾಗುವ ಅಭ್ಯರ್ಥಿಗಳನ್ನು ತಾಂತ್ರಿಕ ಶಿಕ್ಷಣ ಪಡೆದ ಯುವ ನಿಧಿ ಫಲಾನುಭವಿಗಳನ್ನು ಬಳಸಿಕೊಳ್ಳಿ ಎಂದರು.
ಪ್ರಾಧಿಕಾರದ ಉಪಾಧ್ಯಕ್ಷ ರಾಜೇಂದ್ರ ಎಸ್.ಹೆಚ್ ಮಾತನಾಡಿ, ಯುವ ನಿಧಿ ಯೋಜನೆಗೆ ಜಿಲ್ಲೆಯಲ್ಲಿ 8296 ಫಲಾನುಭವಿಗಳು ನೊಂದಣಿಯಾಗಿದ್ದಾರೆ. 19.29 ಕೋಟಿ ಅನುದಾನವನ್ನು ಜಿಲ್ಲೆಗೆ ಬಿಡುಗಡೆ ಮಾಡಲಾಗಿದೆ ಎಂದರು.ಸಭೆಯಲ್ಲಿ ಜಿಪಂ ಯೋಜನಾಧಿಕಾರಿ ಧನುಷ್, ಪ್ರಾಧಿಕಾರದ ಸದಸ್ಯರಾದದ ಅಜಯ್ ಕುಮಾರ್ ಬಿ.ಪಿ, ಎ.ಬಿ.ಕುಮಾರ್, ಶಂಕರೇಗೌಡ, ಬಸವರಾಜು, ಮಹಮದ್ ಅನ್ಸರ್ , ರಮೇಶ್ ಬಿ.ಎಂ. ಪಿ.ಮಾದೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.