ಬಾಲ್ಯವಿವಾಹ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 18 ವರ್ಷ ತುಂಬದ ಹೆಣ್ಣು ಮಕ್ಕಳಿಗೆ ಮತ್ತು 21 ವರ್ಷ ಪೂರ್ಣಗೊಳ್ಳದ ಗಂಡು ಮಕ್ಕಳಿಗೆ ವಿವಾಹ ಮಾಡುವುದು ಬಾಲ್ಯವಿವಾಹವಾಗಿದ್ದು, ಇದು ಕಾನೂನುಬಾಹಿರ ಎಂದು ತಿಳಿಸಿದರು. ಇಂತಹ ವಿವಾಹಗಳು ಸಾಮಾನ್ಯವಾಗಿ ಬೆಳಿಗ್ಗೆ 6ರಿಂದ 9 ಗಂಟೆಯೊಳಗೆ, ಹೆಚ್ಚಿನ ಪ್ರಚಾರವಿಲ್ಲದೆ ನಡೆಯುತ್ತವೆ. ಗ್ರಾಮಗಳಲ್ಲಿ ಈ ವಿಷಯ ಗೊತ್ತಿಲ್ಲದೆ ನಡೆಯುವುದಿಲ್ಲ; ನಮಗೆ ಏಕೆ? ಎಂಬ ನಿರ್ಲಕ್ಷ್ಯ ಧೋರಣೆಯನ್ನು ತ್ಯಜಿಸಿ, ವಿಶೇಷವಾಗಿ ಹೆಣ್ಣು ಮಕ್ಕಳ ಕುರಿತು ನಿಗಾ ವಹಿಸಿ ರಕ್ಷಣೆ ನೀಡುವ ಹೊಣೆಗಾರಿಕೆಯನ್ನು ಸಮಾಜ ವಹಿಸಬೇಕು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಅಪ್ರಾಪ್ತ ಮಕ್ಕಳಿಗೆ ವಿವಾಹ ಮಾಡಿಸುವುದು, ಅದನ್ನು ಪ್ರೋತ್ಸಾಹಿಸುವುದು ಅಥವಾ ಅದಕ್ಕೆ ಅವಕಾಶ ಕಲ್ಪಿಸುವವರಷ್ಟೇ ಅಲ್ಲದೆ, ಇಂತಹ ವಿವಾಹಗಳಿಗೆ ಸಹಕಾರ ನೀಡುವ ದೇವಾಲಯಗಳಿಗೆ ಸಂಬಂಧಿಸಿದವರೂ ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ತಹಸೀಲ್ದಾರ್‌ ಸಂತೋಷ್ ಕುಮಾರ್‌ ಎಚ್ಚರಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒಗಳಿಗೆ ಬಾಲ್ಯವಿವಾಹ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 18 ವರ್ಷ ತುಂಬದ ಹೆಣ್ಣು ಮಕ್ಕಳಿಗೆ ಮತ್ತು 21 ವರ್ಷ ಪೂರ್ಣಗೊಳ್ಳದ ಗಂಡು ಮಕ್ಕಳಿಗೆ ವಿವಾಹ ಮಾಡುವುದು ಬಾಲ್ಯವಿವಾಹವಾಗಿದ್ದು, ಇದು ಕಾನೂನುಬಾಹಿರ ಎಂದು ತಿಳಿಸಿದರು. ಇಂತಹ ವಿವಾಹಗಳು ಸಾಮಾನ್ಯವಾಗಿ ಬೆಳಿಗ್ಗೆ 6ರಿಂದ 9 ಗಂಟೆಯೊಳಗೆ, ಹೆಚ್ಚಿನ ಪ್ರಚಾರವಿಲ್ಲದೆ ನಡೆಯುತ್ತವೆ. ಗ್ರಾಮಗಳಲ್ಲಿ ಈ ವಿಷಯ ಗೊತ್ತಿಲ್ಲದೆ ನಡೆಯುವುದಿಲ್ಲ; ನಮಗೆ ಏಕೆ? ಎಂಬ ನಿರ್ಲಕ್ಷ್ಯ ಧೋರಣೆಯನ್ನು ತ್ಯಜಿಸಿ, ವಿಶೇಷವಾಗಿ ಹೆಣ್ಣು ಮಕ್ಕಳ ಕುರಿತು ನಿಗಾ ವಹಿಸಿ ರಕ್ಷಣೆ ನೀಡುವ ಹೊಣೆಗಾರಿಕೆಯನ್ನು ಸಮಾಜ ವಹಿಸಬೇಕು ಎಂದು ಹೇಳಿದರು.“ನಾವು ವಿವಾಹ ಮಾಡುತ್ತಿಲ್ಲ, ಕೇವಲ ನಿಶ್ಚಯ ಮಾತ್ರ” ಎಂಬ ಸಾಬೂಬು ಹೇಳಲಾಗುತ್ತದೆ. ಆದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಾಲಾ ಶಿಕ್ಷಕರು ಇಂತಹ ಪ್ರಕರಣಗಳು ನಡೆಯದಂತೆ ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ವಹಿಸಬೇಕು ಎಂದು ಸೂಚಿಸಿದರು. ಮುಂಬರುವ ಗಣರಾಜ್ಯೋತ್ಸವದಂದು ತಮ್ಮ ವ್ಯಾಪ್ತಿಯಲ್ಲಿ ಬಾಲ್ಯ ವಿವಾಹ ನಡೆಯದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರನ್ನು ಸನ್ಮಾನಿಸಲಾಗುವುದು ಎಂದು ಘೋಷಿಸಿದರು.ಹಾಸನದ ಮಹಿಳಾ ನ್ಯಾಯವಾದಿ ಬಿಂದುಶ್ರೀ ಮಾತನಾಡಿ, ತಾಲೂಕಿನಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ಪೋಷಕರು ಗುಟ್ಟಾಗಿ ಬಾಲ್ಯವಿವಾಹ ನಡೆಸಿದರೂ, ಹುಡುಗಿ ಗರ್ಭಿಣಿಯಾದ ನಂತರ ಪ್ರಕರಣ ಹೊರಬರುವುದಾಗಿ ತಿಳಿಸಿದರು. ಬಾಲ್ಯವಿವಾಹ ನಿಷೇಧ ಕಾಯ್ದೆ ಅತ್ಯಂತ ಕಠಿಣವಾಗಿದ್ದು, ತಪ್ಪಿತಸ್ಥರಿಗೆ ಕಡ್ಡಾಯ ಶಿಕ್ಷೆ ವಿಧಿಸಲಾಗುತ್ತದೆ. ಬಾಲ್ಯವಿವಾಹ ನಡೆಯುವ ಮುನ್ನ ಅಥವಾ ನಡೆದಿರುವ ಮಾಹಿತಿ ದೊರೆತರೆ ತಕ್ಷಣವೇ 112ಕ್ಕೆ ಕರೆ ಮಾಡಿ ತಿಳಿಸಬೇಕು; ಮಾಹಿತಿ ನೀಡಿದವರ ವಿವರಗಳನ್ನು ಸಂಪೂರ್ಣವಾಗಿ ರಹಸ್ಯವಾಗಿಡಲಾಗುತ್ತದೆ ಎಂದರು. ಅಪ್ರಾಪ್ತ ವಯಸ್ಸಿನಲ್ಲಿ ವಿವಾಹ ಮಕ್ಕಳ ಭವಿಷ್ಯವನ್ನೇ ಹಾಳುಮಾಡಿ, ಅವರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ಪೋಷಕರು ಅರಿಯಬೇಕು ಎಂದು ಮನವಿ ಮಾಡಿದರು.ಬಾಲ್ಯ ವಿವಾಹ ನಡೆದ ನಂತರ ಶಿಕ್ಷೆ ನೀಡುವುದಕ್ಕಿಂತ, ಅದನ್ನು ಮುಂಚಿತವಾಗಿಯೇ ತಡೆಗಟ್ಟುವುದೇ ಸಾರ್ಥಕ ಎಂದು ಹೇಳಿದ ಅವರು, ತಾಲೂಕಿನಲ್ಲಿ ಬಾಲ್ಯವಿವಾಹ ನಿರ್ಮೂಲನೆಗೆ ಎಲ್ಲರೂ ಒಗ್ಗಟ್ಟಾಗಿ ಪಣ ತೊಡಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಭಾರ ಅಧಿಕಾರಿ ಯೋಗೇಶ್ ಹೆಚ್ಚಿನ ಮಾಹಿತಿಯನ್ನು ನೀಡಿದರು. ಜಿಲ್ಲಾ ಸಂಯೋಜಕರಾದ ಶ್ರೀಪ್ರಿಯ ರೂಪವತಿ ಉಪಸ್ಥಿತರಿದ್ದರು.