ಕೆ.ಎನ್‌.ರಾಜಣ್ಣ ಅವರು ಮುಖ್ಯಮಂತ್ರಿಗಳಿಗೆ ಮಾತ್ರವಲ್ಲ ನನಗೂ ಆಪ್ತರು. ಒಂದು ರೀತಿಯಲ್ಲಿ ಮುಖ್ಯಮಂತ್ರಿಗಳಿಗೂ ರಾಜಣ್ಣ ಅವರಿಗೂ ಸಂಬಂಧವೇ ಇಲ್ಲ. ಎಸ್​.ಎಂ.ಕೃಷ್ಣ ಅವರ ಅವಧಿಯಲ್ಲಿ ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಂಕ್‌ ಅಧ್ಯಕ್ಷನನ್ನಾಗಿ ಮಾಡಿದ್ದು ನಾನು ಎಂದು  ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

 ಬೆಂಗಳೂರು : ‘ಮಾಜಿ ಸಚಿವ ಕೆ.ಎನ್‌.ರಾಜಣ್ಣ ಅವರು ಮುಖ್ಯಮಂತ್ರಿಗಳಿಗೆ ಮಾತ್ರವಲ್ಲ ನನಗೂ ಆಪ್ತರು. ಒಂದು ರೀತಿಯಲ್ಲಿ ಮುಖ್ಯಮಂತ್ರಿಗಳಿಗೂ ರಾಜಣ್ಣ ಅವರಿಗೂ ಸಂಬಂಧವೇ ಇಲ್ಲ. ಎಸ್​.ಎಂ.ಕೃಷ್ಣ ಅವರ ಅವಧಿಯಲ್ಲಿ ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಂಕ್‌ ಅಧ್ಯಕ್ಷನನ್ನಾಗಿ ಮಾಡಿದ್ದು ನಾನು. ಬೇಕಿದ್ದರೆ ಅವರನ್ನೇ ಕೇಳಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ರಾಜಕೀಯವಾಗಿ ಹೇಳಿಕೆ ಕೊಟ್ಟಿರುತ್ತಾರೆ

ಭಾನುವಾರ ಸುದ್ದಿಗಾರರ ಜತೆಗೆ ರಾಜಣ್ಣ ಅವರೊಂದಿಗಿನ ಶನಿವಾರದ ಭೇಟಿ ಕುರಿತ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್‌, ಕೆಲ ಸಂದರ್ಭಗಳಲ್ಲಿ ರಾಜಕೀಯವಾಗಿ ಹೇಳಿಕೆ ಕೊಟ್ಟಿರುತ್ತಾರೆ. ಇದಕ್ಕೆ ಬೇಸರ ಮಾಡಿಕೊಳ್ಳಲು ಆಗುತ್ತದೆಯೇ? ಅಣ್ಣ- ತಮ್ಮಂದಿರೇ ಜಗಳ ಮಾಡುತ್ತಾರಂತೆ, ಇನ್ನು ನಮ್ಮದು ಯಾವ ಜಗಳ? ಆದರೆ, ನಾನು ಯಾವತ್ತೂ ಯಾರ ವಿರುದ್ಧವೂ ಹೇಳಿಕೆ ನೀಡಿಲ್ಲ ಎಂದು ತಿಳಿಸಿದರು.

ನಾವು ಸೌಹಾರ್ದ ಭೇಟಿ ಮಾಡುತ್ತೇವೆ

ನಾವು ಸೌಹಾರ್ದ ಭೇಟಿ ಮಾಡುತ್ತೇವೆ. ಶನಿವಾರ ಸರಿಯಾಗಿ ಮಾತನಾಡಲು ಆಗಲಿಲ್ಲ. ಅದಕ್ಕೆ ಮತ್ತೆ ಭೇಟಿ ಮಾಡುತ್ತೇನೆ ಎಂದು ಹೇಳಿದ್ದೇನೆ. ರಾಜ್ಯಪಾಲರ ಕಾರ್ಯಕ್ರಮ ಇರುವ ಕಾರಣಕ್ಕೆ ನಂತರ ಭೇಟಿ ಮಾಡುತ್ತೇನೆ ಎಂದು ಹೇಳಿದರು.

ಇದೇ ವೇಳೆ ‘ಕಳೆದ 16 ವರ್ಷದಲ್ಲಿ ಮುಖ್ಯಮಂತ್ರಿ ಹಾಗೂ ನನ್ನ ನಡುವೆ ಒಂದೇ ಒಂದಾದರೂ ಭಿನ್ನಾಭಿಪ್ರಾಯ ಇದೆಯೇ? ಮಾಧ್ಯಮಗಳು ಹಾಗೂ ವಿರೋಧಪಕ್ಷಗಳು ತಮ್ಮ ಆಹಾರಕ್ಕಾಗಿ ಇಲ್ಲದ್ದನ್ನು ಸೃಷ್ಟಿ ಮಾಡುತ್ತಿವೆ’ ಎಂದು ಹರಿಹಾಯ್ದರು.

ನನಗೆ ಕಾಂಗ್ರೆಸ್‌ನ ಯಾರ ಜತೆಯೂ ಭಿನ್ನಾಭಿಪ್ರಾಯಗಳಿಲ್ಲ. 16 ವರ್ಷಗಳಿಂದ ಅಂದರೆ ಸಿದ್ದರಾಮಯ್ಯ ಅವರು ನಮ್ಮ ಪಕ್ಷಕ್ಕೆ ಬಂದ ದಿನದಿಂದ ನನಗೂ ಅವರಿಗೂ ಬಿನ್ನಾಭಿಪ್ರಾಯಗಳು ಏನಾದರೂ ಇವೆಯೇ? ಭಿನ್ನಾಭಿಪ್ರಾಯಗಳನ್ನು ಮಾಧ್ಯಮಗಳು, ವಿರೋಧ ಪಕ್ಷಗಳು ಸೃಷ್ಟಿಸುತ್ತಿವೆ. ತಮಗೆ ಬೇಕಾದ ಆಹಾರ ಸೃಷ್ಟಿಸುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಪಕ್ಷದಲ್ಲಿ ಯಾವ ಗೊಂದಲವೂ ಇಲ್ಲ:

ಡಾ.ಜಿ. ಪರಮೇಶ್ವರ್, ವಿ.ಆರ್‌.ಸುದರ್ಶನ್‌ ಗೊಂದಲ ಬಗೆಹರಿಸುವಂತೆ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ನನ್ನ ಪ್ರಕಾರ ಯಾವ ಗೊಂದಲವೂ ಇಲ್ಲ. ಬಿಜೆಪಿಯಲ್ಲಿ ಸಾಕಷ್ಟು ತೊಂದರೆಗಳಿವೆ. ಅದಕ್ಕೆ ಅವರು ಸೃಷ್ಟಿ ಮಾಡುತ್ತಿದ್ದಾರೆ. ಇನ್ನು ಪರಮೇಶ್ವರ್‌ ಅವರ ಹೇಳಿಕೆ ಕುರಿತು ಮಾತನಾಡಲು ನಾನು ಅವರ ವಕ್ತಾರನಲ್ಲ ಎಂದು ಹೇಳಿದರು.

ಜನರ ಆಶೀರ್ವಾದವೇ ಆತ್ಮವಿಶ್ವಾಸ:

ಹೈಕಮಾಂಡ್‌ನಿಂದ ಕರೆ ಬರುವ ಮೊದಲೇ ಆತ್ಮವಿಶ್ವಾಸದಿಂದ ಕಾಣುತ್ತಿದ್ದೀರಿ ಎಂಬ ಪ್ರಶ್ನೆಗೆ, ‘ನೀವೇ (ಮಾಧ್ಯಮಗಳ) ನನಗೆ ಆತ್ಮವಿಶ್ವಾಸ. ಜನರ ಆಶೀರ್ವಾದವೇ ನನಗೆ ಆತ್ಮವಿಶ್ವಾಸ. ನೀವು ಅನವಶ್ಯಕ ಪ್ರಚಾರ ನೀಡುತ್ತಿದ್ದೀರಿ. ಈಗ ತಾನೇ ಹೈಕಮಾಂಡ್ ನಾಯಕರ ಜತೆ ಮಾತನಾಡಿದೆ. ಪರಿಷತ್ ಚುನಾವಣೆ ವಿಚಾರವಾಗಿ ನಾಲ್ಕು ಜನಕ್ಕೆ ಬಿ ಫಾರಂ ನೀಡುವ ವಿಚಾರ ಚರ್ಚೆ ನಡೆಸಿದೆ. ಹೆಸರನ್ನು ಘೋಷಿಸಿ ಎಂದು ಚರ್ಚೆ ನಡೆಸಿದೆ ಎಂದು ಶಿವಕುಮಾರ್‌ ಮಾಹಿತಿ ನೀಡಿದರು.

ದ್ವೇಷ ಭಾಷಣ ನಿರ್ಬಂಧ ಇಂದಿನ ಅಗತ್ಯ: ಡಿಕೆಶಿ

ದ್ವೇಷ ಭಾಷಣ ತಡೆ ಮಸೂದೆಗೆ ತೆಲಂಗಾಣವೂ ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಶಿವಕುಮಾರ್‌ ಅವರು, ಇದು ಇಂದಿನ ಅಗತ್ಯ. ಏಕೆಂದರೆ ದ್ವೇಷ ಭಾಷಣ ಮೂಲಕ ಜನಸಾಮಾನ್ಯರಲ್ಲಿ ಅನಗತ್ಯ ಗೊಂದಲ ಉಂಟು ಮಾಡಲಾಗುತ್ತಿದೆ. ಜನರಲ್ಲಿ ಭಯ ಹಾಗೂ ಅವರ ನಡುವೆ ವಿಭಜನೆಗೆ ಕಾರಣವಾಗುತ್ತಿದೆ. ಸುಖಾಸುಮ್ಮನೆ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ. ಅದಕ್ಕೆ ಇದನ್ನು ತರಲಾಗಿದೆ. ನಮ್ಮದು ಶಾಂತಿಯುತ ರಾಜ್ಯ ಎಂದು ಹೇಳಿದರು.