ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟದ 87ನೇ ಪುಸ್ತಕ ಹಾಗೂ ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅವರು ರಚಿಸಿರುವ 7ನೇ ಕೊಡವ ಪುಸ್ತಕ ‘ಕೂಪದಿ’ಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಾಹಿತ್ಯ ಎನ್ನುವುದು ಓದುಗನ ಮನಸ್ಸಿನಾಳಕ್ಕೆ ಪ್ರಭಾವ ಬೀರಬಲ್ಲ ಕ್ಷೇತ್ರವಾಗಿದ್ದು, ಸಾಹಿತ್ಯ ರಚನೆ ಕಷ್ಟದ ಕೆಲಸವಾಗಿದೆ. ಸಾಹಿತಿಯ ಮನಸ್ಸಿನಿಂದ ಬರಹದ ರೂಪದಲ್ಲಿ ಹೊರ ಬರುವ ಅನುಭವ ಓದುಗನ ಮನಸ್ಸು ಸೇರುತ್ತದೆ. ಬರವಣಿಗೆಯನ್ನು ತಪಸ್ಸಿನಂತೆ ಕಾಣಬೇಕು ಮತ್ತು ಹಿಡಿತ ಸಾಧಿಸಬೇಕು. ಕಣ್ಣು, ಕಿವಿ ಮತ್ತು ಹೃದಯಕ್ಕೆ ಕೆಲಸ ಕೊಡಬೇಕು. ಸಾಹಿತಿಗಳು ಯಾವುದೇ ಸಭೆ, ಸಮಾರಂಭ ಮತ್ತಿತರ ಪ್ರದೇಶಗಳಿಗೆ ತೆರಳಿದರೂ ಬರವಣಿಗೆಯ ಮೂಲಕ ತಮ್ಮ ಅನುಭವವನ್ನು ಓದುಗರಿಗೆ ಹಂಚಿಕೊಳ್ಳುವ ಪ್ರಯತ್ನದಲ್ಲಿರುತ್ತಾರೆ. ಅನುಭವಕ್ಕೆ ಬರವಣಿಗೆಯ ರೂಪ ನೀಡಿ ಓದುಗರನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ. ಈ ಕಷ್ಟದ ಕಾಯಕ ಮಾಡುವ ಬರಹಗಾರರಿಗೆ ದಾನಿಗಳ ಸಹಕಾರದ ಅಗತ್ಯವಿದೆ ಎಂದರು.‘ಕೂಪದಿ’ ಪುಸ್ತಕದ ಕರ್ತೃ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಮಾತನಾಡಿ, ‘ಕೂಪದಿ’ ತನ್ನ ಕನಸಿನ 7ನೇ ಪುಸ್ತಕವಾಗಿದ್ದು, ಸಣ್ಣ ಕಥೆಗಳ ಸಂಗ್ರಹವಾಗಿದೆ. ಜೀವ, ಜೀವನ, ಕಣ್ಣಿಗೆ ಕಾಣುವ ಸಹಜತೆ ಇದರಲ್ಲಿದೆ. ಕರ್ಮ, ರೋಷ, ಚೋರೆ ಸಂಬಂಧ, ಮನಸಾಕ್ಷಿ, ಚದಿ, ನಳ, ಮಾಜಿ ಪೋಕತ ನಂಬಲ, ಹಣೆ ಬರಹ, ಮಿಸ್ಡ್ ಕಾಲ್ ಕಥೆಯ ಸಂಗ್ರಹ ಓದುವವರಿಗೆ ಖುಷಿ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೊಡವ ಮಕ್ಕಡ ಕೂಟದ ಸಲಹೆಗಾರ ಕುಲ್ಲೇಟಿರ ಅಜಿತ್ ನಾಣಯ್ಯ ಮಾತನಾಡಿ, ಕೊಡವ ಸಂಘಟನೆ ಮತ್ತು ಕೊಡವ ಸಮಾಜಗಳು ಮಾಡಬೇಕಾದ ಕಾರ್ಯಕ್ರಮಗಳನ್ನು ಕೊಡವ ಮಕ್ಕಡ ಕೂಟ ಮಾಡುತ್ತಿದೆ. ನಾಲ್ಕು ಸಾವಿರ ಪುಸ್ತಕಗಳನ್ನು ಮಕ್ಕಳಿಗೆ ಉಚಿತವಾಗಿ ನೀಡುವ ಮೂಲಕ ಕೊಡವ ಸಾಹಿತ್ಯ, ಸಂಸ್ಕೃತಿಯನ್ನು ಯುವ ಪೀಳಿಗೆಗೆ ಪರಿಚಯಿಸುವ ಮತ್ತು ಉಳಿಸುವ ಕಾರ್ಯ ಮಾಡಲಾಗುತ್ತಿದೆ. ಹೊಸ ಹೊಸ ಸಾಹಿತಿಗಳ ಪುಸ್ತಕಗಳನ್ನು ಬಿಡುಗಡೆಗೊಳಿಸುವ ಮೂಲಕ ಅವರನ್ನು ಪ್ರೇರಿಸಲಾಗುತ್ತಿದೆ ಎಂದು ತಿಳಿಸಿದರು.
ಯೋಧರ ಬಗ್ಗೆ ಮಾಹಿತಿ ಇರುವ ಪುಸ್ತಕಗಳನ್ನು ಹೊರತರುವ ಅಗತ್ಯ ಇದ್ದು, ಸಂಶೋಧನಾ ಕೃತಿಗಳನ್ನು ರಚಿಸಲು ಕೊಡಗಿನಲ್ಲಿ ಹಲವು ಅವಕಾಶಗಳಿದೆ. ಸಂಶೋಧಕರು ಮುಂದೆ ಬರಬೇಕು. ಯುವ ಪೀಳಿಗೆಗೆ ಹೊಸ ಸಂಶೋಧನ ಕೃತಿಗಳು ಬರಬೇಕು. ಸಾಹಿತ್ಯದ ಬಗ್ಗೆ ಯುವಕ, ಯುವತಿಯರಿಗೆ ಆಸಕ್ತಿ ಬರಬೇಕು. ಪುಸ್ತಕ ಓದುಲು ಯುವಕರನ್ನು ಪ್ರೇರಣೆಗೊಳಿಸಬೇಕು. ಈ ನಿಟ್ಟಿನಲ್ಲಿ ಕೊಡವ ಮಕ್ಕಡ ಕೂಟ ಕನ್ನಡ, ಇಂಗ್ಲಿಷ್ ಹಾಗೂ ಕೊಡವ ಭಾಷೆಯ ಪುಸ್ತಕಗಳಿಗೆ ಒತ್ತು ನೀಡುವ ಮೂಲಕ ಕೊಡಗು, ಕೊಡವ ಭಾಷೆಯನ್ನು ಲೋಕಕ್ಕೆ ತಿಳಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
--------------
ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಕೊಡಗು ಜಿಲ್ಲೆಯ ಹೆಸರಾಂತ ಸಾಹಿತಿಗಳಲ್ಲೊಬ್ಬರು. ಈಗಾಗಲೇ ಬರೆದಿರುವ ಕೊಡವ ಭಾಷೆಯ ‘ಪಾರು’ ಕಾದಂಬರಿ, ‘ಬದ್‌ಕ್‌ರ ನಡೆ’ ಲೇಖನ ಸಂಗ್ರಹ ಪುಸ್ತಕ, ‘ಪೂ ಬಳ್ಳಿ’ ಕವನ ಸಂಕಲನ ಪುಸ್ತಕ ಬಿಡುಗಡೆಗೊಂಡಿದ್ದು, ‘ಕೂಪದಿ’ ಇವರ ನಾಲ್ಕನೇ ಕೊಡವ ಪುಸ್ತಕವಾಗಿದೆ. ಕನ್ನಡದಲ್ಲಿ ‘ಕಾಡಿದ ನೆನಪುಗಳು’, ‘ಕಾಡು ಹಕ್ಕಿಯ ಹಾಡು’, ‘ಕನವರಿಕೆ’ ಕಥೆ ಕವನ ಸಂಕಲನ ಈಗಾಗಲೇ ಬಿಡುಗಡೆಗೊಂಡಿದೆ.