ಬಳ್ಳಾರಿಯಲ್ಲಿ 88ನೇ ಸಾಹಿತ್ಯ ಸಮ್ಮೇಳನಕ್ಕೆ ಅವಕಾಶ; ಸಂಭ್ರಮಾಚರಣೆ

KannadaprabhaNewsNetwork | Published : Dec 26, 2024 1:02 AM

ಸಾರಾಂಶ

ಬಳ್ಳಾರಿಯಲ್ಲಿ 88ನೇ ಸಮ್ಮೇಳನ ನಡೆಸಲು ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ಆಯ್ಕೆ ಮಾಡಿರುವುದು ಸಂತಸ ತಂದಿದೆ.

ಬಳ್ಳಾರಿ: 88ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸಲು ಬಳ್ಳಾರಿಗೆ ಅವಕಾಶ ಸಿಕ್ಕ ಹಿನ್ನೆಲೆಯಲ್ಲಿ ನಗರದ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಇಲ್ಲಿನ ಗಡಗಿಚನ್ನಪ್ಪ ವೃತ್ತದಲ್ಲಿ ಸಂಭ್ರಮಾಚರಣೆ ನಡೆಸಿದರು.

ಕಳೆದ 66 ವರ್ಷಗಳ ಹಿಂದೆ ಬಳ್ಳಾರಿಯಲ್ಲಿ ಸಾಹಿತ್ಯ ಸಮ್ಮೇಳನದ ಅವಕಾಶ ಸಿಕ್ಕಿತ್ತು. ಕಳೆದ 20 ವರ್ಷಗಳಿಂದ ಸಮ್ಮೇಳನ ಪಡೆಯಲು ಸತತ ಪ್ರಯತ್ನಿಸಲಾಗುತ್ತಿದ್ದಾರೂ ನಾನಾ ಕಾರಣಗಳಿಂದ ಬಳ್ಳಾರಿಗೆ ನೀಡಿರಲಿಲ್ಲ. ಮಂಡ್ಯದಲ್ಲಿ ಈಚೆಗೆ ಜರುಗಿದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಳ್ಳಾರಿಯಲ್ಲಿ 88ನೇ ಸಮ್ಮೇಳನ ನಡೆಸಲು ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ತಿಳಿಸಿದರು.

ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, 88ನೇ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿಗೆ ಸಿಕ್ಕಿರುವುದು ಅಖಂಡ ಬಳ್ಳಾರಿ ಜಿಲ್ಲೆಯ ಜನರಿಗೆ ಸಂತಸವಾಗಿದೆ. ಅಖಂಡ ಜಿಲ್ಲೆಯ ಎಲ್ಲರೂ ಸೇರಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು. ಈ ಮೂಲಕ ಬಳ್ಳಾರಿ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ಬಳ್ಳಾರಿ ಜಿಲ್ಲಾ ಕೇಂದ್ರದಲ್ಲಿಯೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಇದರಿಂದ ಆಂಧ್ರಪ್ರದೇಶದ ಗಡಿ ಭಾಗದಲ್ಲಿರುವ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶವಾಗಲಿದೆ. ಇದರಿಂದ ಗಡಿಭಾಗದಲ್ಲಿ ಕನ್ನಡವನ್ನು ಜತನದಿಂದ ಕಾಪಾಡಿಕೊಳ್ಳಲು ಆಸ್ಪದವಾಗಲಿದೆ. ಬಳ್ಳಾರಿ ಗಡಿ ಜಿಲ್ಲೆಯಾಗಿರುವುದರಿಂದ ಈ ಜಿಲ್ಲೆಗೆ ಮನ್ನಣೆ ನೀಡಿ ಸಮ್ಮೇಳನ ನೀಡಲಾಗಿದೆ. ಅಖಂಡ ಜಿಲ್ಲೆಗೆ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಸಮ್ಮೇಳನ ಮಾದರಿಯನ್ನಾಗಿಸಬೇಕು ಎಂದು ನಿಷ್ಠಿ ರುದ್ರಪ್ಪ ಕೋರಿದರು.

ಕನ್ನಡ ಸಂಘಟನೆಗಳ ಮುಖಂಡರಾದ ಪಿ.ಗಾದೆಪ್ಪ, ಉಪ್ಪಾರ್ ಹನುಮೇಶ್, ಕೊಳಗಲ್ ಅಂಜಿನಪ್ಪ, ಸಿದ್ದೇಶ್ ಉಪ್ಪಾರ್, ಶೇಖರ್ ಸೇರಿದಂತೆ ಅನೇಕರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಬಳ್ಳಾರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಅವಕಾಶ ಸಿಕ್ಕ ಹಿನ್ನೆಲೆಯಲ್ಲಿ ಗಡಗಿಚನ್ನಪ್ಪ ವೃತ್ತದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.

Share this article