ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರಿನ ರಾಜಾರಾಮ್ ಮೋಹನರಾವ್ ಚೆನ್ನು ಅವರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದು, ಪರಿಶೀಲನೆ ವೇಳೆ 3.59 ಕೋಟಿ ರು. ನಗದು, ಯುಎಸ್ ಡಾಲರ್, ಹಾಂಕಾಂಗ್ ಡಾಲರ್, ಸಿಂಗಾಪುರ್ ಡಾಲರ್, ಇಂಡೋನೇಷಿಯನ್ ರುಪಿಯಾ, ಮಲೇಷಿಯನ್ ರಿಂಗಿಟ್, ಯುರೋ, ಯುವಾನ್, ಸ್ವೀಡಿಷ್ ಕ್ರೋನಾ ಮತ್ತು 4 ಲಕ್ಷ ರು. ಮೌಲ್ಯದ ಯುಎಇ ದಿರ್ಹಾಮ್ ಸೇರಿ ವಿದೇಶಿ ಕರೆನ್ಸಿಗಳು, ಚಿನ್ನಾಭರಣಗಳು ಹಾಗೂ ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಸುಧೀರ್ ಗ್ರೂಪ್ ಆಫ್ ಕಂಪನೀಸ್ ಎಂಬ ಖಾಸಗಿ ಕಂಪನಿಯು ಉತ್ಪಾದಿಸಿದ ವಿದ್ಯುತ್ ಉಪಕರಣಗಳಿಗೆ ಸಂಬಂಧಿಸಿದಂತೆ ಅನುಕೂಲಕರ ಪರೀಕ್ಷಾ ವರದಿಗಳನ್ನು ನೀಡಲು ಚೆನ್ನು ಭ್ರಷ್ಟಾಚಾರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಮತ್ತು ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿ ನಿರ್ದೇಶಕ ಅತುಲ್ ಖನ್ನಾ ಅವರನ್ನೂ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿರುವ ಸಿಬಿಐ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ.