- ಶ್ರೀರಂಗಪಟ್ಟಣದ ೫, ಪಾಂಡವಪುರ ತಾಲೂಕಿನ ೪ ಸ್ಮಾರಕಗಳ ಗುರುತು
- ರಾಜ್ಯದ ೧೮೧ ಸ್ಮಾರಕಗಳ ಪಟ್ಟಿಗೆ ಸೇರಿಸಲು ಪುರಾತತ್ವ ಇಲಾಖೆ ಸಿದ್ಧತೆಮಂಡ್ಯ ಮಂಜುನಾಥಕನ್ನಡಪ್ರಭ ವಾರ್ತೆ ಮಂಡ್ಯ
ಸಂರಕ್ಷಣೆಯಿಂದ ದೂರ ಉಳಿದಿರುವ ಪ್ರಾಚೀನ ಸ್ಮಾರಕಗಳನ್ನು ಸಂರಕ್ಷಿಸುವ ಕಾರ್ಯಕ್ಕೆ ಪುರಾತತ್ವ ಇಲಾಖೆ ಮುಂದಾಗಿದೆ. ಅದರಂತೆ ಸೂಕ್ತ ರಕ್ಷಣೆಯಿಲ್ಲದೆ ಅವಸಾನದ ಅಂಚಿಗೆ ಸರಿದಿದ್ದ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಐದು ಹಾಗೂ ಪಾಂಡವಪುರ ತಾಲೂಕಿನ ನಾಲ್ಕು ಸ್ಮಾರಕಗಳನ್ನು ಗುರುತಿಸಿ ರಾಜ್ಯದ ೧೮೧ ಸ್ಮಾರಕಗಳ ಪಟ್ಟಿಗೆ ಸೇರಿಸಲು ಸಿದ್ಧತೆ ನಡೆದಿದೆ.ಶ್ರೀರಂಗಪಟ್ಟಣ ತಾಲೂಕಿನ ಮಂಡ್ಯ ಕೊಪ್ಪಲು ಗ್ರಾಮದಲ್ಲಿರುವ ಶ್ರೀಯೋಗಾನರಸಿಂಹಸ್ವಾಮಿ ದೇವಾಲಯ, ಹುರುಳಿ ಕ್ಯಾತನಹಳ್ಳಿಯ ಶ್ರೀಶಂಭುಲಿಂಗೇಶ್ವರ ದೇವಾಲಯ, ಬೆಳಗೊಳ ಶ್ರೀಜನಾರ್ಧನಲಿಂಗೇಶ್ವರ ದೇವಾಲಯ, ಕಡತನಾಳು ವಿದ್ಯಾನಗರದ ಗಣಗಂಭ, ಅರಕೆರೆ ಗ್ರಾಮದ ಶ್ರೀಚನ್ನಕೇಶವ ಮತ್ತು ಶ್ರೀನರಸಿಂಹಸ್ವಾಮಿ ದೇವಾಲಯ ಮತ್ತು ಪಾಂಡವಪುರ ತಾಲೂಕಿನ ಕಾಮನಾಯಕನಹಳ್ಳಿ ಶ್ರೀಶಿವನ ದೇವಾಲಯ, ಛಾಗಶೆಟ್ಟಿಹಳ್ಳಿಯ ಶ್ರೀಶಂಭುಲಿಂಗೇಶ್ವರ ದೇವಾಲಯ, ಬೆಳ್ಳಾಳೆ ಗ್ರಾಮದ ಶ್ರೀಗರುಡಾಂಜನೇಯ ದೇವಾಲಯ, ಹೊಸಕೋಟೆ ಶ್ರೀನಿಷ್ಕಾಮೇಶ್ವರ ದೇವಾಲಯ ಸೇರಿದಂತೆ ಒಟ್ಟು ಮಂಡ್ಯ ಜಿಲ್ಲೆಯ ಒಂಭತ್ತು ದೇವಾಲಯಗಳು ೧೮೧ ಸ್ಮಾರಕಗಳ ಸಂರಕ್ಷಿತ ಪಟ್ಟಿಗೆ ಸೇರಲಿರುವುದು ವಿಶೇಷವಾಗಿದೆ.
ನಾಡಿನ ಸಾಂಸ್ಕೃತಿಕ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತಹ ಈ ಸ್ಮಾರಕಗಳನ್ನು ಸಂರಕ್ಷಿತ ಸ್ಮಾರಕಗಳು ಎಂದು ಘೋಷಿಸುವಂತೆ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸರ್ಕಾರಕ್ಕೆ ಶಿಫಾರಸು ಮಾಡಲು ಮುಂದಾಗಿದೆ. ಅದಕ್ಕಾಗಿ ದೇವಾಲಯಗಳು, ಸ್ಮಾರಕಗಳ ಬಗ್ಗೆ ಪೂರ್ಣ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ಅಂತಿಮ ಹಂತದಲ್ಲಿದೆ.ಏನೇನು ಮಾಹಿತಿ?
ಪ್ರಾಚೀನ ಸ್ಮಾರಕ ಅಥವಾ ದೇವಾಲಯವಿರುವ ಕಂದಾಯ ನಿವೇಶನ, ಕಟ್ಟಡದ ವಿಸ್ತೀರ್ಣ, ಕಟ್ಟಡದ ಒಡೆತನ ಯಾರ ವಶದಲ್ಲಿದೆ. ಸ್ಮಾರಕ ಅಥವಾ ದೇವಾಲಯ ಖಾಸಗಿ ಒಡೆತನಕ್ಕೆ ಸೇರಿದೆಯೋ ಅಥವಾ ಮುಜರಾಯಿ ಸಂಸ್ಥೆಗೆ ಒಳಪಟ್ಟಿದೆಯೋ ಎನ್ನುವುದು ಸೇರಿದಂತೆ ಹಲವಾರು ಮಾಹಿತಿಗಳನ್ನು ಪುರಾತತ್ವ ಇಲಾಖೆ ಸಮಗ್ರವಾಗಿ ಕ್ರೋಢೀಕರಿಸುತ್ತಿದೆ.ಸಂರಕ್ಷಿತ ಸ್ಮಾರಕಗಳ ಪಟ್ಟಿಗೆ ಸೇರಿಸಲು ಗುರುತಿಸಿರುವ ಸ್ಮಾರಕಗಳು, ದೇವಾಲಯಗಳು ಮುಜರಾಯಿ, ಜಿಲ್ಲಾಡಳಿತ ಹಾಗೂ ಇತರೆ ಇಲಾಖೆಗಳ ಆಡಳಿತ ವ್ಯಾಪ್ತಿಯಲ್ಲಿ ಬಂದಲ್ಲಿ ಅದರ ಬಗ್ಗೆಯೂ ವಿವರಗಳನ್ನು ಸಹ ಪಟ್ಟಿ ಮಾಡಿಕೊಂಡಿದ್ದು, ಮತ್ತಷ್ಟು ಮಾಹಿತಿಗಳನ್ನು ಕಲೆಹಾಕುತ್ತಿದೆ.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಅನ್ವೇಷಣೆ, ಉತ್ಖನನ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ, ಶಾಸನಗಳ ಸಂರಕ್ಷಣೆ, ಶಿಲಾಶಿಲ್ಪಗಳು, ಪ್ರಾಚೀನ ನಾಣ್ಯಗಳ ಅಧ್ಯಯನ, ಸಂಶೋಧನಾ ಗ್ರಂಥಗಳ ಪ್ರಕಟಣೆ, ವಸ್ತು ಸಂಗ್ರಹಾಲಯಗಳ ನಿರ್ವಹಣೆ ಹಾಗೂ ಅಭಿವೃದ್ಧಿ ಮತ್ತು ಪರಂಪರೆ ಕಾರ್ಯಚಟುವಟಿಕೆಗಳನ್ನು ರೂಪಿಸಿ, ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ.ಯಾವುದು ಸಂರಕ್ಷಿತ ಸ್ಮಾರಕಗಳು:
ಗ್ರಾಮವಾರು ಸರ್ವೇ ಮೂಲಕ ಗುರುತಿಸಲಾದ ಸ್ಮಾರಕಗಳನ್ನು ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ ಅಧಿನಿಯಮ, ೧೯೬೧ ಹಾಗೂ ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತ್ವ ಸ್ಥಳಗಳ ಮತ್ತು ಅವಶೇಷಗಳ ನಿಯಮಗಳು, ೧೯೬೫ರ ರೀತ್ಯಾ ಪುರಾತತ್ವ ಅಥವಾ ಕಲಾತ್ಮಕ ಅಸ್ಥೆಯುಳ್ಳಂಥ ಮತ್ತು ನೂರು ವರ್ಷಗಳಿಗಿಂತಲೂ ಕಡಿಮೆಯಿಲ್ಲದೆ ಅಸ್ತಿತ್ವದಲ್ಲಿರುವಂಥ ಯಾವುದೇ ರಚನೆ, ನಿರ್ಮಿತಿ, ಸ್ಮಾರಕ ಅಥವಾ ಸಮಾಧಿ ದಿಬ್ಬ, ಹೂಳುವ ಸ್ಥಳ, ಗುಹೆ, ಶಿಲಾಶಿಲ್ಪ, ಶಾಸನ ಮತ್ತು ಏಕಶಿಲೆ ಇತ್ಯಾದಿಗಳನ್ನು ಸಂರಕ್ಷಿತ ಸ್ಮಾರಕಗಳೆಂದು ಘೋಷಿಸಬಹುದು.ಈ ನಿಟ್ಟಿನಲ್ಲಿ ಸಂಬಂಧಪಟ್ಟ ತಾಲ್ಲೂಕು ಕಂದಾಯ ಇಲಾಖೆ ಅಥವಾ ತಹಶೀಲ್ದಾರ್ ಅವರಿಗೆ ಇಲಾಖೆಯಿಂದ ಗುರುತಿಸಲಾಗಿರುವ ಸಂರಕ್ಷಣೆಯಿಂದ ದೂರ ಉಳಿದಿದ್ದ ಸ್ಮಾರಕಗಳನ್ನು ಸಂರಕ್ಷಿತ ಸ್ಮಾರಕಗಳೆಂದು ಘೋಷಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಶ್ರೀರಂಗಪಟ್ಟಣ ತಾಲೂಕಿನ ಐದು ಹಾಗೂ ಪಾಂಡವಪುರ ತಾಲೂಕಿನ ನಾಲ್ಕು ಅರಕ್ಷಿತ ಸ್ಮಾರಕಗಳ ರೆವಿನ್ಯೂ ಮಾಹಿತಿಯನ್ನು ಒದಗಿಸಲು ಪುರಾತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸೂಚನೆ ನೀಡಿದೆ. ಅದರಂತೆ ಎಲ್ಲ ಸರ್ವೇ ಕಾರ್ಯ ಮುಗಿದಿದ್ದು, ಇನ್ನಷ್ಟೇ ಸಂರಕ್ಷಿತ ಸ್ಮಾರಕಗಳ ಪಟ್ಟಿಗೆ ಸೇರಬೇಕಿದೆ.
ಕೋಟ್....ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಮತ್ತು ಪಾಂಡವಪುರ ವ್ಯಾಪ್ತಿಗೆ ಒಳಪಡುವ ಒಟ್ಟು ಎಂಟು ದೇವಾಲಯಗಳು, ಒಂದು ಸ್ಮಾರಕದ ಸರ್ವೇಕಾರ್ಯ ಮುಗಿದಿದೆ. ಅವುಗಳನ್ನು ‘ಸಂರಕ್ಷಿತ ಸ್ಮಾರಕಗಳು’ ಎಂದು ಘೋಷಿಸುವಂತೆ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ರೆವಿನ್ಯೂ ಸೇರಿದಂತೆ ಸೂಕ್ತ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ.
- ಎನ್.ಎಲ್.ಗೌಡ, ಪುರಾತತ್ವಶಾಸ್ತ್ರಜ್ಞರು, ಮೈಸೂರು