)
ಕನ್ನಡಪ್ರಭ ವಾರ್ತೆ ಬೆಂಗಳೂರು
ಮದ್ಯದಂಗಡಿಗಳ ಪರವಾನಗಿ ಹಾಗೂ ನವೀಕರಣ ನೀಡುವಾಗ ಅಬಕಾರಿ ಇಲಾಖೆ ಅಧಿಕಾರಿಗಳು ಸಿಂಡಿಕೇಟ್ ಮಾಡಿಕೊಂಡು ಲಂಚ ಸ್ವೀಕರಿಸುತ್ತಿದ್ದಾರೆಂಬ ಬಗ್ಗೆ ಇತ್ತೀಚೆಗೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ನಡೆಸಿದ್ದ ದಾಳಿ ವೇಳೆ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು, ಸೋಮವಾರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಅಬಕಾರಿ ಜಿಲ್ಲಾಧಿಕಾರಿಗಳ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ತೀವ್ರ ಶೋಧ ನಡೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್ ನೇತೃತ್ವದ ತಂಡ ಕೋರಮಂಗಲ, ಇಂದಿರಾನಗರ, ಯಶವಂತಪುರ ಸೇರಿ ನಗರದ ಎಂಟು ಅಬಕಾರಿ ಡಿ.ಸಿ ಕಚೇರಿಗಳು ಹಾಗೂ ಗ್ರಾಮಾಂತರ ಭಾಗದ ದೇವನಹಳ್ಳಿ ಒಂದು ಅಬಕಾರಿ ಡಿ.ಸಿ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅಬಕಾರಿ ಇಲಾಖೆ ಕೆಲಸಗಳಲ್ಲಿ ಪಾರದರ್ಶಕತೆ ಇಲ್ಲದಿರುವುದು, ಪರವಾನಗಿ ನವೀಕರಣಕ್ಕಾಗಿ ಸಲ್ಲಿಸಿದ ಅರ್ಜಿಗಳು ವಿಲೇವಾರಿಯಲ್ಲಿ ವಿಳಂಬ, ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಎಷ್ಟು ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು ಕಚೇರಿಯಲ್ಲಿ ಅನಗತ್ಯವಾಗಿ ಕಡತಗಳನ್ನು ಬಾಕಿ ಉಳಿಸಿಕೊಂಡಿರುವ ಪ್ರಕರಣಗಳ ಕುರಿತು ಪರಿಶೀಲಿಸಲಾಗಿದೆ. ಒಂದು ವೇಳೆ ಅಕ್ರಮ ಕಂಡು ಬಂದರೆ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ವಾರವಷ್ಟೇ ಇ.ಡಿ. ಅಧಿಕಾರಿಗಳು ಅಬಕಾರಿ ಹೆಚ್ಚುವರಿ ಆಯುಕ್ತ ವೈ.ಡಿ.ಮಂಜುನಾಥ್ ಸೇರಿ ಇತರೆ ವ್ಯಕ್ತಿಗಳ ಮೇಲೆ ದಾಳಿ ಮಾಡಿ ಸುಮಾರು 13 ಕೋಟಿ ರು. ಮೌಲ್ಯದ ಚರಾಸ್ತಿ ಪತ್ತೆ ಹಚ್ಚಿತ್ತು. ಈ ವೇಳೆ ರಾಜ್ಯದ ಅಬಕಾರಿ ಇಲಾಖೆಯ ಅಧಿಕಾರಿಗಳು ಸಿಂಡಿಕೇಟ್ ಮಾಡಿಕೊಂಡು ಭ್ರಷ್ಟಾಚಾರ ಎಸಗಿ ಮಾಸಿಕ ಲೆಕ್ಕದಲ್ಲಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದಾರೆ ಎಂದು ತಿಳಿಸಿತ್ತು.
ಲೋಕಾಯುಕ್ತರ ಸೂಚನೆ ಮೇರೆಗೆ ವಾರಂಟ್ ಪಡೆದು ಬೆಂಗಳೂರು ನಗರದ ಎಂಟು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸೇರಿ ಒಟ್ಟು 9 ಅಬಕಾರಿ ಡಿಸಿ ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ. ಬಾರ್ ಲೈಸೆನ್ಸ್ ಸಂಬಂಧ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಅಬಕಾರಿ ನಿಯಮ ಉಲ್ಲಂಘನೆಯಡಿ ಎಷ್ಟು ಪ್ರಕರಣ ದಾಖಲಿಸಿಕೊಂಡು ಎಷ್ಟು ದಂಡ ವಿಧಿಸಿದ್ದಾರೆ? ದಂಡ ಹಾಕಿದ ಬಳಿಕ ಪರವಾನಗಿ ನೀಡುವ ಪ್ರಕ್ರಿಯೆ ಹಾಗೂ ನವೀಕರಣ ಪ್ರಕ್ರಿಯೆಗಳನ್ನು ಯಾವ ರೀತಿ ಮಾಡಲಾಗಿದೆ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ. ಒಂದೊಂದು ಯುನಿಟ್ನಲ್ಲಿ ನೂರಾರು ಕೇಸ್ಗಳನ್ನು ಮಾಡಿದ್ದಾರೆ. ಅಲ್ಲದೆ ಹಲವು ಲೈಸೆನ್ಸ್ ರಿನೀವಲ್ ಮಾಡಿದ್ದಾರೆ. ಕೆಲವೆಡೆ ಮಧ್ಯವರ್ತಿಗಳ ಮೂಲಕ ಪರವಾಗಿ ಮಾಡಿಕೊಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಎಲ್ಲದರ ಬಗ್ಗೆ ಕೂಲಂಕಷವಾಗಿ ತಪಾಸಣೆ ಮಾಡಲಾಗುತ್ತಿದೆ. ಅಕ್ರಮ ಎಸಗಿರುವುದು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.